ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ಗೆ ಐಪಿಎಲ್ ಅನುಭವ ಅಡಿಪಾಯ: ಸ್ಯಾಮ್ ಬಿಲಿಂಗ್ಸ್

Last Updated 1 ಆಗಸ್ಟ್ 2020, 11:13 IST
ಅಕ್ಷರ ಗಾತ್ರ

ಸೌತಾಂಪ್ಟನ್: ಭಾರತದಲ್ಲಿ 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಗೆ ಐಪಿಎಲ್ ಟೂರ್ನಿ ಅಡಿಪಾಯವಾಗಲಿದೆ ಎಂದು ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ ಸ್ಯಾಮ್ ಬಿಲಿಂಗ್ಸ್ ಅಭಿಪ್ರಾಯಪಟ್ಟಿದ್ದಾರೆ.

‘ಇಂಗ್ಲೆಂಡ್‌ ಏಕದಿನ ತಂಡದಲ್ಲಿ ಸ್ಥಾನ ಗಳಿಸುವುದು ಅತ್ಯಂತ ಕಠಿಣ ಸವಾಲು. ಆದರೆ ಐಪಿಎಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಮೂಲಕ ಮುಂದಿನ ವಿಶ್ವಕಪ್‌ ಸಂದರ್ಭದಲ್ಲಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲಿದ್ದೇನೆ’ ಎಂದು ಅವರು ಕ್ರೀಡಾ ವೆಬ್‌ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ ಜೋ ಡೆನ್ಲಿ ಅವರಿಗೆ ಬೆನ್ನು ನೋವು ಕಾಡಿದ್ದರಿಂದ ಬಿಲಿಂಗ್ಸ್‌ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿತ್ತು. ಔಟಾಗದೆ 67 ರನ್ ಸಿಡಿಸಿದ ಅವರು ತಂಡದ ಸುಲಭ ಜಯಕ್ಕೆ ಕಾರಣರಾಗಿದ್ದರು.

ಭಾರತದಲ್ಲಿ ಮುಂದಿನ ವರ್ಷ ಟ್ವೆಂಟಿ–20 ವಿಶ್ವಕಪ್ ಟೂರ್ನಿ ಮತ್ತು ಅದಾಗಿ ಎರಡು ವರ್ಷಗಳ ನಂತರ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ‘ಈ ಟೂರ್ನಿಗಳಲ್ಲಿ ಸ್ಪಿನ್ ವಿರುದ್ಧ ಆಡುವ ಸಾಮರ್ಥ್ಯ ಗಿಟ್ಟಿಸಿಕೊಳ್ಳಲು ಐಪಿಎಲ್ ನೆರವಾಗಲಿದೆ. ಸ್ಪಿನ್ನರ್‌ಗಳನ್ನು ಐಪಿಎಲ್‌ನಲ್ಲಿ ಈಗಾಗಲೇ ನಾನು ಚೆನ್ನಾಗಿ ಎದುರಿಸಿದ್ದೇನೆ’ ಎಂದು ಬಿಲಿಂಗ್ಸ್ ಅಭಿಪ್ರಾಯಪಟ್ಟರು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬಿಲಿಂಗ್ಸ್ ಆಡಿದ್ದಾರೆ.

‘ಚೆನ್ನೈ ಮತ್ತು ದೆಹಲಿಯ ಪಿಚ್‌ಗಳಲ್ಲಿ ಯಶಸ್ವಿಯಾಗಿದ್ದೇನೆ, ಇನ್ನು ಮುಂದೆಯೂ ಸ್ಪಿನ್ ವಿರುದ್ಧ ಆಡುವುದಕ್ಕೆ ಹೆಚ್ಚು ಒತ್ತು ಕೊಡಲಿದ್ದೇನೆ. ಏಕದಿನ ಇರಬಹುದು, ಟೆಸ್ಟ್ ಕ್ರಿಕೆಟ್ ಇರಬಹುದು ಸ್ಪಿನ್ ಎದುರಿಸಲು ಭಾರತ ಉಪಖಂಡವೇ ಸೂಕ್ತ’ ಎಂದು ಅವರು ನುಡಿದರು.

2015ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸ್ಯಾಮ್ ಬಿಲಿಂಗ್ಸ್‌ ಈ ವರೆಗೆ 16 ಏಕದಿನ ಮತ್ತು 26 ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ. 29 ವರ್ಷದ ಅವರು ಆಗೊಮ್ಮೆ ಈಗೊಮ್ಮೆ ಕಣಕ್ಕೆ ಇಳಿದಿದ್ದಾರೆಯೇ ಹೊರತು ಈ ವರೆಗೆ ತಂಡದಲ್ಲಿ ಭದ್ರವಾಗಿ ತಳವೂರಲು ಅವಕಾಶ ಸಿಗಲಿಲ್ಲ.

‘ಕಳೆದ ಸಾಲು ನನ್ನ ಪಾಲಿಗೆ ಬೇಸರದ್ದಾಗಿತ್ತು. ಭುಜನೋವಿನಿಂದಾಗಿ ಏಕದಿನ ವಿಶ್ವಕಪ್‌ನಿಂದ ವಂಚಿತನಾದೆ, ಹಾಗೆ ನೋಡಿದರೆ ಕಳೆದ ಐದು ವರ್ಷಗಳಲ್ಲಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ನನಗೆ ಸಾಧ್ಯವಾಗಲಿಲ್ಲ. 2015ರ ವಿಶ್ವಕಪ್ ನಂತರ ನ್ಯೂಜಿಲೆಂಡ್ ವಿರುದ್ಧ ಐದು ಏಕದಿನ ಪಂದ್ಯಗಳನ್ನು ಆಡಲಷ್ಟೇ ಸಾಧ್ಯವಾಯಿತು. 2018ರ ನಂತರ ಕೇವಲ 10 ಏಕದಿನ ಪಂದ್ಯಗಳನ್ನು ಆಡಿದ್ದೇನೆ. ಇಂಗ್ಲೆಂಡ್‌ನಂಥ ತಂಡದಲ್ಲಿ ಇಷ್ಟು ಅವಕಾಶಗಳು ಸಿಕ್ಕಿದ್ದೇ ವಿಶೇಷ’ ಎಂದರು.

ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಬಿಲಿಂಗ್ಸ್ ನಾಯಕ ಇಯಾನ್ ಮಾರ್ಗನ್ ಜೊತೆ ಮುರಿಯದ ಐದನೇ ವಿಕೆಟ್‌ಗೆ 96 ರನ್ ಸೇರಿಸಿದರು. ಈ ಮೂಲಕ ಇಂಗ್ಲೆಂಡ್‌ ಗೆಲುವಿಗೆ ಬೇಕಾದ 173 ರನ್‌ಗಳನ್ನು ಇನ್ನು 22 ಓವರ್ ಬಾಕಿ ಇರುವಾಗಲೇ ಗಳಿಸಿತು.

‘ಮಧ್ಯಮ ಕ್ರಮಾಂಕದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಲು ಆಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದೇನೆ. ಆದ್ದರಿಂದ ಐರ್ಲೆಂಡ್ ಎದುರು ಐದನೇ ಕ್ರಮಾಂಕದಲ್ಲಿ ಇಳಿಸಿದ್ದು ಖುಷಿ ನೀಡಿತ್ತು. ಆರಂಭದಲ್ಲಿ ಕ್ರೀಸ್‌ಗೆ ಇಳಿದು ಇನಿಂಗ್ಸ್ ಕಟ್ಟುವುದು ಅಥವಾ ಕೊನೆಯ ಓವರ್‌ಗಳಲ್ಲಿ ಆಡಿ 10 ಎಸೆತಗಳಲ್ಲಿ 40 ರನ್ ಗಳಿಸುವಂಥ ಒತ್ತಡವನ್ನು ಎದುರಿಸುವುದಕ್ಕಿಂತ ಮಧ್ಯಮ ಕ್ರಮಾಂಕವೇ ಉತ್ತಮ’ ಎಂದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೂಡ ಆಗಿರುವ ಬಿಲಿಂಗ್ಸ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT