ಶನಿವಾರ, ಅಕ್ಟೋಬರ್ 31, 2020
22 °C
ರೋಹಿತ್–ಸೂರ್ಯಕುಮಾರ್ ಉತ್ತಮ ಜೊತೆಯಾಟ

IPL-2020 | ಚಾಂಪಿಯನ್‌ ಮುಂಬೈಗೆ ಮೊದಲ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ಮೊದಲ ಪಂದ್ಯದಲ್ಲಿ ಸೋತು ನಿರಾಸೆಗೆ ಒಳಗಾಗಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದವರು ಎರಡನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದರು. ಶೇಖ್ ಝಯೀದ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮುಂಬೈ ಇಂಡಿಯನ್ಸ್‌ 49 ರನ್‌ಗಳಿಂದ ಮಣಿಸಿತು.

‌ನಾಯಕ, ‘ಹಿಟ್‌ಮ್ಯಾನ್‌’ ರೋಹಿತ್ ಶರ್ಮಾ (80; 54 ಎಸೆತ, 3 ಬೌಂಡರಿ, 6 ಸಿಕ್ಸರ್) ಮತ್ತು ಸೂರ್ಯಕುಮಾರ್ ಯಾದವ್ (47; 28ಎ, 6ಬೌಂ, 1ಸಿ) ನಡುವಿನ 90 ರನ್‌ಗಳ ಜೊತೆಯಾಟ ಹಾಗೂ ವೇಗಿಗಳ ಪ್ರಬಲ ದಾಳಿ ತಂಡಕ್ಕೆ ಜಯ ತಂದುಕೊಟ್ಟಿತು.

196 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ದಿನೇಶ್ ಕಾರ್ತಿಕ್‌ ಬಳಗ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದು ಕೊಂಡು 146 ರನ್ ಗಳಿಸಿತು. 30 ರನ್ (23 ಎಸೆತ) ಗಳಿಸಿದ ದಿನೇಶ್ ಕಾರ್ತಿಕ್ ಮತ್ತು 12 ಎಸೆತಗಳಲ್ಲಿ ನಾಲ್ಕು ಭರ್ಜರಿ ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ 33 ರನ್ ಗಳಿಸಿದ ಪ್ಯಾಟ್ ಕಮಿನ್ಸ್ ಅವರನ್ನು ಹೊರತುಪಡಿಸಿದರೆ ಉಳಿದ ಎಲ್ಲರೂ ಮುಂಬೈ ತಂಡದ ದಾಳಿಗೆ ನಿರುತ್ತರರಾದರು.  

ಟಾಸ್ ಗೆದ್ದ ಕೋಲ್ಕತ್ತ ತಂಡದ ನಾಯಕ ಫೀಲ್ಡಿಂಗ್ ಅಯ್ಕೆ ಮಾಡಿ ಕೊಂಡರು. ಆದರೆ ಅವರ ಲೆಕ್ಕಾಚಾರವನ್ನು ಎದುರಾಳಿ ತಂಡದ ನಾಯಕ ರೋಹಿತ್ ಬುಡಮೇಲು ಮಾಡಿದರು. ಕ್ವಿಂಟನ್ ಡಿ ಕಾಕ್ ಮೊದಲ ಓವರ್‌ ನಲ್ಲೇ  ವಿಕೆಟ್ ಕಳೆದುಕೊಂಡರು. ಆದರೆ ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಸುಂದರ ಇನಿಂಗ್ಸ್‌ ಕಟ್ಟಿದರು. 

ಅಮೋಘ ಆಟದ ಸವಿ ಉಣ ಬಡಿಸಿದ ರೋಹಿತ್  39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರು ಹೊಡೆದ ಸಿಕ್ಸರ್‌ಗಳು ಖಾಲಿ ಗ್ಯಾಲರಿಗಳ ಛಾವಣಿ ದಾಟಿದವು. ಸೌರಭ್ ತಿವಾರಿ (21; 13ಎ) ಕೂಡ ತಮ್ಮ ಬಿರುಸಿನ ಆಟದ ಮೂಲಕ ಅಲ್ಪಕಾಣಿಕೆ ನೀಡಿ ದರು. ಇದರಿಂದಾಗಿ ತಂಡವು 200 ರನ್‌ ಗಳಿಸುವ ನಿರೀಕ್ಷೆ ಮೂಡಿತ್ತು. ಆದರೆ, 18ನೇ ಓವರ್‌ನಲ್ಲಿ ರೋಹಿತ್ ಔಟಾಗಿದ್ದರಿಂದ ಇದು ಸಾಧ್ಯವಾಗಲಿಲ್ಲ.

ಐಪಿಎಲ್‌ನಲ್ಲಿ 150ನೇ ಪಂದ್ಯ ಆಡಿದ ಕೀರನ್ ಪೊಲಾರ್ಡ್ ಔಟಾಗದೆ 13 ರನ್‌ ಗಳಿಸಿದರು. ಕೆಕೆಆರ್ ತಂಡದ ‘ದುಬಾರಿ’ ಆಟಗಾರ ಪ್ಯಾಟ್ ಕಮಿನ್ಸ್‌ ಮೂರು ಓವರ್‌ಗಳಲ್ಲಿ 49 ರನ್‌ ಕೊಟ್ಟು ತುಟ್ಟಿಯಾದರು.

ರೋಹಿತ್ ಸಿಕ್ಸರ್‌ ದ್ವಿಶತಕ
ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಎದುರು ಅರ್ಧಡಜನ್ ಸಿಕ್ಸರ್‌ಗಳನ್ನು ಸಿಡಿಸಿದ ರೋಹಿತ್ ಶತಕ ‘ದ್ವಿಶತಕ’ದ ದಾಖಲೆ ಮಾಡಿದರು. ಈ ಟೂರ್ನಿಗೂ ಮುನ್ನ ಅವರ ಖಾತೆಯಲ್ಲಿ 194 ಸಿಕ್ಸರ್‌ಗಳು ಇದ್ದವು. ಚೆನ್ನೈ ಸೂಪರ್ ಕಿಂಗ್ಸ್ ಎದುಗಿನ ಪಂದ್ಯದಲ್ಲಿ ಅವರು ಸಿಕ್ಸರ್‌ ಬಾರಿಸಿರಲಿಲ್ಲ. 200 ಸಿಕ್ಸರ್‌ಗಳನ್ನು ಗಳಿಸಿದ ಐಪಿಎಲ್‌ನ ನಾಲ್ಕನೇ ಆಟಗಾರನಾಗಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು