ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್ ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾಗೆ ಶರಣಾದ ಹರ್ಮನ್ ಬಳಗ

ಶ್ಲೋ ಟ್ರಯಾನ್ ಅಜೇಯ ಅರ್ಧಶತಕ
Last Updated 3 ಫೆಬ್ರುವರಿ 2023, 2:11 IST
ಅಕ್ಷರ ಗಾತ್ರ

ಈಸ್ಟ್ ಲಂಡನ್: ಉತ್ತಮ ಬೌಲಿಂಗ್ ಮಾಡಿದ ನಾನ್‌ಕುಲುಲೆಕೊ ಮ್ಲಾಬಾ ಮತ್ತು ಅರ್ಧಶತಕ ಗಳಿಸಿದ ಶ್ಲೋಯೆ ಟ್ರಯಾನ್ ಅವರ ಆಟದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಗುರುವಾರ ಇಲ್ಲಿ ನಡೆದ ಮಹಿಳಾ ಟಿ20 ತ್ರಿಕೋನ ಸರಣಿಯ ಪಂದ್ಯದಲ್ಲಿ ಗೆದ್ದಿತು. ಭಾರತ ತಂಡವು ನಿರಾಶೆ ಅನುಭವಿಸಿತು.

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 109 ರನ್‌ಗಳಿಸಲಷ್ಟೇ ಶಕ್ತವಾಯಿತು. ಮ್ಲಾಬಾ (16ಕ್ಕೆ2) ಆರಂಭಿಕ ಜೋಡಿ ಸ್ಮೃತಿ ಮಂದಾನ ಹಾಗೂ ಜೆಮಿಮಾ ರಾಡ್ರಿಗಸ್ ವಿಕೆಟ್‌ಗಳನ್ನು ಗಳಿಸಿದರು. ಸ್ಮೃತಿ ಖಾತೆಯನ್ನೇ ತೆರೆಯಲಿಲ್ಲ.

ಈ ಹಂತದಲ್ಲಿ ದಿಟ್ಟ ಆಟವಾಡಿದ ಹರ್ಲಿನ್ ಡಿಯೊಲ್ (46; 56ಎ, 4X4) ಮತ್ತು ನಾಯಕಿ ಹರ್ಮನ್‌ಪ್ರೀತ್ (21; 22ಎ, 4X2) ಮೂರನೇ ವಿಕೆಟ್ ಜೊತೆಯಾಟದಲ್ಲಿ 48 ರನ್‌ಗಳನ್ನು ಸೇರಿಸಿದರು.

15ನೇ ಓವರ್‌ನಲ್ಲಿ ಆಟದ ವೇಗ ಹೆಚ್ಚಿಸಿದ ಕೌರ್ ವಿಕೆಟ್ ಕಬಳಿಸಿದ ಸನಿ ಲೂಸ್ ಜೊತೆಯಾಟ ಮುರಿದರು. ಹರ್ಲಿನ್ ಅವರು ದೀಪ್ತಿ ಶರ್ಮಾ (ಔಟಾಗದೆ 16) ಜೊತೆಗೆ 39 ರನ್‌ ಸೇರಿಸಿದರು. ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು.

ಆದರೆ ಈ ಮೊತ್ತವು ಗೆಲುವಿಗೆ ಸಾಕಾಗಲಿಲ್ಲ. ಭಾರತದ ಬೌಲರ್‌ಗಳ ಪ್ರಯತ್ನಕ್ಕೆ ಜಯದ ಫಲ ಸಿಗಲಿಲ್ಲ. ದೀಪ್ತಿ ಶರ್ಮಾ, ಸ್ನೇಹಾ ರಾಣಾ ಹಾಗೂ ರಾಜೇಶ್ವರಿ ಗಾಯಕವಾಡ ಅವರು ಉತ್ತಮ ಬೌಲಿಂಗ್ ಮಾಡಿದರು. ಅದರಿಂದಾಗಿ ದಕ್ಷಿಣ ಆಫ್ರಿಕಾ ತಂಡವು 47ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತು.

ಆದರೆ ಈ ಹಂತದಲ್ಲಿ ಏಕಾಂಗಿ ಹೋರಾಟ ಮಾಡಿದ ಐದನೇ ಕ್ರಮಾಂಕದ ಶ್ಲೊಯೆ ಟ್ರಯಾನ್ (ಔಟಾಗದೆ 57; 32ಎ, 4X6, 6X2) ಬೀಸಾಟವಾಡಿದರು. ಇದರಿಂದಾಗಿ ತಂಡವು ಇನಿಂಗ್ಸ್‌ನಲ್ಲಿ ಇನ್ನೂ ಎರಡು ಓವರ್‌ಗಳು ಬಾಕಿಯಿರುವಾಗಲೇ ಗೆಲುವಿನ ದಡ ಸೇರಿತು.

ಸಂಕ್ಷಿಪ್ತ ಸ್ಕೋರು
ಭಾರತ:
20 ಓವರ್‌ಗಳಲ್ಲಿ 4ಕ್ಕೆ109 (ಹರ್ಲೀನ್ ಡಿಯೊಲ್ 46, ಹರ್ಮನ್‌ಪ್ರೀತ್ ಕೌರ್ 21, ದೀಪ್ತಿ ಶರ್ಮಾ ಔಟಾಗದೆ 16, ನಾನ್‌ಕುಲುಲೆಕೊ ಮ್ಲಾಬಾ 16ಕ್ಕೆ2)
ದಕ್ಷಿಣ ಆಫ್ರಿಕಾ: 18 ಓವರ್‌ಗಳಲ್ಲಿ 5ಕ್ಕೆ113 (ಶ್ಲೊಯೆ ಟ್ರಯಾನ್ ಔಟಾಗದೆ 57,ನೆಡಿನ್ ಡಿ ಕೀರ್ಕ್ ಔಟಾಗದೆ 17, ಸ್ನೇಹ ರಾಣಾ 21ಕ್ಕೆ2)
ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT