ಲಂಡನ್ : ಭಾರತದ ಬ್ಯಾಟರ್ ಬಿ.ಸಾಯಿ ಸುದರ್ಶನ್ ಅವರು ಇಂಗ್ಲಿಷ್ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಸರ್ರೆ ತಂಡದ ಮುಂದಿನ ಎರಡು ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ಕ್ಲಬ್ ಬುಧವಾರ ಪ್ರಕಟಿಸಿದೆ.
ಓವಲ್‌ನಲ್ಲಿ ಲ್ಯಾಂಕೇಶೈರ್ ವಿರುದ್ಧ 22 ವರ್ಷ ವಯಸ್ಸಿನ ಈ ಆಟಗಾರ ಗುರುವಾರ ಮೊದಲ ಪಂದ್ಯ ಆಡಲಿದ್ದಾರೆ. ನಂತರ, ಮುಂದಿನ ವಾರ ಟ್ರೆಂಟ್‌ಬ್ರಿಜ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧ ಎರಡನೇ ಪಂದ್ಯ ಆಡಲಿದ್ದಾರೆ.
ನಂತರ ಸ್ವದೇಶಕ್ಕೆ ಮರಳಿ ಸೆ. 5ರಿಂದ ನಡೆಯುವ ದುಲೀಪ್ ಟ್ರೋಫಿ ಪಂದ್ಯಗಳಲ್ಲಿ ಆಡಲಿದ್ದಾರೆ. ಬೆಂಗಳೂರು ಮತ್ತು ಅನಂತಪುರದಲ್ಲಿ ದುಲೀಪ್ ಟ್ರೋಫಿ ಪಂದ್ಯಗಳು ನಿಗದಿಯಾಗಿವೆ.
ಸರ್ರೆ ತಂಡ ಪ್ರಸ್ತುತ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನದಲ್ಲಿದ್ದು, ಸತತ ಮೂರನೇ ಪ್ರಶಸ್ತಿಯ ಸನಿಹದಲ್ಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಈ ವರ್ಷದ ಆರಂಭದಲ್ಲಿ ಭಾರತ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದ ಸುದರ್ಶನ್ ಮೂರು ಇನಿಂಗ್ಸ್‌ಗಳಲ್ಲಿ ಎರಡು ಅರ್ಧ ಶತಕಗಳನ್ನು ಗಳಿಸಿದ್ದರು.