ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ವೆರೋನಿಕಾ, ರೂಡ್‌ಗೆ ಮೊದಲ ಕ್ವಾರ್ಟರ್ ಫೈನಲ್

ಮ್ಯಾಡಿಸನ್ ಕೀಸ್‌, ಹ್ಯೂಬರ್ಟ್‌ಗೆ ನಿರಾಸೆ
Last Updated 30 ಮೇ 2022, 19:30 IST
ಅಕ್ಷರ ಗಾತ್ರ

ಪ್ಯಾರಿಸ್‌: ನಾರ್ವೆಯ ಕ್ಯಾಸ್ಪರ್ ರೂಡ್ ಮತ್ತು ರಷ್ಯಾದ ವೆರೋನಿಕಾ ಕುದೆರ್‌ಮೆತೋವ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ಹಂತಕ್ಕೆ ಲಗ್ಗೆ ಇರಿಸಿದರು. ಕ್ಯಾಸ್ಪರ್ ಈ ಟೂರ್ನಿಯಲ್ಲಿ ಎಂಟರ ಘಟ್ಟ ಪ್ರವೇಶಿಸಿದ ದೇಶದ ಮೊದಲ ಆಟಗಾರ ಕೂಡ ಆಗಿದ್ದಾರೆ.

ಸೋಮವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಕ್ಯಾಸ್ಪರ್ ಪೋಲೆಂಡ್‌ನ ಹ್ಯೂಬರ್ಟ್‌ ಹರ್ಕಕ್ಸ್‌ ವಿರುದ್ಧ6-2, 6-3, 3-6, 6-3 ರಲ್ಲಿ ಜಯ ಗಳಿಸಿದರು. 23 ವರ್ಷದ ಕ್ಯಾಸ್ಪರ್ ಮೊದಲ ಎರಡು ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದ್ದರು. ಆದರೆ ಮೂರನೇ ಸೆಟ್‌ನಲ್ಲಿ ಎದುರಾಳಿ ಆಟಗಾರ ತಿರುಗೇಟು ನೀಡಿದರು. ಪಟ್ಟು ಬಿಡದ ಕ್ಯಾಸ್ಪರ್ ನಾಲ್ಕನೇ ಸೆಟ್‌ನಲ್ಲಿ ಪುಟಿದೆದ್ದು ಗೆಲುವು ತಮ್ಮದಾಗಿಸಿಕೊಂಡರು.

ಮಹಿಳೆಯರ ವಿಭಾಗದ 16ರ ಘಟ್ಟದ ಹಣಾಹಣಿಯಲ್ಲಿ ವೆರೋನಿಕಾ1-6, 6-3, 6-1ರಲ್ಲಿ ಅಮೆರಿಕದ ಮ್ಯಾಡಿಸನ್ ಕೀ ಅವರನ್ನು ಮಣಿಸಿದರು.

2018ರ ಟೂರ್ನಿಯಲ್ಲಿ ಸೆಮಿಫೈನಲ್ ಮತ್ತು ಮುಂದಿನ ವರ್ಷ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಮ್ಯಾಡಿಸನ್ ಮೊದಲ ಸೆಟ್‌ನಲ್ಲಿ ಏಕಪಕ್ಷೀಯ ಜಯ ಸಾಧಿಸಿದ್ದರು. ಆದರೆ ಮುಂದಿನ ಎರಡು ಸೆಟ್‌ಗಳಲ್ಲಿ ಕುದೆರ್‌ಮೆತೋವಾ ಅವರ ಆಕ್ರಮಣಕಾರಿ ಆಟಕ್ಕೆ ಬೆದರಿ ಲಯ ಕಳೆದುಕೊಂಡರು.

ಮತ್ತೊಂದು ಪಂದ್ಯದಲ್ಲಿ ರಷ್ಯಾದ ದಾರ್ಯ ಕಸತ್ಕಿನ ಇಟಲಿಯ ಕಮಿಲಾ ಜಾರ್ಜಿ ವಿರುದ್ದ 6-2, 6-2ರಲ್ಲಿ ಜಯ ಗಳಿಸಿದರು.

ರಾತ್ರಿ ಪಂದ್ಯಕ್ಕೆ ನಡಾಲ್ ಅಸಮಾಧಾನ
ಸ್ಪೇನ್‌ನ ರಫೆಲ್ ನಡಾಲ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ ನಡುವೆ ಮಂಗಳವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಪಂದ್ಯವನ್ನು ರಾತ್ರಿ ಅವಧಿಯಲ್ಲಿ ನಡೆಸುವ ನಿರ್ಧಾರಕ್ಕೆ ನಡಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆವೆಮಣ್ಣಿನ ಅಂಗಣದಲ್ಲಿ ನಡೆಯುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕಳೆದ ಬಾರಿ ರಾತ್ರಿ ಅವಧಿಯನ್ನು ಆರಂಭಿಸಲಾಗಿತ್ತು. ಪಂದ್ಯಗಳು ಸ್ಥಳೀಯ ಕಾಲಮಾನ 9 ಗಂಟೆಗೆ ಆರಂಭವಾಗುತ್ತವೆ. ಈ ಪಂದ್ಯಗಳನ್ನು ಫ್ರಾನ್ಸ್‌ನಲ್ಲಿ ನೇರಪ್ರಸಾರ ಮಾಡುವ ಹಕ್ಕು ಅಮಜಾನ್ ಪ್ರೈಮ್ ಪಡೆದುಕೊಂಡಿದೆ.

ಕ್ವಾರ್ಟರ್ ಫೈನಲ್ ಪಂದ್ಯವನ್ನು ಈ ಅವಧಿಯಲ್ಲಿ ನಡೆಸುವುದನ್ನು ವಿರೋಧಿಸಿರುವ ನಡಾಲ್ ‘ಆವೆಮಣ್ಣಿನಲ್ಲಿ ನಾನು ರಾತ್ರಿ ಅವಧಿಯಲ್ಲಿ ಆಡಲು ಇಚ್ಛಿಸುವುದಿಲ್ಲ. ಇದು ಅತ್ಯಂತ ಕಠಿಣ ಸವಾಲಾಗಿದ್ದು ಪಂದ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT