ತಿರುಗೇಟು ನೀಡುವುದೇ ಅಜಿಂಕ್ಯ ಬಳಗ?

ಶನಿವಾರ, ಏಪ್ರಿಲ್ 20, 2019
26 °C
ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್‌ಗೆ ಆತಿಥೇಯ ರಾಜಸ್ಥಾನ್ ರಾಯಲ್ಸ್ ತಂಡದ ಸವಾಲು

ತಿರುಗೇಟು ನೀಡುವುದೇ ಅಜಿಂಕ್ಯ ಬಳಗ?

Published:
Updated:
Prajavani

ಜೈಪುರ: ಅತ್ಯಮೋಘ ಸಾಮರ್ಥ್ಯದ ಮೂಲಕ ‍ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೇವಲ ಒಂದೇ ಪಂದ್ಯ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಹಣಾಹಣಿ ಗುರುವಾರ ಇಲ್ಲಿ ನಡೆಯಲಿದೆ.

ಐದು ಪಂದ್ಯಗಳನ್ನು ಆಡಿರುವ ರಾಯಲ್ಸ್‌ ಈಗ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದಲ್ಲಿ ಮಾತ್ರ ರಾಯಲ್ಸ್ ಗೆದ್ದಿತ್ತು. ಆರು ಪಂದ್ಯಗಳ ಪೈಕಿ ಐದನ್ನು ಗೆದ್ದಿರುವ ಸೂಪರ್ ಕಿಂಗ್ಸ್‌ ಪಾಯಿಂಟ್‌ ಪಟ್ಟಿಯಲ್ಲಿ ಎರಡಂಕಿ ದಾಟಿದ ಮೊದಲ ತಂಡ ಎನಿಸಿಕೊಂಡಿದೆ.

ಬಲಿಷ್ಠ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಂಗಳವಾರ ಏಳು ವಿಕೆಟ್‌ಗಳಿಂದ ಮಣಿಸಿ ಸೂಪರ್ ಕಿಂಗ್ಸ್‌ ಭರವಸೆಯನ್ನು ಹೆಚ್ಚಿಸಿಕೊಂಡಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸೂಪರ್ ಕಿಂಗ್ಸ್ ಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಅಂಗಣದಲ್ಲಿ ಗೆಲ್ಲಬಲ್ಲ ತಂಡ ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದೆ.

ಕಳೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಎಂಟು ವಿಕೆಟ್‌ಗಳಿಂದ ಸೋತಿರುವ ರಾಯಲ್ಸ್ ಈಗ ಸಂಕಷ್ಟದ ಸ್ಥಿತಿಯಲ್ಲಿದ್ದು ಪ್ಲೇ ಆಫ್‌ ಹಂತ ತಲುಪಬೇಕಾದರೆ ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ. ಕೆಲವು ಪಂದ್ಯಗಳಲ್ಲಿ ಅವಕಾಶಗಳನ್ನು ಕೈಚೆಲ್ಲಿದ ರಾಯಲ್ಸ್‌ ಕಳೆದ ಪಂದ್ಯದಲ್ಲಿ ಸಂಪೂರ್ಣ ವೈಫಲ್ಯ ಕಂಡಿತ್ತು. ಆರಂಭದ ಕೆಲವು ಪಂದ್ಯಗಳಲ್ಲಿ ಮಿಂಚಿದ ಜೋಸ್ ಬಟ್ಲರ್‌ ನಂತರ ಸತತ ವೈಫಲ್ಯ ಅನುಭವಿಸಿರುವುದು ತಂಡದ ಆತಂಕಕ್ಕೆ ಕಾರಣವಾಗಿದೆ.

ಗುಣಮುಖರಾಗುತ್ತಿರುವ ಸಂಜು ಸ್ಯಾಮ್ಸನ್‌: ಈ ಬಾರಿಯ ಐಪಿಎಲ್‌ನ ಮೊದಲ ಶತಕ ಸಿಡಿಸಿದ ಸಂಜು ಸ್ಯಾಮ್ಸನ್‌ ಗಾಯದಿಂದ ಗುಣಮುಖರಾಗುತ್ತಿದ್ದು ಗುರುವಾರದ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ.

ಸ್ಟೀವ್ ಸ್ಮಿತ್‌ ಫಾರ್ಮ್‌ಗೆ ಮರಳಿರುವುದು ರಾಯಲ್ಸ್ ತಂಡದ ಸಂತಸಕ್ಕೆ ಕಾರಣವಾಗಿದೆ. ಆರ್‌ಸಿಬಿ ಎದುರಿನ ಪಂದ್ಯದಲ್ಲಿ 38 ರನ್‌ ಗಳಿಸಿದ್ದ ಅವರು ನಂತರ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಅಜೇಯ 73 ರನ್‌ ಸಿಡಿಸಿ ಮಿಂಚಿದ್ದರು. ಆದರೆ ನಾಯಕ ಅಜಿಂಕ್ಯ ರಹಾನೆ, ರಾಹುಲ್ ತ್ರಿಪಾಠಿ ಮತ್ತು ಬೆನ್‌ ಸ್ಟೋನ್ಸ್‌ ಅವರಿಗೆ ನಿರೀಕ್ಷಿತ ಸಾಮರ್ಥ್ಯ ತೋರಿಸಲು ಆಗುತ್ತಿಲ್ಲ. ಧವಳ್ ಕುಲಕರ್ಣಿ, ಜಯದೇವ ಉನದ್ಕತ್‌ ಮತ್ತು ಜೊಫ್ರಾ ಆರ್ಚರ್‌ ಅವರ ಬೌಲಿಂಗ್ ಕೂಡ ಪರಿಣಾಮ ಬೀರುತ್ತಿಲ್ಲ.

ಮೊದಲ ಸುತ್ತಿನಲ್ಲಿ ರಾಯಲ್ಸ್ ತಂಡದ ವಿರುದ್ಧ ಸೂಪರ್ ಕಿಂಗ್ಸ್ ಎಂಟು ರನ್‌ಗಳಿಂದ ಗೆದ್ದಿತ್ತು. ಆ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅಜೇಯ 75 ರನ್‌ ಗಳಿಸಿದ್ದರು. ಅಗ್ರ ಕ್ರಮಾಂಕದ ಶೇನ್‌ ವ್ಯಾಟ್ಸನ್‌ ಮತ್ತು ಫಾಫ್ ಡು ಪ್ಲೆಸಿ ಅವರೊಂದಿಗೆ ಮಧ್ಯಮ ಕ್ರಮಾಂಕದ ಸುರೇಶ್ ರೈನಾ, ಅಂಬಟಿ ರಾಯುಡು ಮತ್ತು ಕೇದಾರ್ ಜಾಧವ್‌ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬುತ್ತಿದ್ದಾರೆ. ವೇಗ ಮತ್ತು ಸ್ಪಿನ್‌ ದಾಳಿಯ ಮೂಲಕ ಯಾವುದೇ ತಂಡವನ್ನು ಕಟ್ಟಿಹಾಕುವ ಸಾಮರ್ಥ್ಯ ಸಿಎಸ್‌ಕೆ ಬೌಲಿಂಗ್ ವಿಭಾಗಕ್ಕೆ ಇದೆ.

ತಂಡಗಳು: ರಾಜಸ್ಥಾನ್ ರಾಯಲ್ಸ್‌: ಅಜಿಂಕ್ಯ ರಹಾನೆ (ನಾಯಕ), ಸ್ಟೀವ್ ಸ್ಮಿತ್‌, ಬೆನ್ ಸ್ಟೋಕ್ಸ್‌, ಜೊಫ್ರಾ ಆರ್ಚರ್‌, ಜೋಸ್‌ ಬಟ್ಲರ್‌, ಆ್ಯಶ್ಟನ್‌ ಟರ್ನರ್‌, ಇಶ್ ಸೋಧಿ, ಒಶಾನೆ ಥಾಮಸ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಸಂಜು ಸ್ಯಾಮ್ಸನ್‌, ಶುಭಂ ರಂಜನೆ, ಸ್ಟುವರ್ಟ್ ಬಿನ್ನಿ, ಶ್ರೇಯಸ್‌ ಗೋಪಾಲ್‌, ಸುದೇಶನ್ ಮಿಥುನ್‌, ಜಯದೇವ ಉನದ್ಕತ್‌, ಪ್ರಶಾಂತ್‌ ಚೋಪ್ರಾ, ಮಹಿಪಾಲ್‌ ಲೊಮ್ರರ್‌, ಆರ್ಯಮನ್ ಬಿರ್ಲಾ, ರಿಯಾನ್ ಪರಾಗ್‌, ಧವಳ್ ಕುಲಕರ್ಣಿ, ಕೃಷ್ಣಪ್ಪ ಗೌತಮ್‌, ವರುಣ್ ಆ್ಯರನ್‌, ಶಶಾಂಕ್ ಸಿಂಗ್‌, ಮನನ್ ವೊಹ್ರಾ, ರಾಹುಲ್ ತ್ರಿಪಾಠಿ.

ಚೆನ್ನೈ ಸೂಪರ್ ಕಿಂಗ್ಸ್‌: ಮಹೇಂದ್ರ ಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಅಂಬಟಿ ರಾಯುಡು, ಶೇನ್ ವ್ಯಾಟ್ಸನ್‌, ಫಾಫ್ ಡು ಪ್ಲೆಸಿ, ಮುರಳಿ ವಿಜಯ್‌, ಕೇದಾರ್ ಜಾಧವ್‌, ಸ್ಯಾಮ್ ಬಿಲಿಂಗ್ಸ್‌, ರವೀಂದ್ರ ಜಡೇಜ, ಧ್ರುವ್‌ ಶೋರೆ, ಚೈತನ್ಯ ಬಿಶ್ನೋಯ್‌, ಋತುರಾಜ್ ಗಾಯಕವಾಡ್‌, ಡ್ವೇನ್‌ ಬ್ರಾವೊ, ಕರಣ್ ಶರ್ಮಾ, ಇಮ್ರಾನ್ ತಾಹಿರ್‌, ಹರಭಜನ್ ಸಿಂಗ್‌, ಮಿಷೆಲ್‌ ಸ್ಯಾಂಟನರ್‌, ಶಾರ್ದೂಲ್ ಠಾಕೂರ್‌, ಮೋಹಿತ್ ಶರ್ಮಾ, ಕೆ.ಎಂ.ಆಸಿಫ್‌, ದೀಪಕ್‌ ಚಾಹರ್‌, ಎನ್‌.ಜಗದೀಶನ್‌, ಸ್ಕಾಟ್‌ ಕುಗೆಲಿನ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !