ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಕೊಹ್ಲಿ ಬ್ಯಾಟಿಂಗ್ ಗುಣಮಟ್ಟ ಪ್ರಶ್ನಿಸಲಾಗದು: ರೋಹಿತ್ ಶರ್ಮಾ

Last Updated 11 ಜುಲೈ 2022, 10:41 IST
ಅಕ್ಷರ ಗಾತ್ರ

ನಾಟಿಂಗ್‌ಹ್ಯಾಮ್: ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಗುಣಮಟ್ಟವನ್ನು ಪ್ರಶ್ನಿಸಲಾಗದು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಈ ಮೂಲಕ, ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ಕಳಪೆ ಬ್ಯಾಟಿಂಗ್ ಅನ್ನು ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.

ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದ ಬಳಿಕ ವರದಿಗಾರರ ಜತೆ ಮಾತನಾಡಿದ ಅವರು, ‘ತಂಡದ ಒಳಗೆ ಏನಾಗುತ್ತಿದೆ ಎಂಬುದು ತಜ್ಞರಿಗೆ ತಿಳಿದಿರುವುದಿಲ್ಲ ಎಂದಿದ್ದಾರೆ.

‘ನಮಗಿದು ಕಷ್ಟವೇನಲ್ಲ. ಯಾಕೆಂದರೆ ಹೊರಗಡೆಯ ಸದ್ದು ನಮಗೆ ಕೇಳಿಸದು. ಈ ತಜ್ಞರು ಎಂಬುವವರು ಯಾರು, ಅವರನ್ನು ಯಾಕೆ ತಜ್ಞರೆಂದು ಕರೆಯುತ್ತಾರೆ ಎಂಬುದು ನನಗೆ ತಿಳಿದಿಲ್ಲ. ನನಗೆ ಅದು ಅರ್ಥವಾಗುತ್ತಿಲ್ಲ’ ಎಂದು ಹೇಳಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಕೊಹ್ಲಿ ಅವರ ದೀರ್ಘಕಾಲದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಟೀಕಿಸಿದ್ದರು.

ಪ್ರತಿಷ್ಠೆಯ ಆಧಾರದಲ್ಲಿ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಬಾರದು. ಪ್ರಸಕ್ತ ಸನ್ನಿವೇಶದಲ್ಲಿ ಅವರ ಫಾರ್ಮ್ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಬೇಕು ಎಂದು ಕಪಿಲ್ ದೇವ್ ಹೇಳಿದ್ದರು. ಕೊಹ್ಲಿಗೆ ಮೂರು ತಿಂಗಳು ವಿಶ್ರಾಂತಿ ನೀಡುವ ಅಗತ್ಯವಿದೆ ಎಂದು ವಾನ್ ಹೇಳಿದ್ದರು.

2019ರ ನವೆಂಬರ್ ಬಳಿಕ ಕ್ರಿಕೆಟ್‌ನ ಯಾವುದೇ ಮಾದರಿಯಲ್ಲಿಯೂ ಕೊಹ್ಲಿ ಒಂದೇ ಒಂದು ಶತಕ ದಾಖಲಿಸಿಲ್ಲ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿಲ್ಲ.

ಕೊಹ್ಲಿ ಫಾರ್ಮ್ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಮಧ್ಯೆಯೇ ಐದು ತಿಂಗಳ ಬಳಿಕ ಅವರು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಲು ತಂಡಕ್ಕೆ ಮರಳಿದ್ದರು.

ಕೊಹ್ಲಿ ಅನುಪಸ್ಥಿತಿಯಲ್ಲಿ ದೀಪಕ್ ಹೂಡಾ ಅವರಿಗೆ ತಂಡದಲ್ಲಿ ಸ್ಥಾನ ದೊರೆತಿತ್ತು. ಆದರೆ ಐರ್ಲೆಂಡ್ ವಿರುದ್ಧ ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯ ಬಿಟ್ಟರೆ ಉಳಿದಂತೆ ಹೂಡಾ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ದೊರೆತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT