ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಕ್ಕಿಯೊಂದಿಗೆ ಚಾಟ್‌: ಬಾಂಗ್ಲಾದ ಶಕೀಬ್ ಅಲ್ ಹಸನ್‌ಗೆ 2 ವರ್ಷ ನಿಷೇಧ ಶಿಕ್ಷೆ

ಆಮಿಷದ ವಿಷಯ ಮುಚ್ಚಿಟ್ಟಿದ್ದಕ್ಕೆ ಐಸಿಸಿ ಕ್ರಮ
Last Updated 30 ಅಕ್ಟೋಬರ್ 2019, 5:47 IST
ಅಕ್ಷರ ಗಾತ್ರ

ಢಾಕಾ : ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಎರಡು ವರ್ಷಗಳ ಅವಧಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎಲ್ಲ ಮಾದರಿಗಳ ಕ್ರಿಕೆಟ್‌ನಿಂದ ನಿಷೇಧ ಮಾಡಿದೆ. ಎರಡು ವರ್ಷಗಳ ಹಿಂದೆ ಬುಕ್ಕಿಯೊಬ್ಬರು ತಮ್ಮನ್ನು ಭೇಟಿಯಾಗಿ ಆಮಿಷ ಒಡ್ಡಿದ ವಿಚಾರವನ್ನು ಶಕೀಬ್ ಮುಚ್ಚಿಟ್ಟಿದ್ದರು. ಈ ವಿಷಯ ಈಗ ಬಹಿರಂಗವಾಗಿದೆ.

ಐಸಿಸಿಯ ಭ್ರಷ್ಟಾಚಾರ ತಡೆ ಸಂಹಿತೆಯನ್ನು ಉಲ್ಲಂಘನೆಯ ಮೂರು ಆರೋಪಗಳನ್ನು ಶಕೀಬ್‌ ಒಪ್ಪಿದ ನಂತರ ಈ ನಿಷೇಧ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಷರತ್ತಿಗೆ ಒಳಪಟ್ಟು ಒಂದು ವರ್ಷ ನಿಷೇಧ ಶಿಕ್ಷೆಯ ಅಮಾನತಿಗೆ ಅವಕಾಶ ಇದೆ. ಹೀಗಾಗಿ ಶಕೀಬ್‌ 2020ರ ಅಕ್ಟೋಬರ್‌ 29ರ ನಂತರ ಕ್ರಿಕೆಟ್‌ಗೆ ಮರಳಬಹುದು.

2018ರ ಜನವರಿಯಲ್ಲಿ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಜಿಂಬಾಬ್ವೆಯನ್ನು ಒಳಗೊಂಡ ತ್ರಿಕೋನ ಸರಣಿಯಲ್ಲಿ ಮತ್ತು ಅದೇ ವರ್ಷದ ಐಪಿಎಲ್‌ನಲ್ಲಿ ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿದ್ದ ವಿವರವನ್ನು ಅವರು ಐಸಿಸಿಯ ಭ್ರಷ್ಟಾಚಾರ ತಡೆ ಘಟಕಕ್ಕೆ ತಿಳಿಸಿರಲಿಲ್ಲ ಎಂದು ಐಸಿಸಿ ಹೇಳಿಕೆ ತಿಳಿಸಿದೆ.

ತಂಡದ ಪ್ರಮುಖ ಆಟಗಾರನಾದ ಶಕೀಬ್‌ ಮೇಲಿನ ನಿಷೇಧವು, ಬಾಂಗ್ಲಾದೇಶ ತಂಡದ ಸಿದ್ಧತೆಗೆ ಬಲವಾದ ಪೆಟ್ಟು ನೀಡಿದೆ. ಅವರಿ ಮೂರು ಟ್ವೆಂಟಿ–20 ಪಂದ್ಯ ಮತ್ತು ಎರಡು ಟೆಸ್ಟ್‌ ಸರಣಿಗೆ ನಾಯಕತ್ವ ವಹಿಸಬೇಕಾಗಿತ್ತು.

ಶಕೀಬ್‌ 56 ಟೆಸ್ಟ್‌ ಪಂದ್ಯಗಳನ್ನು, 206 ಏಕದಿನ ಮತ್ತು 76 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. ಐಸಿಸಿ ಆಲ್‌ರೌಂಡರ್‌ಗಳ ವಿಭಾಗದಲ್ಲಿ ಅವರು ಅಗ್ರಸ್ಥಾನ ಪಡೆದಿದ್ದರು. ಈ ವರ್ಷದ ಮಧ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅವರು 600ಕ್ಕೂ ಹೆಚ್ಚು ರನ್‌ ಮತ್ತು 11 ವಿಕೆಟ್‌ಗಳನ್ನು ಪಡೆದಿದ್ದರು.

ಶಕೀಬ್‌, ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಇದುವರೆಗೆ 11,000ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. 500ಕ್ಕೂ ಹೆಚ್ಚು ವಿಕೆಟ್‌ ಪಡೆದಿದ್ದಾರೆ.‌

‘ನಾನು ಪ್ರೀತಿಸಿದ ಆಟದಿಂದ ನಿಷೇಧ ಅನುಭವಿಸಿದ್ದರಿಂದ ಅತೀವ ಬೇಸರವಾಗಿದೆ. ಆದರೆ ನನಗೆ ಬಂದ ಸಂಪರ್ಕದ ವಿಚಾರಗಳನ್ನು ಹೇಳದ ಕಾರಣ ಶಿಕ್ಷೆಯನ್ನು ಒಪ್ಪಿಕೊಳ್ಳುತ್ತೇನೆ’ ಎಂಬ ಅವರು ಪ್ರತಿಕ್ರಿಯೆ ಐಸಿಸಿ ಹೇಳಿಕೆಯಲ್ಲಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಸೂಚನೆ ಮೇರೆಗೆ ಶಕೀಬ್‌ ಅವರನ್ನು ತಂಡದ ಅಭ್ಯಾಸ ಪಂದ್ಯಗಳಿಂದ ಹೊರಡಗಿಡಲಾಗಿತ್ತು. ಕೋಲ್ಕತ್ತದಲ್ಲಿ ಹೊನಲು ಬೆಳಕಿನ ಟೆಸ್ಟ್‌ ಪಂದ್ಯ ಸಂಬಂಧ ಸೋಮವಾರ ತಡರಾತ್ರಿ ನಡೆದ ಮಂಡಳಿ ಮತ್ತು ಆಟಗಾರರ ಸಭೆಯಲ್ಲೂ ಅವರು ಇರಲಿಲ್ಲ.

ನವೆಂಬರ್‌ 3ರಂದು ಆರಂಭವಾಗಲಿರುವ ಭಾರತ ಪ್ರವಾಸದ ಸಂದರ್ಭದಲ್ಲಿ ಬಾಂಗ್ಲಾದೇಶ ಮೂರು ಟ್ವೆಂಟಿ–20 ಪಂದ್ಯಗಳನ್ನು, ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

ಬುಧವಾರ ತಂಡ ಪ್ರವಾಸ ಹೊರಡಲಿದ್ದು, ಶಕೀಬ್‌ ಬದಲಿಗೆ ಹಿರಿಯ ಆಟಗಾರ ಮುಷ್ಫಿಕುರ್‌ ರಹೀಮ್‌ ಟೆಸ್ಟ್‌ ತಂಡದ ನಾಯಕತ್ವ ವಹಿಸುವ ಸಾಧ್ಯತೆಯಿದೆ. ಮಹಮದುಲ್ಲಾ ಅಥವಾ ಮೊಸಾದಿಕ್ ಹುಸೇನ್‌ ಟ್ವೆಂಟಿ– ಟ್ವೆಂಟಿ ತಂಡದ ನಾಯಕರಾಗುವ ಸಾಧ್ಯತೆ ಇದೆ.

‘ಐಸಿಸಿ ಒತ್ತಡದ ಕಾರಣ ಶಕೀಬ್‌ ಅವರನ್ನು ಕ್ರಿಕೆಟ್‌ ಮಂಡಳಿಯು ತಂಡದ ಅಭ್ಯಾಸ ಶಿಬಿರದಿಂದ ಹೊರಗಿಟ್ಟಿತು. ಆದೇ ಕಾರಣ ಅವರು ಮಂಡಳಿ ಜೊತೆಗಿನ ಸಭೆಯಲ್ಲೂ ಭಾಗವಹಿಸಿಲ್ಲ’ ಎಂದುಬಾಂಗ್ಲಾದೇಶದ ಪ್ರಮುಖ ದೈನಿಕ ‘ಸಮಕಾಲ್‌’ ವರದಿ ಮಾಡಿತ್ತು.

ಎರಡು ವರ್ಷಗಳ ಹಿಂದೆ, ಅಂತರರಾಷ್ಟ್ರೀಯ ಪಂದ್ಯವೊಂದಕ್ಕೆ ಮುನ್ನ ಬುಕ್ಕಿಯೊಬ್ಬ ಶಕೀಬ್‌ ಅವರನ್ನು ಸಂಪರ್ಕಿಸಿ ಆಮಿಷವೊಡ್ಡಲು ಮುಂದಾಗಿದ್ದ. ಇದನ್ನು ಅವರು ಐಸಿಸಿಯ ಭ್ರಷ್ಟಾಚಾರ ತಡೆ ಮತ್ತು ಭದ್ರತಾ ಘಟಕದ ಗಮನಕ್ಕೆ ತಂದಿರಲಿಲ್ಲ. ಬುಕ್ಕಿಯೊಬ್ಬ ತಮ್ಮನ್ನು ಸಂಪರ್ಕಿಸಿದ್ದನ್ನುಘಟಕದ ತನಿಖಾ ಅಧಿಕಾರಿಗಳ ಮುಂದೆ ಇತ್ತೀಚೆಗೆ ಶಕೀಬ್‌ ಒಪ್ಪಿಕೊಂಡಿದ್ದಾರೆ ಎಂದು ಪತ್ರಿಕೆ ವರದಿಯಲ್ಲಿ ತಿಳಿಸಿತ್ತು.

ವೇತನ ಹೆಚ್ಚಳ ಮತ್ತಿತರ ಸೌಲಭ್ಯಗಳಿಗಾಗಿ ಇತ್ತೀಚೆಗೆ ಬಾಂಗ್ಲಾದೇಶ ಆಟಗಾರರು ಮುಷ್ಕರ ಹೂಡಿದಾಗ, ಶಕೀಬ್‌ ಅದರ ನೇತೃತ್ವ ವಹಿಸಿದ್ದರು. ಈ ಬೇಡಿಕೆಗಳನ್ನು ಈಡೇರಿಸಲು ಬಿಸಿಬಿ ಒಪ್ಪಿಕೊಂಡಿತ್ತು.

ಮುಖ್ಯಾಂಶಗಳು

* ಮುಷ್ಫಿಕರ್‌ಗೆ ಟೆಸ್ಟ್‌ ನಾಯಕತ್ವ ಸಾಧ್ಯತೆ

* ನವೆಂಬರ್‌ 3ರಂದು ಭಾರತ ಪ್ರವಾಸ ಆರಂಭ

* ಶಕೀಬ್‌ ವಿರುದ್ಧ ಬಿಸಿಬಿ ಅಧ್ಯಕ್ಷ ನಜ್ಮಲ್‌ ಗರಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT