ಸೋಮವಾರ, ಡಿಸೆಂಬರ್ 6, 2021
24 °C
ಜೇಸನ್‌, ಕೇನ್‌ ಉತ್ತಮ ಜೊತೆಯಾಟ; ದೇವದತ್ತ ಪಡಿಕ್ಕಲ್‌, ಗ್ಲೆನ್ ಮ್ಯಾಕ್ಸ್‌ವೆಲ್ ಹೋರಾಟಕ್ಕೆ ಒಲಿಯದ ಗೆಲುವು

DNP- ಸನ್‌ರೈಸರ್ಸ್‌ಗೆ ಮಣಿದ ಆರ್‌ಸಿಬಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ಕೊನೆಯ ಎಸೆತದ ವರೆಗೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಣಿಯಿತು. ಶೇಕ್‌ ಜಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ನಾಲ್ಕು ರನ್‌ಗಳ ರೋಚಕ ಜಯ ಸಾಧಿಸಿತು. ಇದು, ತಂಡಕ್ಕೆ 13 ಪಂದ್ಯಗಳಲ್ಲಿ ಒಲಿದ ಮೂರನೇ ಜಯವಾಗಿದೆ. 

142 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಬೆಂಗಳೂರು 20 ಓವರ್‌ಗಳಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು 137 ರನ್ ಗಳಿಸಿತು. ದೇವದತ್ತ ಪಡಿಕ್ಕಲ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್‌ಗೆ ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿದರು. ನಾಲ್ಕನೇ ಓವರ್‌ನಲ್ಲಿ ಡ್ಯಾನಿಯಲ್ ಕ್ರಿಸ್ಟಿಯನ್ ಕೂಡ ಔಟಾದರು. ಶ್ರೀಕರ್ ಭರತ್ ಕೂಡ ಮರಳಿದಾಗ ತಂಡ ಮೂರು ವಿಕೆಟ್‌ಗಳಿಗೆ 38 ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿತು.

ಈ ಸಂದರ್ಭದಲ್ಲಿ ಪಡಿಕ್ಕಲ್ ಜೊತೆಗೂಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಇನಿಂಗ್ಸ್ ಕಟ್ಟಿದರು. ಇಬ್ಬರೂ ಅರ್ಧಶತಕದ ಜೊತೆಯಾಟವಾಡಿದರು. ಹ್ಯಾಟ್ರಿಕ್ ಅರ್ಧಶತಕ ಗಳಿಸಿ ಬೆಂಗಳೂರು ತಂಡವನ್ನು ಪ್ಲೇ ಆಫ್‌ ಹಂತಕ್ಕೇರಿಸಿದ್ದ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ತಂಡಕ್ಕೆ ಆಸರೆಯಾಗುವ ಭರವಸೆ ಮೂಡಿಸಿದರು. ಆದರೆ ಕೇನ್ ವಿಲಿಯಮ್ಸನ್ ಅವರ ಮಿಂಚಿನ ಫೀಲ್ಡಿಂಗ್‌ನಿಂದಾಗಿ ಮ್ಯಾಕ್ಸ್‌ವೆಲ್ ರನೌಟ್ ಆದರು. ಈ ಹಂತದಲ್ಲಿ ಒತ್ತಡ ಹೇರಲು ಆರಂಭಿಸಿದ ಸನ್‌ರೈಸರ್ಸ್‌ ಭರವಸೆ ಕೈಚೆಲ್ಲಲಿಲ್ಲ. ದೇವದತ್ತ ಔಟಾದ ನಂತರ ಎಬಿ ಡಿವಿಲಿಯರ್ಸ್ ಮತ್ತು ಶಹಬಾಜ್‌ ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಭುವನೇಶ್ವರ್ ಹಾಕಿದ ಕೊನೆಯ ಓವರ್‌ನಲ್ಲಿ ಒಂದು ಸಿಕ್ಸರ್ ಸಿಡಿಸಿ ನಿರೀಕ್ಷೆ ಮೂಡಿಸಿದ್ದ ಡಿವಿಲಿಯರ್ಸ್‌ ಕೊನೆಯ ಎಸೆತದಲ್ಲಿ ಬೇಕಾಗಿದ್ದ ‘ಸಿಕ್ಸರ್‌’ ಸಿಡಿಸಲು ವಿಫಲರಾದರು.

ಹೈದರಾಬಾದ್‌ಗೆ ಜೇಸನ್, ಕೇನ್‌ ಆಸರೆ

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು 141 ರನ್‌ಗಳಿಗೆ ನಿಯಂತ್ರಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್‌ಗಳು ಯಶಸ್ವಿಯಾದರು. ಜೇಸನ್ ರಾಯ್ ಜೊತೆ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ತಲಾ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿದರು. ಆದರೆ ತಂಡದ ಮೊತ್ತ 14 ರನ್ ಆಗುವಷ್ಟರಲ್ಲಿ ಅವರು ಔಟಾದರು. ಜೇಸನ್ ರಾಯ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಭರ್ಜರಿ ಜೊತೆಯಾಟ ಆಡಿ ಎರಡನೇ ವಿಕೆಟ್‌ಗೆ 70 ರನ್ ಸೇರಿಸಿದರು.

ಕೇನ್ ಔಟಾದ ನಂತರ ತಂಡ ದಿಢೀರ್ ಕುಸಿತ ಕಂಡಿತು. 15ನೇ ಓವರ್‌ನಲ್ಲಿ ಜೇಸನ್ ರಾಯ್ ಅವರ ಪ್ರತಿರೋಧವೂ ಅಂತ್ಯಗೊಂಡಿತು. ಅರ್ಧಶತಕದತ್ತ ಹೆಜ್ಜೆ ಹಾಕಿದ್ದ ಅವರು ಡ್ಯಾನಿಯಲ್ ಕ್ರಿಸ್ಟಿಯನ್‌ಗೆ ರಿಟರ್ನ್ ಕ್ಯಾಚ್ ನೀಡಿ ಮರಳಿದರು. ನಂತರ ಯಾರಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಆಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.