ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟಿಂಗ್ ಬಲಾಢ್ಯರ ಮುಖಾಮುಖಿ; ಚಾಂಪಿಯನ್ನರಿಗೆ ಇಂಗ್ಲೆಂಡ್ ಸವಾಲು

ಆತಿಥೇಯರಿಗೆ ಫೈನಲ್‌ ಮೇಲೆ ಕಣ್ಣು
Last Updated 10 ಜುಲೈ 2019, 19:24 IST
ಅಕ್ಷರ ಗಾತ್ರ

ಬರ್ಮಿಂಗಹ್ಯಾಂ: ಜಗತ್ತಿಗೆ ಕ್ರಿಕೆಟ್‌ ಆಟವನ್ನು ಪರಿಚಯಿಸಿದ ಇಂಗ್ಲೆಂಡ್ ತಂಡಕ್ಕೆ ಚೊಚ್ಚಲ ವಿಶ್ವಕಪ್ ಜಯಿಸುವ ಛಲ. ಐದು ಸಲ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡಕ್ಕೆ ಕಿರೀಟ ಉಳಿಸಿಕೊಳ್ಳುವ ಗುರಿ.

ಆ್ಯಷಸ್‌ ಟೆಸ್ಟ್ ಕ್ರಿಕೆಟ್ ಇತಿಹಾಸದ ಈ ಎರಡು ಬದ್ಧ ಎದುರಾಳಿಗಳ ನಡುವಣ ಸೆಮಿಫೈನಲ್ ಹಣಾಹಣಿ ಗುರುವಾರ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ತವರಿನಲ್ಲಿಯೇ ವಿಶ್ವಕಪ್‌ಗೆ ಮುತ್ತಿಕ್ಕುವ ಸಾಮರ್ಥ್ಯ ತನಗಿದೆ ಎಂಬುದನ್ನು ರೌಂಡ್ ರಾಬಿನ್ ಲೀಗ್‌ನಲ್ಲಿ ಸಾಬೀತುಪಡಿಸಿದೆ. ಲೀಗ್ ಹಂತದ ಮಧ್ಯದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದ ಇಯಾನ್ ಮಾರ್ಗನ್ ಬಳಗವು ಪುಟಿದೆದ್ದ ರೀತಿಯು ಅಮೋಘ. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಎದುರು ಸೋತ ನಂತರ ಟೂರ್ನಿಯಿಂದ ಹೊರಬೀಳುವ ಆತಂಕ ಎದುರಿಸಿತ್ತು.

ಆದರೆ ಗಾಯದಿಂದ ಚೇತರಿಸಿಕೊಂಡು ಬಂದ ಜೇಸನ್ ರಾಯ್ ಮತ್ತು ಜಾನಿ ಬೆಸ್ಟೊ ಅವರ ಶ್ರೇಷ್ಠ ಆರಂಭಿಕ ಜೊತೆಯಾಟಗಳಿಂದ ತಂಡವು ಸೆಮಿಫೈನಲ್ ಹಾದಿಗೆ ಮರಳಿತು. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಲು ಕಾರಣವಾಯಿತು.

2015ರ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವು ಗುಂಪು ಹಂತದಲ್ಲಿಯೇ ಹೊರಬಿದ್ದಿತ್ತು. ಆದರೆ 1979. 1987 ಮತ್ತು 1992 ರಲ್ಲಿ ಫೈನಲ್ ತಲುಪಿದ್ದ ತಂಡವು ನಿರಾಸೆ ಅನುಭವಿಸಿತ್ತು.

ಆದರೆ ಈ ಸಲ ಪ್ರತಿಭಾವಂತ ಮತ್ತು ಅನುಭವಿ ಆಟಗಾರರು ಇರುವ ಇಂಗ್ಲೆಂಡ್ ತಂಡವು ಫೈನಲ್ ತಲುಪುವ ನೆಚ್ಚಿನ ಕುದುರೆಯಾಗಿದೆ. ಜೇಸನ್, ಜಾನಿ, ಜೋ ರೂಟ್, ಮಾರ್ಗನ್ ಮತ್ತು ಬೆನ್ಸ್ ಸ್ಟೋಕ್ಸ್‌ ಅವರು ಉತ್ತಮ ಲಯದಲ್ಲಿರುವುದು ಬ್ಯಾಟಿಂಗ್ ವಿಭಾಗದ ತಾಕತ್ತು ಹೆಚ್ಚಿಸಿದೆ. ಬೌಲಿಂಗ್‌ನಲ್ಲಿ ಶರವೇಗಿಗಳಾದ ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಪ್ಲಂಕೆಟ್ ಮತ್ತು ಮಾರ್ಕ್ ವುಡ್ ಅವರಿಗೆ ಅವರೇ ಸಾಟಿ.ಆದರೆ ಆಸ್ಟ್ರೇಲಿಯಾದ ಬ್ಯಾಟಿಂಗ್ ಪಡೆಯೂ ಕಮ್ಮಿಯೇನಿಲ್ಲ.

ಡೇವಿಡ್ ವಾರ್ನರ್, ನಾಯಕ ಆ್ಯರನ್ ಫಿಂಚ್, ಸ್ಟೀವ್ ಸ್ಮಿತ್ ಮತ್ತು ಅಲೆಕ್ಸ್‌ ಕ್ಯಾರಿ ಅವರು ಬದ್ಧತೆಯುಳ್ಳ ಆಟಗಾರರು. ಎಲ್ಲ ಬೌಲರ್‌ಗಳಿಗೂ ಬೆವರಿಳಿಸುವ ಸಮರ್ಥರು.ಆಲ್‌ರೌಂಡರ್ ಪೀಟರ್ ಹ್ಯಾಂಡ್ಸ್‌ಕಂಬ್ ಅವರು ಗಾಯಾಳು ಉಸ್ಮಾನ್ ಖ್ವಾಜಾ ಬದಲಿಗೆ ಕಣಕ್ಕಿಳಿಯುವುದು ಖಚಿತ ಎಂದು ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ.

ನೇಥನ್ ಕೌಲ್ಟರ್‌ ನೈಲ್, ಗ್ಲೆನ್ ಮ್ಯಾಕ್ಸ್‌ವೆಲ್ ತಂಡವನ್ನು ಸಂಕಷ್ಟದಿಂದ ಮೇಲೆತ್ತಿ ತರುವ ಛಲಗಾರರು. ಬೌಲಿಂಗ್‌ನಲ್ಲಿಯೂ ಸಮರ್ಥರಿದ್ದಾರೆ. ಪ್ಯಾಟ್ ಕಮಿನ್ಸ್‌, , ಮಿಷೆಲ್ ಸ್ಟಾರ್ಕ್ ಅವರನ್ನು ಎದುರಿಸಿ ನಿಲ್ಲಲು ಇಂಗ್ಲಿಷ್ ಪಡೆಯುವ ವಿಶೇಷ ಯೋಜನೆಯೊಂದಿಗೆ ಕಣಕ್ಕಿಳಿಯಲೇಬೇಕು. ಇಲ್ಲದಿದ್ದರೆ ತಲೆದಂಡ ಖಚಿತ.

‘ಒಂದು ವರ್ಷದ ಹಿಂದೆ ನಮ್ಮ ತಂಡವು ಹೀಗಿರಲಿಲ್ಲ. ಆದರೆ ಈಗ ಆಸ್ಟ್ರೇಲಿಯಾದ ಕ್ರಿಕೆಟ್ ತಂಡವು ಬಲಿಷ್ಠವಾಗಿದೆ. ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಎಲ್ಲ ಅರ್ಹತೆಯೂ ಅದಕ್ಕಿದೆ’ ಎಂದು ಕೋಚ್ ಲ್ಯಾಂಗರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಳೆ ಸಾಧ್ಯತೆ: ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೊದಲ ಸೆಮಿಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಆದ್ದರಿಂದ ಕಾಯ್ದಿಟ್ಟ ದಿನಕ್ಕೂ ಪಂದ್ಯ ವಿಸ್ತರಿಸಿತ್ತು.

ಗುರುವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಆದ್ದರಿಂದ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗುವ ಎಲ್ಲ ಸಾಧ್ಯತೆಗಳೂ ಇವೆ ಎನ್ನಲಾಗಿದೆ.

ತಂಡಗಳು
ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಜೇಸನ್ ಬೆಹ್ರನ್‌ಡಾರ್ಫ್‌, ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್), ನೇಥನ್ ಕೌಲ್ಟರ್‌ ನೈಲ್, ಪ್ಯಾಟ್ ಕಮಿನ್ಸ್‌, ಪೀಟರ್ ಹ್ಯಾಂಡ್ಸ್‌ಕಂಬ್, ಉಸ್ಮಾನ್ ಖ್ವಾಜಾ, ನೇಥನ್ ಲಯನ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡಸನ್, ಸ್ಟೀವ್ ಸ್ಮಿತ್, ಮಿಷೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಜಂಪಾ, ಮ್ಯಾಥ್ಯೂ ವೇಡ್.

ಇಂಗ್ಲೆಂಡ್: ಇಯಾನ್ ಮಾರ್ಗನ್ (ನಾಯಕ), ಜಾನಿ ಬೆಸ್ಟೊ, ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್‌, ಜೇಮ್ಸ್ ವಿನ್ಸಿ, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಮೊಯಿನ್ ಅಲಿ, ಜೋಫ್ರಾ ಅರ್ಚರ್, ಟಾಮ್ ಕರನ್. ಲಿಯಾಮ್ ಡಾಸನ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ಪಂದ್ಯ ಆರಂಭ: ಮಧ್ಯಾಹ್ನ 3

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ಇಂಗ್ಲಿಷ್, ಹಿಂದಿ ಮತ್ತು ಕನ್ನಡ

**

ಹೋದ ನಾಲ್ಕು ವರ್ಷಗಳಲ್ಲಿ ನಾವು ಉತ್ತಮವಾಗಿ ಆಡಿದ್ದೇವೆ. ರ‍್ಯಾಂಕಿಂಗ್‌ನಲ್ಲಿಯೂ ಅಗ್ರಸ್ಥಾನದಲ್ಲಿದ್ದೇವೆ. ವಿಶ್ವದ ಯಾವುದೇ ತಂಡದ ಎದುರೂ ಗೆಲ್ಲುವ ಸಾಮರ್ಥ್ಯ ನಮಗಿದೆ.
-ಲಿಯಾಮ್ ಪ್ಲಂಕೆಟ್, ಇಂಗ್ಲೆಂಡ್ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT