ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಪಂದ್ಯದಲ್ಲಿ ಎರಡು ದಾಖಲೆ| ವಿಶ್ವಕಪ್‌ನಲ್ಲಿ ರೋಹಿತ್‌ ದರ್ಬಾರ್

ವಿಶ್ವಕಪ್‌ 2019
Last Updated 6 ಜುಲೈ 2019, 18:01 IST
ಅಕ್ಷರ ಗಾತ್ರ

ಹೆಡಿಂಗ್ಲೆ, ಲೀಡ್ಸ್‌: ಶ್ರೀಲಂಕಾ ತಂಡದೆದುರು ಇಲ್ಲಿನಡೆಯುತ್ತಿರುವ ರೌಂಡ್‌ರಾಬಿನ್‌ ಹಂತದ ಕೊನೆಯ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಭಾರತ ತಂಡದ ಆರಂಭಿಕ ದಾಂಡಿಗ ರೋಹಿತ್‌ ಶರ್ಮಾ ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಹೆಚ್ಚು ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿದರು.

ಈ ಬಾರಿ ವಿಶ್ವಕಪ್‌ನಲ್ಲಿ ರೋಹಿತ್‌(103) ದಾಖಲಿಸಿದ ಐದನೇ ಶತಕವಿದು. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ(122), ಪಾಕಿಸ್ತಾನ(140, ಇಂಗ್ಲೆಂಡ್‌(102) ಬಾಂಗ್ಲಾದೇಶ(104) ತಂಡಗಳ ವಿರುದ್ಧ ಶತಕ ಬಾರಿಸಿದರು. 2015ರ ವಿಶ್ವಕಪ್‌ನಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ 4 ಶತಕ ಬಾರಿಸಿ ದಾಖಲೆ ಬರೆದಿದ್ದರು.

ವಿಶ್ವಕಪ್‌ನಲ್ಲಿ ರೋಹಿತ್‌ಗೆ ಆರನೇ ಶತಕ
ರೋಹಿತ್‌ ವಿಶ್ವಕಪ್‌ನಲ್ಲಿ ಇದುವರೆಗೆ ಒಟ್ಟು 16 ಇನಿಂಗ್ಸ್‌ಗಳನ್ನು ಆಡಿದ್ದು, 6 ಶತಕ ಬಾರಿಸಿದ್ದಾರೆ. ಆ ಮೂಲಕ ವಿಶ್ವಕಪ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್ ಅವರೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಸಚಿನ್‌ ಆರು ಶತಕಗಳಿಸಲು ಬರೋಬ್ಬರಿ 44 ಇನಿಂಗ್ಸ್‌ ತೆಗೆದುಕೊಂಡಿದ್ದರು. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌42 ಇನಿಂಗ್ಸ್‌ನಲ್ಲಿ 5 ಶತಕ ಹಾಗೂ ಶ್ರೀಲಂಕಾ ಆಟಗಾರ ಸಂಗಕ್ಕಾರ 35 ಇನಿಂಗ್ಸ್‌ಗಳಲ್ಲಿ 5 ಶತಕ ಬಾರಿಸಿದ್ದು, ನಂತರದ ಸ್ಥಾನದಲ್ಲಿದ್ದಾರೆ.

ಆರುನೂರರ ಗಡಿ ದಾಟಿದ ರೋಹಿತ್‌
ವಿಶ್ವಕಪ್ ಇತಿಹಾಸದಲ್ಲಿಒಂದೇ ಪಂದ್ಯಾವಳಿಯಲ್ಲಿ600ಕ್ಕೂ ಹೆಚ್ಚು ರನ್‌ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಶ್ರೇಯಕ್ಕೂ ರೋಹಿತ್‌ ಭಾಜನರಾದರು. ಇದಕ್ಕೂ ಮೊದಲು 2003ರಲ್ಲಿ ಸಚಿನ್ ತೆಂಡೂಲ್ಕರ್ 673 ರನ್‌, 2007ರಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ 659 ರನ್ ಕಲೆಹಾಕಿದ್ದರು. ಮಾತ್ರವಲ್ಲದೆ ಇದೇ ಟೂರ್ನಿಯಲ್ಲಿ ಬಾಂಗ್ಲಾದೇಶದ ಶಕೀಬ್‌ ಅಲ್ ಹಸನ್‌ 606ರನ್‌ ಕಲೆಹಾಕಿದ್ದರು.

ರೋಹಿತ್‌ ಈ ಬಾರಿ 92.42ರ ಬ್ಯಾಟಿಂಗ್‌ ಸರಾಸರಿಯೊಂದಿಗೆ ಎಂಟು ಇನಿಂಗ್ಸ್‌ಗಳಿಂದ ಒಟ್ಟು 647 ರನ್‌ ಕಲೆಹಾಕಿದ್ದು, ರನ್‌ಗಳಿಕೆ ಪಟ್ಟಿಯಲ್ಲಿಯೂ ಮೊದಲ ಸ್ಥಾನಕ್ಕೇರಿದರು. ಒಂದೇ ವಿಶ್ವಕಪ್‌ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಳ್ಳಲು ರೋಹಿತ್‌ಗೆ ಇನ್ನು ಕೇವಲ 26ರನ್‌ ಬೇಕಿದೆ.

ಪ್ರಸ್ತುತ ವಿಶ್ವಕಪ್‌ನ ರೌಂಡ್‌ ರಾಬಿನ್‌ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಭಾರತ, ಶ್ರೀಲಂಕಾ ತಂಡಕ್ಕೆ ಮುಖಾಮುಖಿಯಾಯಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 264ರನ್‌ಗಳ ಸವಾಲಿನ ಗುರಿ ಕಲೆಹಾಕಿತ್ತು.

ಈ ಮೊತ್ತ ಬೆನ್ನತ್ತಿದ ಭಾರತಕ್ಕೆ ರೋಹಿತ್‌–ರಾಹುಲ್‌ ಜೋಡಿ ಭದ್ರ ಬುನಾದಿ ಹಾಕಿಕೊಟ್ಟಿತು.ಶತಕ ಪೂರೈಸುತ್ತಿದ್ದಂತೆ ರೋಹಿತ್‌(103) ಹಾಗೂರಾಹುಲ್‌(103) ಇಬ್ಬರೂಔಟಾದರು. ನಾಲ್ಕನೇ ಕ್ರಮಾಕದ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌(4) ಬಿರುಸಿನ ಹೊಡೆತಕ್ಕೆ ಕೈ ಹಾಕಿ ದಂಡ ತೆತ್ತರು. ಉಳಿದಂತೆಕೊನೆಯಲ್ಲಿ ತಾಳ್ಮೆಯ ಆಟವಾಡಿದ ನಾಯಕ ವಿರಾಟ್‌ ಕೊಹ್ಲಿ 41 ಎಸೆತಗಳಲ್ಲಿ 34 ರನ್‌ಗಳಿಸಿ, ಹಾರ್ದಿಕ್‌ ಪಾಂಡ್ಯ(7) ಜೊತೆಗೆ ಗೆಲುವಿನ ಲೆಕ್ಕ ಚುಕ್ತಾ ಮಾಡಿದರು.

ಅಂತಿಮವಾಗಿ ಭಾರತ, 43.3 ಓವರ್‌ಗಳಲ್ಲಿಮೂರು ವಿಕೆಟ್‌ ನಷ್ಟಕ್ಕೆ265ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಭಾರತ ತಂಡದ ಆರಂಭಿಕ ಜೋಡಿ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 189ರನ್ ಕಲೆಹಾಕಿದರು. ಆ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ಗೆ ಅತಿಹೆಚ್ಚು ರನ್‌ ಜೊತೆಯಾಟವಾಡಿದ ಶ್ರೇಯಕ್ಕೆ ಭಾಜನವಾಯಿತು.

ಇದಕ್ಕೂ ಮುನ್ನ ಇದೇ ಜೋಡಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಮೊದಲ ವಿಕೆಟ್‌ಗೆ 180 ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT