ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ ಚಾಲೆಂಜರ್‌ ಸೋಲಿನ ‘ಸಿಕ್ಸರ್’

ಕಳಪೆ ಫೀಲ್ಡಿಂಗ್‌ಗೆ ದಂಡ ತೆತ್ತ ಆತಿಥೇಯರು
Last Updated 7 ಏಪ್ರಿಲ್ 2019, 17:22 IST
ಅಕ್ಷರ ಗಾತ್ರ

ಬೆಂಗಳೂರು: ಯುಗಾದಿ ಹಬ್ಬದೊಂದಿಗೆ ಸಂವತ್ಸರವೇ ಬದಲಾದರೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ‘ಹಣೆಬರಹ’ ಮಾತ್ರ ಬದಲಾಗಲಿಲ್ಲ. ಸೋಲಿನ ಸರಪಳಿ ತುಂಡಾಗಲಿಲ್ಲ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಆರ್‌ಸಿಬಿಯು ನಾಲ್ಕು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೋತಿತು. ಇದರೊಂದಿಗೆ ಟೂರ್ನಿಯಲ್ಲಿ ಸತತ ಆರನೇ ಸೋಲಿಗೆ ಶರಣಾಯಿತು. ಇದರೊಂದಿಗೆ ಪ್ಲೇ ಆಫ್‌ ಹಾದಿಯು ಮತ್ತಷ್ಟು ಕಠಿಣವಾಯಿತು.

ಕಗಿಸೊ ರಬಾಡ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿದ್ದರಿಂದ ಆತಿಥೇಯ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 149 ರನ್‌ ಗಳಿಸಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು ಶ್ರೇಯಸ್ ಅಯ್ಯರ್ (67; 50ಎಸೆತ, 8ಬೌಂಡರಿ, 2ಸಿಕ್ಸರ್) ಬ್ಯಾಟಿಂಗ್ ನೆರವಿನಿಂದ 18.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 152 ರನ್‌ ಗಳಿಸಿತು.

ಕೊಹ್ಲಿ ತಾಳ್ಮೆ, ಕಗಿಸೊ ಶಿಸ್ತು: ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಸಿರು ಪೋಷಾಕಿನಲ್ಲಿ ಕಣಕ್ಕಿಳಿದ ಆರ್‌ಸಿಬಿ ತಂಡಕ್ಕೆ ರನ್‌ಗಳ ಮಳೆ ಸುರಿಸಲು ಸಾಧ್ಯವಾಗಲಿಲ್ಲ. ನಾಯಕ ವಿರಾಟ್ ಕೊಹ್ಲಿಯ (41;33ಎ, 1ಬೌಂಡರಿ, 2 ಸಿಕ್ಸರ್) ತಾಳ್ಮೆಯ ಬ್ಯಾಟಿಂಗ್‌ ಮತ್ತು ಮೋಯಿನ್ ಅಲಿ (32; 18ಎ, 1ಬೌಂ, 3ಸಿ)ಯ ಚುರುಕಾದ ಹೊಡೆತಗಳ ಆಟ ಮಾತ್ರ ತಂಡದ ಬ್ಯಾಟಿಂಗ್ ಹೈಲೈಟ್. ಉಳಿದ ಬ್ಯಾಟ್ಸ್‌ಮನ್‌ಗಳಿಂದ ದೊಡ್ಡ ಕಾಣಿಕೆ ಬರಲಿಲ್ಲ. ಹೆಚ್ಚು ರನ್‌ಗಳ ಜೊತೆಯಾಟವೂ ದಾಖಲಾಗಲಿಲ್ಲ. ವಿರಾಟ್ ಮಾತ್ರ ತಮ್ಮ ನೈಜ ಆಟವನ್ನು ನಿಯಂತ್ರಿಸಿಕೊಂಡು ಆಡಿದರು. 17ನೇ ಓವರ್‌ನಲ್ಲಿ ಅವರು ಸಂದೀಪ್ ಲಮಿಚಾನೆ ಎಸೆತಗಳಲ್ಲಿ ಎರಡು ಸಿಕ್ಸರ್‌ ಹೊಡೆದು ತಂಡದ ಮೊತ್ತ ಹೆಚ್ಚಿಸುವ ಭರವಸೆ ಮೂಡಿಸಿದ್ದರು.

ಆದರೆ, 18ನೇ ಓವರ್‌ನಲ್ಲಿ ತಮ್ಮ ಎರಡನೇ ಸ್ಪೆಲ್ ಬೌಲಿಂಗ್ ಮಾಡಲು ಬಂದ ಕಗಿಸೊ ರಬಾಡ ಮೊದಲ ಎಸೆತದಲ್ಲಿ ವಿರಾಟ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಅದೇ ಓವರ್‌ನಲ್ಲಿ ಅಕ್ಷದೀಪ್ ನಾಥ್ (19 ರನ್) ಮತ್ತು ಪವನ್ ನೇಗಿ ಅವರ ವಿಕೆಟ್‌ಗಳನ್ನೂ ಕಬಳಿಸಿದರು.

ಹೋದ ವಾರ ಕೆಕೆಆರ್ ತಂಡದ ಎದುರಿನ ಸೂಪರ್‌ ಓವರ್‌ನಲ್ಲಿ ಮಿಂಚಿದ್ದ ರಬಾಡ ಇಲ್ಲಿಯೂ ತಮ್ಮ ತಂಡದ ಗೆಲುವಿಗೆ ಕಾರಣರಾದರು. ಪಂದ್ಯಶ್ರೇಷ್ಠ ಗೌರವ ಗಳಿಸಿದರು.

ಒಂದೇ ಓವರ್‌ನಲ್ಲಿ ಐದು ಬೌಂಡರಿ: ಗುರಿ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಇನಿಂಗ್ಸ್‌ನ ಮೂರನೇ ಎಸೆತದಲ್ಲಿಯೇ ಆಘಾತವಾಗಿತ್ತು. ಶಿಖರ್ ಧವನ್ ದೊಡ್ಡ ಹೊಡೆತ ಆಡಲು ಹೋಗಿ ಟಿಮ್‌ ಸೌಥಿಗೆ ವಿಕೆಟ್ ಒಪ್ಪಿಸಿದರು. ಆದರೆ ಮುಂದಿನ ಹಂತದಲ್ಲಿ ಆರ್‌ಸಿಬಿಯ ಬೌಲಿಂಗ್ ಮತ್ತು ಫೀಲ್ಡಿಂಗ್ ಎರಡೂ ಕೈಕೊಟ್ಟವು. ಅದೇ ಓವರ್‌ನಲ್ಲಿ ಕೊನೆಯ ಎಸೆತದಲ್ಲಿ ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ಕೈಚೆಲ್ಲಿದ ಕ್ಯಾಚ್‌ನಿಂದಾಗಿ ಜೀವದಾನ ಪಡೆದ ಶ್ರೇಯಸ್ ಅಯ್ಯರ್ ಅರ್ಧಶತಕ ಹೊಡೆದರು.

ಮೂರನೇ ಓವರ್‌ನಲ್ಲಿ ಪೃಥ್ವಿ ಶಾ ಅಬ್ಬರಿಸಿದರು. ನವದೀಪ್ ಸೈನಿ ಹಾಕಿದ ಈ ಓವರ್‌ನ ಮೊದಲ ನಾಲ್ಕು ಎಸೆತ
ಗಳನ್ನೂ ಅವರು ಬೌಂಡರಿಗೆ ಕಳಿಸಿದರು. ಐದನೇ ಎಸೆತದಲ್ಲಿ ಲೆಗ್‌ಬೈ ಬೌಂಡರಿ ಲಭಿಸಿತು. ಇಬ್ಬರೂ ಸೇರಿ ಎರಡನೇ ವಿಕೆಟ್‌ಗೆ 68 ರನ್‌ ಸೇರಿಸಿದರು.

ಶ್ರೇಯಸ್ ಜೊತೆಗೂಡಿದ ಕಾಲಿನ್ ಇಂಗ್ರಾಮ್ (22 ರನ್) ಕೂಡ ಮಿಂಚಿದರು. ಇದರಿಂದಾಗಿ ತಂಡವು ಗೆಲುವಿನತ್ತ ಸಾಗಿತು. ಆದರೆ, ಆರ್‌ಸಿಬಿಯ ಫೀಲ್ಡಿಂಗ್‌ ಲೋಪಗಳೂ ಮುಂದುವರಿದವು.

ಡೆಲ್ಲಿಗೆ ಗೆಲ್ಲಲು ಐದು ರನ್‌ಗಳ ಅಗತ್ಯವಿದ್ದಾಗ ಆರ್‌ಸಿಬಿ ಬೌಲರ್‌ಗಳು ಮಿಂಚಿದರು. ಮಧ್ಯಮವೇಗಿ ನವದೀಪ್ ಸೈನಿ ಅವರು ತಮ್ಮ ಒಂದೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಮತ್ತು ಕ್ರಿಸ್ ಮಾರಿಸ್ ವಿಕೆಟ್ ಗಳಿಸಿದರು. ನಂತರದ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರು ರಿಷಭ್ ಪಂತ್ ವಿಕೆಟ್ ಪಡೆದರು. ಆದರೆ ಇದರಿಂದ ಆರ್‌ಸಿಬಿಗೆ ಜಯ ಗಳಿಸಲು ಸಾಧ್ಯವಾಗಲಿಲ್ಲ. ‘ಈಗ ಮಾಡಿದ್ದನ್ನೇ ಇನಿಂಗ್ಸ್‌ನ ಆರಂಭದಲ್ಲಿಯೇ ಮಾಡಿದ್ದರೆ ಚೆನ್ನಾಗಿತ್ತು’ ಎಂಬ ಭಾವ ಸೂಸುತ್ತಿದ್ದ ಕೊಹ್ಲಿಯ ನಗುವನ್ನು ನೋಡುತ್ತ ಪ್ರೇಕ್ಷಕರು ಗ್ಯಾಲರಿ ಖಾಲಿ ಮಾಡಿದರು.

ಹಸಿರುಡುಗೆಯಲ್ಲಿ ಆಡಿದ ಆರ್‌ಸಿಬಿ

ಪರಿಸರ ಜಾಗೃತಿಯ ಅಂಗವಾಗಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದಲ್ಲಿ ಹಸಿರು ಪೋಷಾಕು ತೊಟ್ಟು ಆಡಿದರು.

ಪ್ರತಿವರ್ಷವೂ ಆರ್‌ಸಿಬಿ ತಂಡವು ತನ್ನ ತವರಿನ ಅಂಗಳದಲ್ಲಿ ನಡೆಯುವ ಒಂದು ಪಂದ್ಯದಲ್ಲಿ ಹಸಿರು ಪೋಷಾಕು ಧರಿಸಿ ಆಡುತ್ತದೆ. ಪಂದ್ಯದ ಟಾಸ್‌ ಸಂದರ್ಭದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಪರಸ್ಪರ ಸಸಿಗಳನ್ನು ವಿನಿಮಯ ಮಾಡಿಕೊಂಡರು. ಟೀಶರ್ಟ್ ಮತ್ತು ಸಂದೇಶ ಪತ್ರದ ಮೇಲೆ ಹಸ್ತಾಕ್ಷರ ಹಾಕಿದರು.

ಸ್ಟ್ಯಾಂಡ್‌ ಖಾಲಿ!

ಪ್ರತಿಯೊಂದು ಐಪಿಎಲ್ ಪಂದ್ಯದಲ್ಲಿಯೂ ತುಂಬಿ ತುಳುಕುತ್ತಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಕೆಲವು ಗ್ಯಾಲರಿಗಳು ಭಾನುವಾರ
ಖಾಲಿಯಾಗಿದ್ದವು.

ಯುಗಾದಿ ಹಬ್ಬದ ವರ್ಷದ ತೊಡಕು ಆಚರಣೆಯ ದಿನವಾದ ಕಾರಣ ಜನರ ಸಂಖ್ಯೆ ಕಡಿಮೆ ಇತ್ತು ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ. ಆದರೆ, ಆರ್‌ಸಿಬಿಯು ಸತತ ಸೋಲಿನಿಂದಾಗಿಯೂ ಜನರ ಆಸಕ್ತಿ ಕಡಿಮೆಯಾಗಿದೆ ಎಂದು ಕೆಲವರು ಹೇಳಿದರು. ಒಟ್ಟು 35 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಗ್ಯಾಲರಿಯಲ್ಲಿ 26 ಸಾವಿರ ಜನರು ಮಾತ್ರ ಇದ್ದರು.

ಆರ್‌ಸಿಬಿ ಪ್ಲೇ ಆಫ್ ಹಾದಿ ಕಠಿಣ

ಟೂರ್ನಿಯಲ್ಲಿ ಆರ್‌ಸಿಬಿಯು ತನ್ನ ಪಾಲಿನ ಎಂಟೂ ಪಂದ್ಯಗಳನ್ನು ಗೆದ್ದರೆ 16 ಅಂಕಗಳೊಂದಿಗೆ ಪ್ಲೇ ಆಫ್‌ ಪ್ರವೇಶಿಸಬಹುದು. ಕನಿಷ್ಠ ಏಳು ಪಂದ್ಯಗಳನ್ನಾದರೂ ಗೆದ್ದು, ಉತ್ತಮ ರನ್‌ ರೇಟ್ ಗಳಿಸಿಕೊಂಡರೂ ನಾಕೌಟ್‌ ಕನಸು ಕೈಗೂಡಬಹುದು. ಆದರೆ, ಕಳೆದ ಆರು ಪಂದ್ಯಗಳಲ್ಲಿ ತಂಡವು ಆಡಿರುವ ರೀತಿ ನೋಡಿದರೆ ಮುಂದಿನ ಪಂದ್ಯಗಳಲ್ಲಿ ಪುಟಿದೇಳುವುದು ಕಷ್ಟಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT