ಶ್ರೇಯಸ್, ಅಂಕಿತ್ ಬ್ಯಾಟಿಂಗ್ ಸೊಬಗು

7
ಕ್ರಿಕೆಟ್: ಭಾರತ ‘ಎ’ –ದಕ್ಷಿಣ ಆಫ್ರಿಕಾ ‘ಎ’ ನಡುವಣ ಪಂದ್ಯ ಡ್ರಾ

ಶ್ರೇಯಸ್, ಅಂಕಿತ್ ಬ್ಯಾಟಿಂಗ್ ಸೊಬಗು

Published:
Updated:

ಬೆಂಗಳೂರು: ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣವು ‘ಶ್ರಾವಣದ ಮಳೆ‘ಯಲ್ಲಿ ತೊಯ್ದು ತೊಪ್ಪೆಯಾಗುವ ಮುನ್ನ ಭಾರತ ‘ಎ’ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಅಂಕಿತ್ ಭಾವ್ನೆ ಅವರು  ಅರ್ಧಶತಕಗಳ ಚೆಂದದ ಚಿತ್ತಾರ ಬಿಡಿಸಿದ್ದರು.

ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರಿನ ಎರಡನೇ ‘ಟೆಸ್ಟ್‌’ ಕ್ರಿಕೆಟ್ ಪಂದ್ಯ ನಿರೀಕ್ಷೆಯಂತೆ ಡ್ರಾ ಆಯಿತು.  ಆದರೆ ಶ್ರೇಯಸ್ (65; 103ಎಸೆತ, 4 ಬೌಂಡರಿ, 4 ಸಿಕ್ಸರ್) ಮತ್ತು ಅಂಕಿತ್ (ಔಟಾಗದೆ 64, 100ಎಸೆತ, 9ಬೌಂಡರಿ) 4ನೇ ವಿಕೆಟ್ ಜೊತೆಯಾಟದಲ್ಲಿ ಪೇರಿಸಿದ 84 ರನ್‌ಗಳು ನೆನಪಿನಲ್ಲಿ ಉಳಿದವು

ಭಾನುವಾರ 7 ವಿಕೆಟ್‌ಗಳಿಗೆ 294 ರನ್‌ ಗಳಿಸಿದ್ದ ಪ್ರವಾಸಿ ತಂಡವು  ಸೋಮವಾರ ಆಟ ಮುಂದುವರಿಸಿತು. ತಂಡದ ಮೊತ್ತ 319 ತಲುಪುವಷ್ಟರಲ್ಲಿ  ಆಲೌಟ್  ಆಯಿತು. ಇದರಿಂದ  26 ರನ್‌ಗಳ ಅಲ್ಪ ಮುನ್ನಡೆ ಗಳಿಸಿದ  ತಂಡವು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿತು. ಆದರೆ, 54 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ (4 ರನ್) ಮತ್ತು   ಜಿ. ಹನುಮವಿಹಾರಿ ಅವರ ವಿಕೆಟ್‌ಗಳನ್ನು ಒಲಿವಿಯರ್ ಕಬಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಹೊಡೆದಿದ್ದ ಹನುಮವಿಹಾರಿ ಸೊನ್ನೆ ಸುತ್ತಿದರು. 16ನೇ ಓವರ್‌ನಲ್ಲಿ ಮಯಂಕ್  ಅವರು ಸೆನುರನ್ ಮುತುಸಾಮಿಗೆ ಎಲ್‌ಬಿಡಬ್ಲ್ಯು ಆದರು.

ಈ ಹಂತದಲ್ಲಿ ಬೌಲರ್‌ಗಳಿಗೆ ಸಹಕರಿಸುತ್ತಿದ್ದ ಪಿಚ್‌ನಲ್ಲಿ ಆತಿಥೇಯ ತಂಡವನ್ನು ಅತ್ಯಲ್ಪ ಮೊತ್ತಕ್ಕೆ (125 ರಿಂದ 150 ರನ್‌ಗಳು) ಕಟ್ಟಿಹಾಕಿ ಎರಡನೇ ಇನಿಂಗ್ಸ್‌ ಆಡುವ ಅವಕಾಶ  ಪ್ರವಾಸಿ ಬಳಗಕ್ಕೆ ಇತ್ತು. ಆದರೆ  ಅಂತಹ ನಾಟಕೀಯ ಬೆಳವಣಿಗೆಗೆ ಶ್ರೇಯಸ್ ಮತ್ತು ಅಂಕಿತ್ ಅವಕಾಶ ನೀಡಲಿಲ್ಲ. ಶ್ರೇಯಸ್ 72 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. 36ನೇ ಓವರ್‌ನಲ್ಲಿ ಸೆನುರನ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತ ಶ್ರೇಯಸ್ ಔಟಾದರು.

ಮೊದಲ ಇನಿಂಗ್ಸ್‌ನಲ್ಲಿ 80 ರನ್‌ ಗಳಿಸಿದ್ದ ಅಂಕಿತ್ ಭಾವ್ನೆಇಲ್ಲಿ 69 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಚಹಾ ವಿರಾಮದ ನಂತರ ರಭಸದ ಮಳೆ ಸುರಿಯಿತು. ತಂಡವು 51 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 181 ರನ್‌ ಗಳಿಸಿತ್ತು. ಪಂದ್ಯವನ್ನು ಸ್ಘಗಿತಗೊಳಿಸಿ ಡ್ರಾ ಎಂದು ಘೋಷಿಸಲಾಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 345, ದಕ್ಷಿಣ ಆಫ್ರಿಕಾ ಎ : 98.2 ಓವರ್‌ಗಳಲ್ಲಿ 319 (ಡೇನ್ ಪೀಡ್ತ್ 22, ಡುವಾನ್ ಒಲಿವಿಯರ್ 4, ಎಂತಿವೆಖಾಯಾ ನಬೆ 7, ಮೊಹಮ್ಮದ್ ಸಿರಾಜ್ 72ಕ್ಕೆ4, ಅಂಕಿತ್ ರಜಪೂತ್ 52ಕ್ಕೆ3, ಜಯಂತ್ ಯಾದವ್ 65ಕ್ಕೆ1, ಯಜುವೇಂದ್ರ ಚಾಹಲ್ 84ಕ್ಕೆ2) ಎರಡನೇ ಇನಿಂಗ್ಸ್‌: ಭಾರತ ಎ: 51 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 181 (ಮಯಂಕ್ ಅಗರವಾಲ್ 28, ಶ್ರೇಯಸ್ ಅಯ್ಯರ್ 65, ಅಂಕಿತ್ ಭಾವ್ನೆ ಔಟಾಗದೆ 64, ಕೆ.ಎಸ್. ಭರತ್ 18,  ಡುವಾನ್ ಒಲಿವಿಯರ್ 24ಕ್ಕೆ2, ಸೆನುರನ್ ಮುತುಸಾಮಿ 45ಕ್ಕೆ2) ಫಲಿತಾಂಶ; ಪಂದ್ಯ ಡ್ರಾ. ಭಾರತ ಎ ತಂಡಕ್ಕೆ 1–0 ಯಿಂದ ಸರಣಿ ಜಯ.

**


-ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದ ಸಿಬ್ಬಂದಿ ಸೋಮವಾರ ಭಾರತ ‘ಎ‘ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು ಪ್ರಜಾವಾಣಿ ಚಿತ್ರ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !