ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಅಂಪೈರ್ ಸತ್ಯಾಜಿ ರಾವ್ ನಿಧನ

Last Updated 28 ಸೆಪ್ಟೆಂಬರ್ 2021, 17:44 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಕ್ರಿಕೆಟ್‌ನ ಮಾಜಿ ಅಂಪೈರ್ ಬಾದಾಮಿ ಸತ್ಯಾಜಿರಾವ್ (92) ಮಂಗಳವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಅವರಿಗೆ ಪತ್ನಿ ಮತ್ತು ಕ್ರಿಕೆಟಿಗ ವಿನಯ್ ಬಾದಾಮಿ ಇದ್ದಾರೆ. ವಿನಯ್ ಅವರು ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರ ಸಮಕಾಲೀನ ಆಟಗಾರರಾಗಿದ್ದಾರೆ.

ಸತ್ಯಾಜಿ ರಾವ್ ಅವರು 1929ರ ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ಜನಿಸಿದರು. ದೇಶದಲ್ಲಿ ಪ್ರಮುಖ ಕ್ರಿಕೆಟ್ ಅಂಪೈರ್‌ಗಳಲ್ಲಿ ಸತ್ಯಾಜಿ ರಾವ್ ಕೂಡ ಒಬ್ಬರು. 1956 ರಿಂದ 1981ರ ಅವಧಿಯಲ್ಲಿ ಅವರು ಕಾರ್ಯನಿರ್ವಹಿಸಿದರು. 1960 ರಿಂದ 1979ರಲ್ಲಿ ಅವರು 17 ಟೆಸ್ಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದು ದಾಖಲೆಯಗಿತ್ತು. ಅದನ್ನು 1984ರಲ್ಲಿ ಸ್ವರೂಪ್ ಕಿಷನ್ ಸರಿಗಟ್ಟಿದರು. ನಂತರ ವಿ.ಕೆ. ರಾಮಸ್ವಾಮಿ (26 ಟೆಸ್ಟ್) ಮತ್ತು ಎಸ್. ವೆಂಕಟರಾಘವನ್ (1993–2004ರಲ್ಲಿ 73 ಟೆಸ್ಟ್) ಹೊಸ ದಾಖಲೆ ಮಾಡಿದರು.

ಕೋಲ್ಕತ್ತ ಈಡನ್ ಗಾರ್ಡನ್‌ನಲ್ಲಿ 1960ರಲ್ಲಿ ನಡೆದಿದ್ದ ಭಾರತ–ಪಾಕಿಸ್ತಾನ ಟೆಸ್ಟ್‌ನಲ್ಲಿ ಅಂಪೈರಿಂಗ್ ಮಾಡುವ ಮೂಲಕ ಪದಾರ್ಪಣೆ ಮಾಡಿದ್ದರು.

ಅವರು ಅಂಪೈರಿಂಗ್ ಮಾಡಿದ ಕಾಲಘಟ್ಟದಲ್ಲಿ ಭಾರತ ತಂಡದಲ್ಲಿ ಮನ್ಸೂರ್ ಅಲಿಖಾನ್ ಪಟೌಡಿ, ಬಿಷನ್ ಸಿಂಗ್ ಬೇಡಿ, ಬಿ.ಎಸ್. ಚಂದ್ರಶೇಖರ್, ಸುನೀಲ್ ಗಾವಸ್ಕರ್, ಜಿ.ಆರ್. ವಿಶ್ವನಾಥ್ ಅವರಂತಹ ದಿಗ್ಗಜರು ಇದ್ದರು.

ಐದು ಬಾರಿ ರಣಜಿ ಟ್ರೋಫಿ ಮತ್ತು ನಾಲ್ಕು ಸಲ ದುಲೀಪ್ ಟ್ರೋಫಿ ಫೈನಲ್‌ಗಳಲ್ಲಿಯೂ ಅಂಪೈರಿಂಗ್ ಮಾಡಿದ್ದರು.

1970ರಲ್ಲಿ ಕೆಲವು ದೇಶಿ ಪಂದ್ಯಗಳಲ್ಲಿಯೂ ಕಾರ್ಯನಿರ್ವಹಿಸಿದರು. ಬಿಸಿಸಿಐನ ಉತ್ತಮ ಅಂಪೈರ್‌ಗಳನ್ನು ಸಿದ್ಧಗೊಳಿಸುವ ಕಾರ್ಯಕ್ರಮ ಅಂಗವಾಗಿ ಇಂಗ್ಲೆಂಡ್‌ಗೆ ತೆರಳಿದ್ದರು.

ಅಂಪೈರಿಂಗ್‌ನಿಂದ ನಿವೃತ್ತರಾದ ನಂತರ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಗೆ ಕೆಲವು ವರ್ಷಗಳವರೆಗೆ ಸಹಾಯಕ ಕಾರ್ಯದರ್ಶಿ (ಟೂರ್ನಿ ವಿಭಾಗ)ಯಾಗಿದ್ದರು. ಕರ್ನಾಟಕ ಕ್ರಿಕೆಟ್ ಅಂಪೈರ್ಸ್ ಸಂಸ್ಥೆಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಸಂಘದ ಬೆಳವಣಿಗೆಗೆ ಮಹತ್ವದ ಕಾಣಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT