ನವದೆಹಲಿ (ಪಿಟಿಐ): ಅನುಭವಿ ಮಧ್ಯಮವೇಗಿ ಮೊಹಮ್ಮದ್ ಶಮಿ ಗಾಯದಿಂದ ಗುಣಮುಖರಾಗಿದ್ದು ಇದೇ 10ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಆಡಲು ಸಮರ್ಥರಾಗಿದ್ದಾರೆ.
ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಈಚೆಗೆ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಅವರು ವಿಶ್ರಾಂತಿ ಪಡೆದಿದ್ದರು. ಇದೀಗ ಫಿಟ್ ಆಗಿರುವ ಅವರು ಬುಧವಾರದ ಅಭ್ಯಾಸದಲ್ಲಿ ಭಾಗವಹಿಸಿದ್ದರು ಎಂದು ತಂಡದ ಮೂಲಗಳು ತಿಳಿಸಿವೆ.
‘ಶಮಿ ಫಿಟ್ ಆಗಿದ್ದಾರೆ. ಆದ್ದರಿಂದ ಅವರು ಐದನೇ ಪಂದ್ಯದಲ್ಲಿ ಆಡುವುದು ಖಚಿತ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರಣಿಯಲ್ಲಿ ಒಂದು ಪಂದ್ಯ ಮಾತ್ರ ಆಡಿರುವ ಉಮೇಶ್ ಯಾದವ್ (6 ವಿಕೆಟ್) ಮತ್ತು ಶಾರ್ದೂಲ್ ಠಾಕೂರ್ (3 ವಿಕೆಟ್ ಮತ್ತು ಎರಡು ಅರ್ಧಶತಕ) ಗಮನ ಸೆಳೆದಿದ್ದಾರೆ. ಆದ್ದರಿಂದ ಅವರಲ್ಲಿ ಯಾರನ್ನೂ ಕೈಬಿಡುವ ಸಾಧ್ಯತೆ ಇಲ್ಲ. ನಾಲ್ಕು ಪಂದ್ಯಗಳಲ್ಲಿ ಆಡಿರುವ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅವರ ಜಾಗಕ್ಕೆ ಶಮಿ ಮರಳಬಹುದು. ಬೂಮ್ರಾ ಮುಂದುವರಿದರೆ ಮೊಹಮ್ಮದ್ ಸಿರಾಜ್ ಗೆ ವಿಶ್ರಾಂತಿ ಸಿಗಬಹುದು ಎನ್ನಲಾಗುತ್ತಿದೆ.
ಮ್ಯಾಂಚೆಸ್ಟರ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳಿಗೆ ಅವಕಾಶ ಕೊಟ್ಟರೆ ಆರ್. ಅಶ್ವಿನ್ ಕಣಕ್ಕಿಳಿಯಬಹುದು. ಅವರು ಇದುವರೆಗಿನ ಸರಣಿಯಲ್ಲಿ ಒಂದೂ ಪಂದ್ಯವಾಡಿಲ್ಲ.
ರೋಹಿತ್–ಪೂಜಾರ ಫಿಟ್‌ನೆಸ್
ಓವಲ್ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
ರೋಹಿತ್ ಮೊಣಕಾಲಿಗೆ ಮತ್ತು ಪೂಜಾರ ಅವರ ಹಿಮ್ಮಡಿಗೆ ಗಾಯವಾಗಿತ್ತು. ಅವರನ್ನು ಕಣಕ್ಕಿಳಿಸುವ ಬಗ್ಗೆ ಶುಕ್ರವಾರ ಬೆಳಗಿನವರೆಗೆ ಕಾದು ನೋಡುವ ಸಾಧ್ಯತೆ ಇದೆ.
ಒಂದೊಮ್ಮೆ ರೋಹಿತ್ ಆಡದಿದ್ದರೆ ಅಭಿಮನ್ಯು ಈಶ್ವರನ್, ಮಯಂಕ್ ಅಗರವಾಲ್ ಮತ್ತು ಪೃಥ್ವಿ ಶಾ ಅವರಲ್ಲಿ ಒಬ್ಬರಿಗೆ ಸ್ಥಾನ ಸಿಗಬಹುದು. ಪೂಜಾರ ಗುಣಮುಖರಾಗದಿದ್ದರೆ ಹನುಮವಿಹಾರಿ ಮತ್ತು ಸೂರ್ಯಕುಮಾರ್ ಯಾದವ್ ಅವರಲ್ಲಿ ಒಬ್ಬರಿಗೆ ಅವಕಾಶ ಲಭಿಸಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.