ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 1st T20I | ಜೋಫ್ರಾ ಮೋಡಿ: ಇಂಗ್ಲೆಂಡ್ ಜಯಭೇರಿ

ಇಂಗ್ಲೆಂಡ್ ಬೌಲರ್‌ಗಳ ಪಾರುಪತ್ಯ; ಶ್ರೇಯಸ್ ಅಯ್ಯರ್, ರಿಷಭ್ ಪಂತ್ ದಿಟ್ಟ ಆಟಕ್ಕೆ ಸಿಗದ ಫಲ
Last Updated 12 ಮಾರ್ಚ್ 2021, 22:18 IST
ಅಕ್ಷರ ಗಾತ್ರ

ಅಹಮದಾಬಾದ್: ಶ್ರೇಯಸ್ ಅಯ್ಯರ್ ಅರ್ಧಶತಕದ ಬಲದಿಂದ ಭಾರತ ತಂಡವು ಶುಕ್ರವಾರ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಎದುರು ಸಾಧಾರಣ ಮೊತ್ತ ಗಳಿಸಲು ಸಾಧ್ಯವಾಯಿತು.

ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರಾತ್ರಿ ಹೊತ್ತಿನ ಇಬ್ಬನಿಯಲ್ಲಿ ಬೌಲಿಂಗ್ ಮಾಡುವ ಸವಾಲನ್ನು ಸ್ವೀಕರಿಸಿದ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮುಂಬೈನ ಶ್ರೇಯಸ್ (67; 48ಎಸೆತ, 8ಬೌಂಡರಿ 1ಸಿಕ್ಸರ್) ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 124 ರನ್ ಗಳಿಸಿತು.

ಶ್ರೇಯಸ್ ಕ್ರೀಸ್‌ಗೆ ಬಂದಾಗ ಆರಂಭಿಕ ಆಟಗಾರ ಕೆ.ಎಲ್. ರಾಹುಲ್, ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಔಟಾಗಿ ಡಗ್‌ಔಟ್‌ ಸೇರಿದ್ದರು. ಆದರೆ, ಜೋಫ್ರಾ ಆರ್ಚರ್ ಅವರ ವೇಗದ ಎಸೆತದಲ್ಲಿ ರಿವರ್ಸ್‌ ಸ್ವೀಪ್ ಮೂಲಕ ಸಿಕ್ಸರ್‌ ಬಾರಿಸಿ, ಆತ್ಮವಿಶ್ವಾಸದಿಂದ ಆಡುತ್ತಿದ್ದ ರಿಷಭ್ ಪಂತ್ ಕ್ರೀಸ್‌ನಲ್ಲಿದ್ದರು. ಸ್ಕೋರ್‌ಬೋರ್ಡ್‌ನಲ್ಲಿ ಭಾರತದ ಮೊತ್ತವು ಮೂರು ವಿಕೆಟ್‌ಗಳಿಗೆ 20 ರನ್‌ಗಳಾಗಿತ್ತು. ಇನಿಂಗ್ಸ್‌ನಲ್ಲಿ ಇನ್ನೂ 15 ಓವರ್‌ಗಳು ಬಾಕಿ ಇದ್ದವು.

ಈಚೆಗೆ ಇದೇ ಅಂಗಳದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದ ರಿಷಭ್ ಚುಟುಕು ಪಂದ್ಯದಲ್ಲಿಯೂ ಭರವಸೆಯ ಆಟವಾಡಿದರು. ಅವರ ದಿಟ್ಟತನದ ಹೊಡೆತಗಳಿಗೆ ಇಂಗ್ಲೆಂಡ್‌ ಬೌಲರ್‌ಗಳ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದ್ದವು. ದೆಹಲಿಯ ರಿಷಭ್ ಜೊತೆಗೂಡಿದ ಶ್ರೇಯಸ್ ಚೇತೋಹಾರಿ ಆಟವಾಡಿದರು. ನಾಲ್ಕನೇ ವಿಕೆಟ್ ಜೊತೆಯಟದಲ್ಲಿ 28 ರನ್‌ಗಳನ್ನು ಸೇರಿಸಿ ಭರವಸೆ ಮೂಡಿಸಿದರು. ಆದರೆ, ಹತ್ತನೇ ಓವರ್‌ನಲ್ಲಿ ಬೆನ್ ಸ್ಟೋಕ್ಸ್‌ ಎಸೆತವನ್ನು ಸಿಕ್ಸರ್‌ಗೆ ಎತ್ತಲು ಪ್ರಯತ್ನಿಸಿದ ಪಂತ್, ಜಾನಿ ಬೆಸ್ಟೋಗೆ ಕ್ಯಾಚಿತ್ತರು. ಆಗ ಮತ್ತೆ ತಂಡದಲ್ಲಿ ಆತಂಕ ಮೂಡಿತು.

ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ತುಸು ತಾಳ್ಮೆಯಿಂದ ಆಡಿದರು. ಶ್ರೇಯಸ್‌ಗೆ ಹೆಚ್ಚು ಅವಕಾಶ ಬಿಟ್ಟುಕೊಟ್ಟರು. ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಶ್ರೇಯಸ್, 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾರ್ದಿಕ್ ಅವರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿಯೂ 50 ರನ್ ಸೇರಿಸಿದರು. ಆದರೂ ತಂಡವು 100ರ ಗಡಿ ದಾಟಿದ್ದು 17ನೇ ಓವರ್‌ನಲ್ಲಿ. ಇದರಿಂದಾಗಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. 18ನೇ ಓವರ್‌ನಲ್ಲಿ ಜೋಫ್ರಾ ಸತತ ಎರಡು ಎಸೆತಗಳಲ್ಲಿ ಹಾರ್ದಿಕ್ ಮತ್ತು ಶಾರ್ದೂಲ್ ಠಾಕೂರ್ ವಿಕೆಟ್‌ ಕಬಳಿಸಿದರು. ಜೋರ್ಡಾನ್ ಹಾಕಿದ ಕೊನೆಯ ಓವರ್‌ನಲ್ಲಿ ಶ್ರೇಯಸ್‌ ಸಿಕ್ಸರ್‌ ಎತ್ತುವ ಪ್ರಯತ್ನ ಮಾಡಿದರು. ಆದರೆ ಬೌಂಡರಿ ಲೈನ್‌ನಲ್ಲಿ ಡೇವಿಡ್ ಮಲಾನ್ ಪಡೆದ ಆಕರ್ಷಕ ಕ್ಯಾಚ್‌ಗೆ ಶ್ರೇಯಸ್ ನಿರ್ಗಮಿಸಬೇಕಾಯಿತು.

ಸೊನ್ನೆ ಸುತ್ತಿದ ಕೊಹ್ಲಿ
ಇಂಗ್ಲೆಂಡ್ ತಂಡದ ನಾಯಕ ಏಯಾನ್ ಮಾರ್ಗರ್ನ್ ತಂತ್ರಗಾರಿಕೆಯು ಆರಂಭದಲ್ಲಿಯೇ ಫಲ ನೀಡಿತು.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಜೋಫ್ರಾ ಆರ್ಚರ್‌ ಅವರ ಸ್ವಿಂಗ್ ಎಸೆತವು ಆಫ್‌ಸ್ಟಂಪ್ ಹೊರಗೆ ಇತ್ತು. ಅದನ್ನು ಡ್ರೈವ್ ಮಾಡಲು ಹೋದ ರಾಹುಲ್ ಬ್ಯಾಟ್‌ಗೆ ತಾಗಿದ ಚೆಂಡು ಒಳನುಗ್ಗಿ ಸ್ಟಂಪ್ ಎಗರಿಸಿತು.ನಂತರದ ಓವರ್‌ನಲ್ಲಿ ಆದಿಲ್ ರಶೀದ್ ಲೆಗ್‌ಸ್ಪಿನ್ ಆಡಲು ವಿರಾಟ್ ಕೊಹ್ಲಿ ಆಯ್ಕೆ ಮಾಡಿಕೊಂಡ ಹೊಡೆತವು ತಪ್ಪಾಗಿತ್ತು. ಕ್ರೀಸ್‌ ಜೋರ್ಡಾನ್‌ಗೆ ಸುಲಭದ ಕ್ಯಾಚ್ ನೀಡಿದ ಕೊಹ್ಲಿ ಸೊನ್ನೆ ಸುತ್ತಿದರು. ಐದನೇ ಓವರ್‌ನಲ್ಲಿ ಮಾರ್ಕ್‌ ವುಡ್ ಎಸೆತದಲ್ಲಿ ಶಿಖರ್ ಧವನ್ ಕ್ಲೀನ್‌ಬೌಲ್ಡ್ ಆಗಿ ನಿರ್ಗಮಿಸಿದರು.

ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಯಿತು. ಅವರ ಬದಲಿಗೆ ಶಿಖರ್ ಅವಕಾಶ ಪಡೆದಿದ್ದರು.

ಬೆರಗು ಮೂಡಿಸಿದ ರಿಷಭ್‌ ಸ್ವೀಪ್
ಅಹಮದಾಬಾದ್:
ಶುಕ್ರವಾರ ರಾತ್ರಿ ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್‌ ಎಸೆತವನ್ನು ರಿವರ್ಸ್‌ ಸ್ವೀಪ್ ಮೂಲಕ ಸಿಕ್ಸರ್‌ಗೆ ಎತ್ತಿದ ಭಾರತದ ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್ ಆಟವು ಕ್ರಿಕೆಟ್‌ ಲೋಕದಲ್ಲಿ ಅಚ್ಚರಿ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸಂಚಲನಕ್ಕೂ ಕಾರಣವಾಗಿದೆ.

ಹೋದ ವಾರ ಇಲ್ಲಿಯೇ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ರಿಷಭ್, ಇಂಗ್ಲೆಂಡ್ ತಂಡದ ಅನುಭವಿ, ವೇಗದ ಬೌಲರ್ ಜೇಮ್ಸ್‌ ಆ್ಯಂಡರ್ಸನ್ ಅವರ ವೇಗದ ಎಸೆತವನ್ನು ರಿವರ್ಸ್‌ ಸ್ವೀಪ್ ಮೂಲಕ ಬೌಂಡರಿಗೆರೆ ದಾಟಿಸಿದ್ದರು. ಜೋಫ್ರಾ ಮತ್ತು ಆ್ಯಂಡರ್ಸನ್ ಸದ್ಯ ವಿಶ್ವದ ಶ್ರೇಷ್ಠ ವೇಗಿಗಳಾಗಿದ್ದಾರೆ.

’ಜೋಫ್ರಾ ಅವರು ಹಾಕಿದ ಆ ಎಸೆತವು ಪ್ರತಿ ಗಂಟೆಗೆ 90 ಕಿ.ಮೀ ವೇಗದ್ದಾಗಿತ್ತು. ಅದನ್ನು ರಿವರ್ಸ್‌ ಸ್ವೀಪ್ ಮೂಲಕ ಸಿಕ್ಸರ್‌ ಎತ್ತಿದ ರಿಷಭ್ ಹೊಸ ಸಾಧನೆ ಮಾಡಿದ್ದಾರೆ. ಅವರ ಧೈರ್ಯವನ್ನು ಮೆಚ್ಚಬೇಕು‘ ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಟ್ವೀಟ್ ಮಾಡಿದ್ದಾರೆ.

’ರಿವರ್ಸ್‌ ಸ್ವೀಪ್‌ನಲ್ಲಿ ಆ್ಯಂಡರ್ಸ್‌ನ್‌ಗೆ ಬೌಂಡರಿ, ಜೋಫ್ರಾಗೆ ಸಿಕ್ಸರ್. ಇದು ರಿಷಭ್ ಪಂತ್ ಜಗತ್ತು‘ ಎಂದು ಭಾರತದ ಮಾಜಿ ಆಟಗಾರ ವಾಸೀಂ ಜಾಫರ್ ಟ್ವೀಟ್ ಮಾಡಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ರಿಷಭ್ ಅವರನ್ನು ಅಭಿನಂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT