ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯದ ಸಮಸ್ಯೆ: ವಿಶ್ವಕಪ್‌ನಿಂದ ಮಾರ್ಷ್‌ ‘ಔಟ್‌’

Last Updated 5 ಜುಲೈ 2019, 19:30 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌: ಅಭ್ಯಾಸದ ವೇಳೆ ಗಾಯಗೊಂಡಿರುವ ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್‌ ಶಾನ್‌ ಮಾರ್ಷ್‌ ವಿಶ್ವಕಪ್‌ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ಓಲ್ಡ್‌ ಟ್ರಾಫರ್ಡ್‌ ಅಂಗಳದ ನೆಟ್ಸ್‌ನಲ್ಲಿ ಗುರುವಾರ ಬ್ಯಾಟಿಂಗ್‌ ಮಾಡುವ ವೇಳೆ ಪ್ಯಾಟ್‌ ಕಮಿನ್ಸ್‌ ಹಾಕಿದ ಎಸೆತವು ಮಾರ್ಷ್‌ ಅವರ ಬಲ ಮಣಿಕಟ್ಟಿಗೆ ಬಡಿದಿದೆ. ಇದರ ಪರಿಣಾಮ ಮೂಳೆ ಮುರಿದಿದ್ದು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ.

ಇದೇ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ತಾಲೀಮು ನಡೆಸುವ ವೇಳೆ ವೇಗದ ಬೌಲರ್‌ ಮಿಷೆಲ್‌ ಸ್ಟಾರ್ಕ್‌ ಹಾಕಿದ ಎಸೆತವು ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಬಲಗೈಗೆ ಬಡಿದಿದೆ. ಮ್ಯಾಕ್ಸ್‌ವೆಲ್‌ಗೆ ಆಗಿರುವ ಗಾಯ ಗಂಭೀರ ಸ್ವರೂಪದ್ದಲ್ಲ ಎಂದು ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ತಿಳಿಸಿದ್ದಾರೆ.

‘35 ವರ್ಷದ ಮಾರ್ಷ್‌ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿರುವುದು ಸ್ಕ್ಯಾನಿಂಗ್‌ನಿಂದ ದೃಢಪಟ್ಟಿದೆ. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಹೀಗಾಗಿ ವಿಶ್ವಕಪ್‌ನ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಬದಲು ಪೀಟರ್‌ ಹ್ಯಾಂಡ್ಸ್‌ಕಂಬ್‌ ತಂಡ ಸೇರಿಕೊಳ್ಳಲಿದ್ದಾರೆ. ಇದಕ್ಕೆ ವಿಶ್ವಕಪ್‌ ತಾಂತ್ರಿಕ ಸಮಿತಿಯು ಒಪ್ಪಿಗೆ ನೀಡಿದೆ’ ಎಂದು ಲ್ಯಾಂಗರ್‌ ಹೇಳಿದ್ದಾರೆ.

‘ವಿಶ್ವಕಪ್‌ಗೂ ಮುನ್ನ ಭಾರತ ಮತ್ತು ಯು.ಎ.ಇ.ಯಲ್ಲಿ ನಡೆದಿದ್ದ ಸರಣಿಗಳಲ್ಲಿ ಹ್ಯಾಂಡ್ಸ್‌ಕಂಬ್‌ ಉತ್ತಮ ಸಾಮರ್ಥ್ಯ ತೋರಿದ್ದರು. ಹೀಗಾಗಿಯೇ ಅವಕಾಶ ನೀಡಲಾಗಿದೆ. ಅವರು ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ’ ಎಂದಿದ್ದಾರೆ.

‘ಮ್ಯಾಕ್ಸ್‌ವೆಲ್‌ ಬೇಗನೆ ಚೇತರಿಸಿಕೊಂಡು ದಕ್ಷಿಣ ಆಫ್ರಿಕಾ ಎದುರಿನ ಅಂತಿಮ ಲೀಗ್‌ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT