ಲೋಧಾ ಸುಧಾರಣೆಗೆ ಸುಪ್ರೀಂ ಅಸ್ತು

7
ನಾಲ್ಕು ಕ್ರಿಕೆಟ್ ಸಂಸ್ಥೆಗಳಿಗೆ ಶಾಶ್ವತ ಸದಸ್ಯತ್ವ; ರೈಲ್ವೆ, ಸರ್ವಿಸಸ್‌, ವಿವಿಗಳಿಗೆ ಅನುಕೂಲಕರ ತೀರ್ಪು

ಲೋಧಾ ಸುಧಾರಣೆಗೆ ಸುಪ್ರೀಂ ಅಸ್ತು

Published:
Updated:

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಡಳಿತದಲ್ಲಿ ಸುಧಾರಣೆ ತರುವುದಕ್ಕಾಗಿ ರಚಿಸಲಾದ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್‌ ಗುರುವಾರ ಸಮ್ಮತಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ‘ಒಂದು ರಾಜ್ಯ, ಒಂದು ಮತ’ ಪದ್ಧತಿಯನ್ನು ಜಾರಿಗೆ ತರುವಂತೆ ಸೂಚಿಸಿದೆ. ಮುಂಬೈ, ಸೌರಾಷ್ಟ್ರ, ವಡೋದರಾ ಮತ್ತು ವಿದರ್ಭ ಕ್ರಿಕೆಟ್ ಸಂಸ್ಥೆಗಳಿಗೆ ಶಾಶ್ವತ ಸದಸ್ಯತ್ವ ನೀಡಿರುವ ನ್ಯಾಯಪೀಠ ರೈಲ್ವೆ, ಸರ್ವಿಸಸ್ ಮತ್ತು ವಿಶ್ವವಿದ್ಯಾಲಯಗಳ ಕ್ರಿಕೆಟ್ ಸಂಸ್ಥೆಗಳಿಗೂ ಶಾಶ್ವತ ಮಾನ್ಯತೆ ನೀಡಿದೆ.

ಬಿಸಿಸಿಐ ಸಿದ್ಧಪಡಿಸಿರುವ ಹೊಸ ನಿಯಮಾವಳಿಗಳ ಕರಡನ್ನು ಕೆಲವು ಬದಲಾವಣೆಗಳೊಂದಿಗೆ ಜಾರಿಗೆ ತರುವಂತೆಯೂ ನ್ಯಾಯಪೀಠ ಹೇಳಿದ್ದು ಎಲ್ಲ ಕ್ರಿಕೆಟ್ ಸಂಸ್ಥೆಗಳು 30 ದಿನಗಳ ಒಳಗೆ ಈ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಬೇಕು ಎಂದಿದೆ. ಅನುಮೋದನೆ ಪಡೆದಿರುವ ಬಿಸಿಸಿಐ ನಿಯಮಾವಳಿಗಳನ್ನು ದಾಖಲೆ ಸಮೇತ ನಾಲ್ಕು ವಾರಗಳ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ತಮಿಳುನಾಡು ಮುಖ್ಯ ನೋಂದಣಾಧಿಕಾರಿಗೆ ಸೂಚಿಸಿದೆ.

ಚುನಾವಣೆಗೆ ಹಸಿರು ನಿಶಾನೆ
ಬಿಸಿಸಿಐ ಹೊಸ ನಿಯಮಾವಳಿಗಳಿಗೆ ಸಂಬಂಧಿಸಿದ ಕರಡಿಗೆ ಸಂಬಂಧಿಸಿ ನ್ಯಾಯಾಲಯದ ಅಂತಿಮ ತೀರ್ಪು ಹೊರಬೀಳುವ ವರೆಗೆ ಚುನಾವಣೆ ನಡೆಸಬಾರದು ಎಂದು ಕ್ರಿಕೆಟ್ ಸಂಸ್ಥೆಗಳಿಗೆ ಜುಲೈ ಐದರಂದು ನ್ಯಾಯಪೀಠ ತಾಕೀತು ಮಾಡಿತ್ತು. ಈಗ ತೀರ್ಪು ಹೊರಬಿದ್ದ ಕಾರಣ ಚುನಾವಣೆಗೆ ಹಸಿರು ನಿಶಾನೆ ತೋರಿದಂತಾಗಿದೆ.

ಪದಾಧಿಕಾರಿಗಳು ಒಂದೇ ಅವಧಿಯಲ್ಲಿ ಸೇವೆ ಸಲ್ಲಿಸಲು ಅರ್ಹ ಎಂಬ ನಿಯಮವನ್ನು ಮರುಪರಿಶೀಲನೆ ಮಾಡಿರುವ ನ್ಯಾಯಪೀಠ ಪದಾಧಿಕಾರಿಗಳು ಎರಡು ಅವಧಿಗಳ ವರೆಗೆ ಸೇವೆ ಸಲ್ಲಿಸಬಹುದಾಗಿದ್ದು ನಂತರ ‘ಕೂಲಿಂಗ್ ಆಫ್‌’ ಅವಧಿಯಲ್ಲಿರಬೇಕಾಗುತ್ತದೆ ಎಂದಿದೆ. ಲೋಧಾ ಸಮಿತಿಯ ಶಿಫಾರಸುಗಳಲ್ಲಿ ಒಂದಾಗಿರುವ ಕೂಲಿಂಗ್ ಆಫ್ ಅವಧಿಯ ಬಗ್ಗೆ ತಮಿಳುನಾಡು ಕ್ರಿಕೆಟ್ ಸಂಸ್ಥೆ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !