ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌: ರೋಹಿತ್‌ 27 ರನ್‌ ಗಳಿಸಿದರೆ ಸೃಷ್ಟಿಯಾಗಲಿದೆ ಹೊಸ ದಾಖಲೆ

ವಿಶ್ವಕಪ್‌ ಕ್ರಿಕೆಟ್‌
Last Updated 8 ಜುಲೈ 2019, 14:28 IST
ಅಕ್ಷರ ಗಾತ್ರ

ಮ್ಯಾನ್‌ಚೆಸ್ಟರ್‌: ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಟೀಂ ಇಂಡಿಯಾದ ಉಪ ನಾಯಕ ರೋಹಿತ್‌ ಶರ್ಮಾ, ಅಗ್ರ ಶ್ರಯಾಂಕಿತ ವಿರಾಟ್ ಕೊಹ್ಲಿ ಅವರನ್ನು ಹಿಂದಿಡುವ ಅವಕಾಶ ದಟ್ಟವಾಗಿದೆ. ಉತ್ತಮ ಫಾರ್ಮ್‌ನಲ್ಲಿರುವ ರೋಹಿತ್‌ ನ್ಯೂಜಿಲೆಂಡ್‌ ಎದುರಿನ ಪಂದ್ಯದಲ್ಲೂ ಮಿಂಚಿದರೆ ಮತ್ತೊಂದು ದಾಖಲೆ ನಿರ್ಮಾಣವಾಗಲಿದೆ.

ಶ್ರೀಲಂಕಾ ತಂಡದೆದುರು ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ರೌಂಡ್‌ರಾಬಿನ್‌ ಹಂತದ ಕೊನೆಯ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಭಾರತ ತಂಡದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಐದು ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ವಿಶ್ವಕಪ್‌ನಲ್ಲಿ ಅತ್ಯಧಿಕ ರನ್‌(647) ಪೇರಿಸಿದ ದಾಖಲೆಯನ್ನೂ ಇವರು ಹೊಂದಿದ್ದಾರೆ.

ಈ ಬಾರಿ ವಿಶ್ವಕಪ್‌ನಲ್ಲಿ ರೋಹಿತ್‌ ಶ್ರೀಲಂಕಾ ಎದುರು 103, ದಕ್ಷಿಣ ಆಫ್ರಿಕಾ(122), ಪಾಕಿಸ್ತಾನ(140, ಇಂಗ್ಲೆಂಡ್‌(102) ಬಾಂಗ್ಲಾದೇಶ(104) ತಂಡಗಳ ವಿರುದ್ಧ ಶತಕ ದಾಖಲಿಸಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ 4 ಶತಕ ಬಾರಿಸಿ ದಾಖಲೆ ಬರೆದಿದ್ದರು.

ಮಂಗಳವಾರ ನ್ಯೂಜಿಲೆಂಡ್‌ ಎದುರಿನ ಪಂದ್ಯದಲ್ಲಿ ಇನ್ನಷ್ಟು ದಾಖಲೆಗಳನ್ನು ಸೃಷ್ಟಿಸಲು ಅಣಿಯಾಗಿದ್ದಾರೆ. ಈಗ ಎಲ್ಲರ ಗಮನ ಕೊಹ್ಲಿಯಿಂದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಕಡೆಗೆ ತಿರುಗಿದೆ. ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯಧಿಕ ರನ್‌ ಗಳಿಸಿರುವ ದಾಖಲೆ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದೆ. ಸಚಿನ್‌ 2003ರ ವಿಶ್ವಕಪ್‌ ಟೂರ್ನಿಯ 11 ಇನಿಂಗ್ಸ್‌ಗಳಲ್ಲಿ 673 ಕಲೆ ಹಾಕಿದ್ದರು. ಟೂರ್ನಿಯಲ್ಲಿ ಅವರು ದಾಖಲಿಸಿದ ಗರಿಷ್ಠ ಸ್ಕೋರ್‌ 152. ರೋಹಿತ್‌ 27 ರನ್‌ ಗಳಿಸಿದರೆ ಸಚಿನ್‌ ದಾಖಲೆಯನ್ನು ಹಿಂದಿಡಲಿದ್ದಾರೆ. ಈ ಮೂಲಕ ವಿಶ್ವಕಪ್‌ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆ ಹೊಂದಲಿದ್ದಾರೆ.

ಸಚಿನ್‌ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌ ಹೆಸರಿದೆ. ಅವರು 2007ರ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 659 ರನ್‌ ಗಳಿಸಿದ್ದರು.

ರೋಹಿತ್‌ ನ್ಯೂಜಿಲೆಂಡ್‌ ಎದುರು 53 ರನ್‌ ಗಳಿಸಿದರೆ, ವಿಶ್ವಕಪ್‌ನಲ್ಲಿ 700 ರನ್‌ ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ವಿಶ್ವಕಪ್‌ ಟೂರ್ನಿಯಲ್ಲಿ ಆರು ಶತಕ ಪೂರೈಸಿರುವ ಅವರು ಮತ್ತೊಂದು ಶತಕ ಸಿಡಿಸಿದರೆ, ಏಳು ಶತಕಗಳ ಸರದಾರನಾಗಿ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ.

ರೋಹಿತ್‌ ವಿಶ್ವಕಪ್‌ನಲ್ಲಿ ಇದುವರೆಗೆ ಒಟ್ಟು 16 ಇನಿಂಗ್ಸ್‌ಗಳನ್ನು ಆಡಿದ್ದು, 6 ಶತಕ ಬಾರಿಸಿದ್ದಾರೆ. ಸಚಿನ್‌ ಆರು ಶತಕಗಳಿಸಲು 44 ಇನಿಂಗ್ಸ್‌ ತೆಗೆದುಕೊಂಡಿದ್ದರು. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ 42 ಇನಿಂಗ್ಸ್‌ನಲ್ಲಿ 5 ಶತಕ ಹಾಗೂ ಶ್ರೀಲಂಕಾ ಆಟಗಾರ ಸಂಗಕ್ಕಾರ 35 ಇನಿಂಗ್ಸ್‌ಗಳಲ್ಲಿ 5 ಶತಕ ದಾಖಲಿಸಿದ್ದಾರೆ.

ಇನ್ನಷ್ಟು ದಾಖಲೆಗಳು...

* ವಿಶ್ವಕಪ್‌ ಟೂರ್ನಿಯ ಪಂದ್ಯಗಳಲ್ಲಿ 1000 ರನ್‌ ಪೂರೈಸಲು ರೋಹಿತ್‌ 23 ರನ್‌ ಗಳಿಸಬೇಕಿದೆ.

* ಈಗಾಗಲೇ ಹ್ಯಾಟ್ರಿಕ್‌ ಶತಕ ದಾಖಲೆ ಮಾಡಿರುವ ರೋಹಿತ್ ಶರ್ಮಾ ಮೊತ್ತೊಂದು ಶತಕ ಸಿಡಿಸಿದರೆ, ಸತತ ನಾಲ್ಕು ಶತಕ ಗಳಿಸಿದ ದಾಖಲೆಯನ್ನು ಸರಿಗಟ್ಟಲಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಕುಮಾರ ಸಂಗಕ್ಕಾರ ಸತತ ನಾಲ್ಕು ಶತಕ ಪೂರೈಸಿದ್ದರು.

* 2019ರಲ್ಲಿ ಏಕದಿನ ಪಂದ್ಯಗಳಲ್ಲಿ 1000 ರನ್‌ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ

ಏಕದಿನ ಕ್ರಿಕೆಟ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಆಟಗಾರರು

1. ವಿರಾಟ್‌ ಕೊಹ್ಲಿ(ಭಾರತ)– ಪಾಯಿಂಟ್ಸ್‌: 891
2. ರೋಹಿತ್‌ ಶರ್ಮಾ(ಭಾರತ)– ಪಾಯಿಂಟ್ಸ್‌: 885

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT