ಭಾನುವಾರ, ಸೆಪ್ಟೆಂಬರ್ 20, 2020
23 °C
ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಧೋನಿ ಬಳಗದ ಹಣಾಹಣಿ; ರಾಯುಡು ಮೇಲೆ ಎಲ್ಲರ ಕಣ್ಣು

ಪ್ಲೇ ಆಫ್‌ ಹಂತದತ್ತ ಸಿಎಸ್‌ಕೆ ನೋಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ಅಮೋಘ ಆಟದ ಮೂಲಕ ಟೂರ್ನಿಯ ಉದ್ದಕ್ಕೂ ಗಮನ ಸೆಳೆದಿರುವ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡ ಐಪಿಎಲ್‌ 12ನೇ ಆವೃತ್ತಿಯ ಪ್ಲೇ ಆಫ್ ಹಂತಕ್ಕೇರಿದ ಮೊದಲ ತಂಡ ಎಂದೆನಿಸಿಕೊಳ್ಳಲು ಇನ್ನು ಒಂದು ಹೆಜ್ಜೆ ಉಳಿದಿದೆ.

ಎಂಟು ಪಂದ್ಯಗಳ ಪೈಕಿ ಏಳನ್ನು ಗೆದ್ದಿರುವ ಸಿಎಸ್‌ಕೆ ಬುಧವಾರ ಇಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ಹಂತಕ್ಕೇರಲಿದೆ.

ವಿಶ್ವಕಪ್‌ ಟೂರ್ನಿಗಾಗಿ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ಸ್ಥಾನ ಗಳಿಸಲು ವಿಫಲರಾಗಿರುವ ಅಂಬಟಿ ರಾಯುಡು ಮೇಲೆ ಈ ಪಂದ್ಯದಲ್ಲಿ ಎಲ್ಲರ ಕಣ್ಣು ನೆಡಲಿದೆ. ಸಿಎಸ್‌ಕೆಯ ಇಲ್ಲಿಯ ವರೆಗಿನ ಹಾದಿ ಸುಗಮವಾಗುವಲ್ಲಿ ಅಂಬಟಿ ಮಹತ್ವದ ಪಾತ್ರ ವಹಿಸಿದ್ದಾರೆ. ಎಂಟು ಪಂದ್ಯಗಳಲ್ಲಿ 138 ರನ್‌ ಗಳಿಸಿರುವ ಅವರು ವಿಶ್ವಕಪ್‌ಗೆ ಆಯ್ಕೆಯಾಗದೆ ನಿರಾಸೆ ಅನುಭವಿಸಿದ್ದಾರೆ.

ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಸಿಎಸ್‌ಕೆ ಬುಧವಾರದ ಪಂದ್ಯದಲ್ಲಿ ನಿರಾಳವಾಗಿ ಕಣಕ್ಕೆ ಇಳಿಯಲಿದೆ. ಆದರೆ ಸತತ ಮೂರು ಪಂದ್ಯಗಳನ್ನು ಸೋತಿರುವ ಸನ್‌ರೈಸರ್ಸ್ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವಿನ ಹಾದಿಯಲ್ಲಿದ್ದ ತಂಡ ದಿಢೀರ್‌ ಬ್ಯಾಟಿಂಗ್‌ ವೈಫಲ್ಯ ಕಂಡು ಸೋಲಿನ ಸುಳಿಗೆ ಬಿದ್ದಿತ್ತು.‌

ಯಾವುದೇ ಅಂಗಣದಲ್ಲಿ, ಎಂಥ ಪರಿಸ್ಥಿತಿಯಲ್ಲೂ ಗೆಲ್ಲುವ ಸಾಮರ್ಥ್ಯ ಬೆಳೆಸಿಕೊಂಡಿರುವ ಸಿಎಸ್‌ಕೆ ಪ್ರತಿ ಪಂದ್ಯದಲ್ಲೂ ತಂತ್ರಗಳನ್ನು ಬದಲಿಸುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ತಂಡ ಬಲಿಷ್ಠವಾಗಿದೆ. ಅತ್ತ ಸನ್‌ರೈರ್ಸ್‌ ಬ್ಯಾಟಿಂಗ್ ವಿಭಾಗದ ಆರಂಭಿಕ ಜೋಡಿ ಜಾನಿ ಬೇಸ್ಟೊ ಮತ್ತು ಡೇವಿಡ್‌ ವಾರ್ನರ್‌ ಮೇಲೆ ಅವಲಂಬಿತವಾಗಿದೆ.  

ವಾರ್ನರ್ ಈ ವರೆಗೆ 400 ರನ್‌ಗಳನ್ನು ಕಲೆ ಹಾಕಿದ್ದು ಬೇಸ್ಟೊ ಬಗಲಲ್ಲಿ 304 ರನ್‌ಗಳಿವೆ. ಇವರಿಬ್ಬರನ್ನು ಹೊರತುಪಡಿಸಿದರೆ ತಂಡಕ್ಕೆ ಬಲ ತುಂಬಿರುವವರು ವಿಜಯಶಂಕರ್‌. ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿರುವ ತಂಡದಲ್ಲಿ ಸ್ಥಾನ ಗಳಿಸಿರುವುದರಿಂದ ಈ ಪಂದ್ಯದಲ್ಲಿ ಅವರ ಹುರುಪು ಹೆಚ್ಚಲಿದೆ.

ಮಧ್ಯಮ ಕ್ರಮಾಂಕದ ವೈಫಲ್ಯ: ಮನೀಷ್ ಪಾಂಡೆ ಒಳಗೊಂಡ ಮಧ್ಯಮ ಕ್ರಮಾಂಕ ಸತತ ವೈಫಲ್ಯ ಅನುಭವಿಸುತ್ತಿರುವುದು ಸನ್‌ರೈಸರ್ಸ್‌ನಲ್ಲಿ ಆತಂಕ ಸೃಷ್ಟಿಸಿದೆ. ಪಾಂಡೆ ಆರು ಪಂದ್ಯಗಳಲ್ಲಿ 54 ರನ್‌ ಗಳಿಸಿದ್ದರೆ ದೀಪಕ್ ಹೂಡ 47 ಮತ್ತು ಯೂಸುಫ್ ಪಠಾಣ್‌ 32 ರನ್‌ ಗಳಿಸಿದ್ದಾರೆ.

ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಣೆಯುವ ತಂತ್ರಗಳಿಗೆ ಆಟಗಾರರು ಸಮರ್ಥವಾಗಿ ಸ್ಪಂದಿಸುತ್ತಿರುವುದು ಆ ತಂಡದ ಯಶಸ್ಸಿಗೆ ಪ್ರಮುಖ ಕಾರಣ. ಹರಭಜನ್ ಸಿಂಗ್‌, ಮಿಷೆಲ್‌ ಸ್ಯಾಂಟನರ್‌ ಮುಂತಾದವರು ಈಗಾಗಲೇ ನಾಯಕನ ಭರವಸೆಗೆ ಕಾರಣರಾಗಿದ್ದಾರೆ. 40 ವರ್ಷದ ಇಮ್ರಾನ್ ತಾಹಿರ್ 13 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು