ಸೋಮವಾರ, ಡಿಸೆಂಬರ್ 6, 2021
24 °C
ನ್ಯೂಜಿಲೆಂಡ್ ಎದುರಿನ ಸರಣಿಗೆ ಕೆ.ಎಲ್. ರಾಹುಲ್ ಉಪನಾಯಕ; ಕೊಹ್ಲಿ, ಜಸ್‌ಪ್ರೀತ್ ಬೂಮ್ರಾಗೆ ವಿಶ್ರಾಂತಿ

Repeated ಟಿ20 ಕ್ರಿಕೆಟ್‌: ರೋಹಿತ್ ನಾಯಕತ್ವದ ಇನಿಂಗ್ಸ್‌ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ನಿರೀಕ್ಷೆಯಂತೆಯೇ ಭಾರತ ಟಿ20 ಕ್ರಿಕೆಟ್ ತಂಡದ ನಾಯಕರಾಗಿ ’ಹಿಟ್‌ಮ್ಯಾನ್‘ ಖ್ಯಾತಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ.

ಇದೇ 17 ರಿಂದ ಭಾರತದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ.

ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಂತರ ವಿರಾಟ್ ಕೊಹ್ಲಿ ಭಾರತ ಟಿ20 ತಂಡದ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ. ಈ ಕುರಿತು ಅವರು ಟೂರ್ನಿಗೂ ಮುನ್ನವೇ ಘೋಷಿಸಿದ್ದರು. ಕಿವೀಸ್ ಎದುರಿನ ಟಿ20 ಸರಣಿಯಿಂದ ವಿರಾಟ್ ವಿಶ್ರಾಂತಿ ಪಡೆದಿದ್ದಾರೆ.

ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ರವೀಂದ್ರ ಜಡೇಜ ಅವರಿಗೂ ವಿಶ್ರಾಂತಿ ನೀಡಲಾಗಿದೆ.  ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈಚೆಗೆ ಐಪಿಎಲ್‌ನಲ್ಲಿ ಮಿಂಚಿದ್ದ ಯುವ ಆಟಗಾರರಾದ ಋತುರಾಜ್ ಗಾಯಕವಾಡ್, ಹರ್ಷಲ್ ಪಟೇಲ್, ವೆಂಕಟೇಶ್ ಅಯ್ಯರ್  ಅವರನ್ನು 16  ಆಟಗಾರರ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅನುಭವಿ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ತಂಡಕ್ಕೆ ಮರಳಿದ್ದಾರೆ. ಮುಂಬೈ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಕೂಡ ಅವಕಾಶ ಗಿಟ್ಟಿಸಿದ್ದಾರೆ.

’ರೋಹಿತ್ ವಿಶ್ರಾಂತಿ ಪಡೆದರೆ ರಾಹುಲ್ ತಂಡವನ್ನು ಹಂಗಾಮಿ ನಾಯಕನಾಗಿ ಮುನ್ನಡೆಸುವರು. ವಿರಾಟ್ ಕೊಹ್ಲಿಯವರನ್ನು ಏಕದಿನ ಕ್ರಿಕಟ್ ತಂಡದ ನಾಯಕರನ್ನಾಗಿ ಉಳಿಸಿಕೊಳ್ಳುವುದು ಅನುಮಾನವಾಗಿದೆ. ಮಂಡಳಿಯು ಈ ಕುರಿತು ಗಂಭೀರವಾಗಿ ಚಿಂತನೆ ನಡೆಸುತ್ತಿದೆ‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಋತುರಾಜ್ ಗಾಯಕವಾಡ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ಅಕ್ಷರ್ ಪಟೇಲ್,  ಆವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.