‘ನಮ್ಮವರು ಕಾಫಿ ಕುಡಿಯಲು ಹೋಗಿರಬಹುದು’

7
ನಾಯಕ ಕೊಹ್ಲಿ, ಕೋಚ್‌ ರವಿಶಾಸ್ತ್ರಿ ವಿರುದ್ಧ ಸಂದೀಪ್‌ ಪಾಟೀಲ್‌ ಕಿಡಿ

‘ನಮ್ಮವರು ಕಾಫಿ ಕುಡಿಯಲು ಹೋಗಿರಬಹುದು’

Published:
Updated:

ಬೆಂಗಳೂರು: ‘ಭಾರತದ ಆಟಗಾರರು ಕಾಫಿ ಹೀರುತ್ತಾ ಇಂಗ್ಲೆಂಡ್‌ನ ಬೀದಿಗಳಲ್ಲಿ ಸುತ್ತಾಡಲು ಅಲ್ಲಿಗೆ ಹೋಗಿರಬಹುದು. ಟೆಸ್ಟ್‌ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವುದು ಇದಕ್ಕೆ ನಿದರ್ಶನದಂತಿದೆ’ ಎಂದು ಹಿರಿಯ ಕ್ರಿಕೆಟಿಗ ಸಂದೀಪ್‌ ಪಾಟೀಲ್‌ ಟೀಕಿಸಿದ್ದಾರೆ.

ಇಂಗ್ಲೆಂಡ್‌ಗೆ ತೆರಳುವ ಮುನ್ನ ಕೊಹ್ಲಿ ಮತ್ತು ಕೋಚ್‌ ರವಿಶಾಸ್ತ್ರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿರಾಟ್‌, ‘ನೀವು ಇಂಗ್ಲೆಂಡ್‌ಗೆ ಹೋಗಿ ಏನು ಮಾಡುತ್ತೀರಿ ಎಂದು ಇತ್ತೀಚೆಗೆ ಪತ್ರಕರ್ತರೊಬ್ಬರು ಕೇಳಿದ್ದರು. ಅದಕ್ಕೆ ನಾನು, ಕಾಫಿ ಹೀರುತ್ತಾ ಅಲ್ಲಿನ ಪ್ರಮುಖ ಬೀದಿಗಳಲ್ಲಿ ಸುತ್ತಾಡುತ್ತೇವೆ ಎಂದು ಹೇಳಿ ನಕ್ಕಿದ್ದೆ’ ಎಂದಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಪಾಟೀಲ್‌, ‘ ನಾಯಕ ಕೊಹ್ಲಿ ಅದ್ಯಾವ ಧಾಟಿಯಲ್ಲಿ ಹಾಗೆ ಹೇಳಿದರೂ ಗೊತ್ತಿಲ್ಲ. ಆದರೆ ತಂಡದ ಇತರ ಆಟಗಾರರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿಬಿಟ್ಟಿದ್ದಾರೆ. ಅಂಗಳಕ್ಕಿಳಿದಾಗಲೆಲ್ಲಾ ನಮ್ಮವರಿಗೆ ಕಾಫಿ ಹೀರುವ ಕನಸು ಬೀಳುತ್ತಿರಬಹುದು. ಹೀಗಾಗಿಯೇ ಲಾರ್ಡ್ಸ್‌ನಲ್ಲಿ ನಡೆದಿದ್ದ ಎರಡನೆ ಪಂದ್ಯವನ್ನು ಮೂರೇ ದಿನಗಳಲ್ಲಿ ಸೋತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

‘ಏಕದಿನ ಸರಣಿಯ ನಂತರ 14 ದಿನಗಳ ಬಿಡುವು ಸಿಕ್ಕಿತ್ತು. ಈ ಅವಧಿಯಲ್ಲಿ ಹೆಚ್ಚು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿತ್ತು. ಆದರೆ ಕೊಹ್ಲಿ ಮತ್ತು ರವಿಶಾಸ್ತ್ರಿ ಇದಕ್ಕೆ ಅಪಸ್ವರ ಎತ್ತಿದ್ದರು. ಆಟಗಾರರಿಗೆ ಹೆಚ್ಚು ವಿಶ್ರಾಂತಿ ಬೇಕು ಎಂಬ ಅಭಿಪ್ರಾಯ ಅವರಿಂದ ವ್ಯಕ್ತವಾಗಿತ್ತು. ಹೀಗಾಗಿಯೇ ಟೆಸ್ಟ್‌ ಸರಣಿಗೂ ಮುನ್ನ ಮೂರು ದಿನಗಳ ಒಂದು ಅಭ್ಯಾಸ ಪಂದ್ಯವನ್ನಷ್ಟೇ ನಡೆಸಲಾಗಿತ್ತು’ ಎಂದು ಹೇಳಿದ್ದಾರೆ.

‘ಸುನಿಲ್‌ ಗಾವಸ್ಕರ್‌, ಸಚಿನ್‌ ತೆಂಡೂಲ್ಕರ್‌ ಮತ್ತು ಸೌರವ್‌ ಗಂಗೂಲಿ ಸೇರಿದಂತೆ ಹಲವು ಹಿರಿಯ ಆಟಗಾರರು ಟೆಸ್ಟ್‌ ಸರಣಿಗೂ ಮುನ್ನ ಹೆಚ್ಚು ಅಭ್ಯಾಸ ಪಂದ್ಯಗಳನ್ನು ಆಡಬೇಕು ಎಂದಿದ್ದರು. ತಂಡದ ಆಡಳಿತ ಮಂಡಳಿ ಈ ದಿಗ್ಗಜರ ಸಲಹೆಯನ್ನು ನಿರ್ಲಕ್ಷಿಸಿತ್ತು.ಈಗಿನ ತಂಡದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಆದರೆ ಎಲ್ಲರೂ ಇಂಗ್ಲೆಂಡ್‌ ನೆಲದಲ್ಲಿ ಆಡಲು ಭಯಪಡುತ್ತಿರುವಂತಿದೆ’ ಎಂದು ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಪಾಟೀಲ್‌ ನುಡಿದಿದ್ದಾರೆ.

ಭವಿಷ್ಯ ನುಡಿಯಲು ಸಾಧ್ಯವಿಲ್ಲ: ‘ಭಾರತದ ಎದುರಿನ ಟೆಸ್ಟ್‌ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ (5–0ರಿಂದ) ಸಾಧನೆ ಮಾಡುವ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಇಂಗ್ಲೆಂಡ್‌ ತಂಡದ ವಿಕೆಟ್‌ ಕೀಪರ್‌ ಜಾನಿ ಬೇಸ್ಟೊ ತಿಳಿಸಿದ್ದಾರೆ.

‘ತವರಿನ ಅಂಗಳದಲ್ಲಿ ಆಡುತ್ತಿರುವುದರಿಂದ ಮೊದಲ ಎರಡು ಪಂದ್ಯಗಳಲ್ಲಿ ನಾವು ಸುಲಭವಾಗಿ ಗೆದ್ದಿದ್ದೇವೆ. ಹಾಗಂತ ಭಾರತ ತಂಡವನ್ನು ಕಡೆಗಣಿಸಲು ಆಗುವುದಿಲ್ಲ. ಆ ತಂಡ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸರಣಿಯಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಇವೆ. ಈ ಹೋರಾಟಗಳಲ್ಲಿ ಯಾರು ಬೇಕಾದರೂ ಗೆಲ್ಲಬಹುದು’ ಎಂದಿದ್ದಾರೆ.

ಟೆಸ್ಟ್‌ ಸರಣಿಯ ಮೂರನೆ ಪಂದ್ಯ ಆಗಸ್ಟ್ 18ರಿಂದ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ನಾಲ್ಕು (ಆಗಸ್ಟ್‌ 30ರಿಂದ ಸೆಪ್ಟೆಂಬರ್‌ 3) ಮತ್ತು ಐದನೆ (ಸೆಪ್ಟೆಂಬರ್‌ 7–11) ಪಂದ್ಯಗಳು ಕ್ರಮವಾಗಿ ಸೌಥಾಂಪ್ಟನ್‌ ಮತ್ತು ಲಂಡನ್‌ನ ಓವಲ್‌ ಕ್ರೀಡಾಂಗಣಗಳಲ್ಲಿ ನಿಗದಿಯಾಗಿವೆ.

**

ಕೊಹ್ಲಿ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ

ಲಂಡನ್‌(ಪಿಟಿಐ): ‘ಭಾರತ ತಂಡ ನಾಯಕ ವಿರಾಟ್‌ ಕೊಹ್ಲಿ ಅವರನ್ನೆ ಹೆಚ್ಚು ನೆಚ್ಚಿಕೊಂಡಿದೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ತಂಡದಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತರಿದ್ದಾರೆ. ಅವರೂ ಮಿಂಚಬಲ್ಲ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಶ್ರೀಲಂಕಾದ ಹಿರಿಯ ಕ್ರಿಕೆಟಿಗ ಕುಮಾರ ಸಂಗಕ್ಕಾರ ತಿಳಿಸಿದ್ದಾರೆ.

‘ಕೊಹ್ಲಿ, ವಿಶ್ವಶ್ರೇಷ್ಠ ಆಟಗಾರ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಹಿಂದಿನ ಐದು ವರ್ಷಗಳಿಂದ ಅವರು ಅಮೋಘ ಸಾಮರ್ಥ್ಯ ತೋರುತ್ತಿದ್ದಾರೆ. ಅವರ ಆಟ ನೋಡಲು ತುಂಬಾ ಖುಷಿಯಾಗುತ್ತದೆ. ತಂಡದಲ್ಲಿರುವ ಇತರರೂ ಕೊಹ್ಲಿ ಅವರ ಹಾಗೆ ಅಪೂರ್ವ ಸಾಮರ್ಥ್ಯ ತೋರಬಲ್ಲರು’ ಎಂದಿದ್ದಾರೆ.

‘ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಟೆಸ್ಟ್‌ನಲ್ಲಿ 50ರ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಕೆ.ಎಲ್‌.ರಾಹುಲ್‌, ಮುರಳಿ ವಿಜಯ್‌, ಶಿಖರ್‌ ಧವನ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರೂ ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಬಲ್ಲರು’ ಎಂದು ಹೇಳಿದ್ದಾರೆ.

‘ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡ ಹೆಚ್ಚು ಅಭ್ಯಾಸ ಪಂದ್ಯಗಳನ್ನು ಆಡಲಿಲ್ಲ. ಹೀಗಾಗಿ ಇಂಗ್ಲೆಂಡ್‌ನ ವಾತಾವರಣಕ್ಕೆ ಹೊಂದಿಕೊಳ್ಳಲು ಕೊಹ್ಲಿ ಪಡೆಯ ಆಟಗಾರರಿಗೆ ಕಷ್ಟವಾಗುತ್ತಿದೆ’ ಎಂದಿದ್ದಾರೆ.

**

ಸ್ಟೋಕ್ಸ್‌ ಬಗ್ಗೆ ಹುಸೇನ್‌ ಮೆಚ್ಚುಗೆ

ಲಂಡನ್‌ (ರಾಯಿಟರ್ಸ್‌): ‘ಅಶಿಸ್ತಿನ ಕಾರಣ ಬೆನ್‌ ಸ್ಟೋಕ್ಸ್‌ ಅವರು ಕೆಲ ಸಮಯ ಅಂಗಳದಿಂದ ದೂರ ಉಳಿಯಬೇಕಾಗಿತ್ತು. ಇದರಿಂದ ಎದೆಗುಂದದ ಅವರು ಮತ್ತೆ ತಂಡದಲ್ಲಿ ಸ್ಥಾನ ಗಳಿಸಿ ಮಿಂಚಿದ್ದು ಮೆಚ್ಚುವಂತಹದ್ದು’ ಎಂದು ಇಂಗ್ಲೆಂಡ್‌ನ ಹಿರಿಯ ಆಟಗಾರ ನಾಸೀರ್‌ ಹುಸೇನ್‌ ತಿಳಿಸಿದ್ದಾರೆ.

‘ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ಬ್ರಿಸ್ಟಲ್‌ನ ಕ್ಲಬ್‌ನ ಮುಂದೆ ನಡೆದ ಗಲಾಟೆಯಲ್ಲಿ ಭಾಗಿಯಾಗಿದ್ದ ಆರೋಪ ಸ್ಟೋಕ್ಸ್‌ ಮೇಲಿತ್ತು. ಆದ್ದರಿಂದ ಆಸ್ಟ್ರೇಲಿಯಾ ಎದುರಿನ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ಹೀಗಿದ್ದರೂ ಅವರು ಮಾನಸಿಕವಾಗಿ ಕುಗ್ಗಲಿಲ್ಲ. ಬ್ರಿಸ್ಟಲ್‌ ಕ್ರೌನ್‌ ಕೋರ್ಟ್‌ ಬುಧವಾರ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದೆ. ಸ್ಟೋಕ್ಸ್‌ ನಿರಪರಾಧಿ ಎಂಬುದು ಸಾಬೀತಾಗಿದೆ. ಇದರಿಂದ ಅವರು ನಿರಾಳರಾಗಿದ್ದಾರೆ. ಇನ್ನು ಮುಂದೆ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಬೇಕು. ಆಟದಲ್ಲಿ ಇನ್ನಷ್ಟು ಸುಧಾರಣೆ ಮಾಡಿಕೊಳ್ಳಲು ಶ್ರಮಿಸಬೇಕು’ ಎಂದು ನಾಸೀರ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !