ಮಂಗಳವಾರ, ಮಾರ್ಚ್ 2, 2021
23 °C
ಇಂಗ್ಲೆಂಡ್ ಮರುಹೋರಾಟ; ಲಸಿತ್‌ಗೆ ಏಳು ವಿಕೆಟ್‌

ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್ ಪಂದ್ಯ: ರೂಟ್‌ ಕೈತ‍ಪ್ಪಿದ ದ್ವಿಶತಕ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಗಾಲ್: ದಿನದಾಟದ ಕೊನೆಯ ಓವರ್‌ನಲ್ಲಿ ರನ್ ಔಟ್ ಆದ ನಾಯಕ ಜೋ ರೂಟ್ ದ್ವಿಶತಕದಿಂದ ವಂಚಿತರಾದರು. ಆದರೂ ಅಮೋಘ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ತಂಡವನ್ನು ಅ‍ಪಾಯದಿಂದ ಪಾರುಮಾಡುವಲ್ಲಿ ಯಶಸ್ವಿಯಾದರು. ಜೋಸ್ ಬಟ್ಲರ್‌ (55; 95 ಎ, 7 ಬೌಂ) ಜೊತೆ 97 ಮತ್ತು ಡಾಮ್‌ ಬೆಸ್ ಜೊತೆ 81 ರನ್‌ಗಳ ಜೊತೆಯಾಟ ಆಡಿದ ರೂಟ್ (186; 309 ಎಸೆತ, 18 ಬೌಂಡರಿ) ಬ್ಯಾಟಿಂಗ್ ಬಲದಿಂದ ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಚೇತರಿಸಿಕೊಂಡಿತು.

ಶ್ರೀಲಂಕಾದ ಮೊದಲ ಇನಿಂಗ್ಸ್ ಮೊತ್ತವಾದ 381 ರನ್‌ಗಳಿಗೆ ಉತ್ತರವಾಗಿ ಮೂರನೇ ದಿನದಾಟದ ಮುಕ್ತಾಯಕ್ಕೆ ಇಂಗ್ಲೆಂಡ್ ಒಂಬತ್ತು ವಿಕೆಟ್‌ಗಳಿಗೆ 339 ರನ್ ಗಳಿಸಿದ್ದು 42 ರನ್‌ಗಳ ಹಿನ್ನಡೆಯಲ್ಲಿದೆ. 99ನೇ ಟೆಸ್ಟ್ ಪಂದ್ಯ ಆಡುತ್ತಿರುವ ರೂಟ್‌ ಎರಡನೇ ದಿನವಾದ ಶನಿವಾರ 67 ರನ್ ಗಳಿಸಿದ್ದರು. ಭಾನುವಾರ ಭೋಜನ ವಿರಾಮಕ್ಕೂ ಮೊದಲು 19ನೇ ಶತಕ ಪೂರೈಸಿದರು. ಸತತ ಎರಡನೇ ದ್ವಿಶತಕ ಗಳಿಸುವ ಭರವಸೆ ಮೂಡಿಸಿದ್ದರು. ಆದರೆ ಒಶಾಡ ಫರ್ನಾಂಡೊ ಅವರ ನೇರ ಎಸೆತದಿಂದ ರನ್ ಔಟ್‌ ಆಗಿ ಮರಳಿದರು. ಅಲ್ಲಿಗೆ ದಿನದಾಟವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು. ಖಾತೆ ತೆರೆಯದ ಜಾಕ್ ಲೀಚ್ ಕ್ರೀಸ್‌ನಲ್ಲಿದ್ದರು.

ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ದೇನಿಯಾ ಅವರು ಜೋ ರೂಟ್ ಮತ್ತು ಡಾಮ್‌ ಬೆಸ್ ನಡುವಿನ ಜೊತೆಯಾಟವನ್ನು ಮುರಿದು ಆತಿಥೇಯರ ಪಾಳಯದಲ್ಲಿ ಭರವಸೆ ಮೂಡಿಸಿದರು. ಅವರು ಒಟ್ಟು ಏಳು ವಿಕೆಟ್ ಉರುಳಿಸಿ ಮಿಂಚಿದರು. ಈ ಮೂಲಕ ಮೂರನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಬಟ್ಲರ್‌ ವಿಕೆಟ್ ಪಡೆಯುವುದರೊಂದಿಗೆ ರಮೇಶ್ ಮೆಂಡಿಸ್ ಚೊಚ್ಚಲ ವಿಕೆಟ್ ಗಳಿಸಿದರು. 

ದಿನದಾಟದ ಮೊದಲ ಅವಧಿಯಲ್ಲಿ ಎಂಬುಲ್ದೇನಿಯಾ ಅವರು ಜಾನಿ ಬೇಸ್ಟೊ ವಿಕೆಟ್ ಸೇರಿದಂತೆ ಎರಡು ವಿಕೆಟ್ ಉರುಳಿಸಿದರು. ಈ ಮೂಲಕ ಬೇಸ್ಟೊ ಮತ್ತು ರೂಟ್ ನಡುವಿನ 111 ರನ್‌ಗಳ ಜೊತೆಯಾಟಕ್ಕೆ ತೆರೆ ಬಿತ್ತು. ಬೇಸ್ಟೊ ಶನಿವಾರದ ಮೊತ್ತಕ್ಕೆ ಕೇವಲ ನಾಲ್ಕು ರನ್ ಸೇರಿಸಿ ಮರಳಿದರು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಶ್ರೀಲಂಕಾ: 139.3 ಓವರ್‌ಗಳಲ್ಲಿ 381; ಇಂಗ್ಲೆಂಡ್‌: (ಶನಿವಾರ 30 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 98): 114.2 ಓವರ್‌ಗಳಲ್ಲಿ 9ಕ್ಕೆ 339 (ಜಾನಿ ಬೇಸ್ಟೊ 28, ಜೋ ರೂಟ್ 186, ಜೋಸ್ ಬಟ್ಲರ್ 55, ಡಾಮ್ ಬೆಸ್‌ 32; ಲಸಿತ್ ಎಂಬುಲ್ಡೇನಿಯಾ 132ಕ್ಕೆ7, ರಮೇಶ್ ಮೆಂಡಿಸ್ 48ಕ್ಕೆ1).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು