‘ಸೋಲಿನಿಂದ ಆಘಾತವಾಗಿದೆ’

ಶನಿವಾರ, ಏಪ್ರಿಲ್ 20, 2019
29 °C

‘ಸೋಲಿನಿಂದ ಆಘಾತವಾಗಿದೆ’

Published:
Updated:
Prajavani

ಮೊಹಾಲಿ (ಪಿಟಿಐ): ‘ಕಿಂಗ್ಸ್‌ ಇಲೆವನ್‌ ಪಂಜಾಬ್‌ ಎದುರಿನ ಸೋಲಿನಿಂದ ಆಘಾತವಾಗಿದೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ತಿಳಿಸಿದ್ದಾರೆ.

167 ರನ್‌ಗಳ ಗುರಿ ಬೆನ್ನಟ್ಟಿದ್ದ ಡೆಲ್ಲಿ, 16 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್‌ಗೆ 137ರನ್‌ ಪೇರಿಸಿತ್ತು. ಈ ಮೊತ್ತಕ್ಕೆ 15 ರನ್‌ ಸೇರಿಸುವಷ್ಟರಲ್ಲಿ ಶ್ರೇಯಸ್‌ ಪಡೆ ಉಳಿದ ಏಳು ವಿಕೆಟ್‌ ಕಳೆದುಕೊಂಡು ಸೋಲಿನ ಪ್ರಪಾತಕ್ಕೆ ಕುಸಿದಿತ್ತು.

‘ಏನು ಹೇಳಬೇಕೆಂಬುದೇ ತೋಚುತ್ತಿಲ್ಲ. ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ನಾವು ಕೈಚೆಲ್ಲಿದೆವು. ಹೀಗಾಗಿ ತುಂಬಾ ಬೇಸರವಾಗಿದೆ’ ಎಂದರು.

‘ನಿರಾಯಾಸವಾಗಿ ಗುರಿ ಬೆನ್ನಟ್ಟಬಹುದು ಅಂದುಕೊಂಡಿದ್ದೇ ತಪ್ಪಾಯಿತು. ಕಿಂಗ್ಸ್‌ ಇಲೆವನ್‌ ತಂಡದ ಮೊಹಮ್ಮದ್‌ ಶಮಿ 17ನೇ ಓವರ್‌ನ ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಕ್ರಮವಾಗಿ ರಿಷಭ್ ಪಂತ್‌ ಮತ್ತು ಕ್ರಿಸ್‌ ಮೊರಿಸ್‌ ವಿಕೆಟ್‌ ಪಡೆದಿದ್ದರಿಂದ ಪಂದ್ಯದ ಚಿತ್ರಣವೇ ಬದಲಾಯಿತು. ಗೆಲುವು ನಮ್ಮ ಕೈಯಿಂದ ಜಾರಿತು’ ಎಂದು ಶ್ರೇಯಸ್‌ ನುಡಿದರು.

‘ಸಂದೀಪ್‌ ಲಮಿಚಾನೆ ಪ್ರತಿಭಾವಂತ ಬೌಲರ್‌. ಎಂತಹುದೇ ಸಂದರ್ಭದಲ್ಲಿ ಬೇಕಾದರೂ ಬೌಲ್‌ ಮಾಡುವ ಸಾಮರ್ಥ್ಯ ಅವರಿಗಿದೆ. ಸಪಾಟಾದ ಪಿಚ್‌ಗಳಲ್ಲಿ ಪರಿಣಾಮಕಾರಿ ಎಸೆತಗಳನ್ನು ಹಾಕಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಬಲ್ಲ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಲೀಗ್‌ನ ಆರಂಭದ ಪಂದ್ಯಗಳಲ್ಲಿ ಕೆಲವೊಂದು ತಪ್ಪುಗಳು ಆಗುವುದು ಸಹಜ. ಅವುಗಳನ್ನು ತಿದ್ದಿಕೊಂಡು ಸಾಗುವುದು ಅಗತ್ಯ. ನಮ್ಮ ತಂಡದಲ್ಲಿ ಶ್ರೇಷ್ಠ ಆಟಗಾರರಿದ್ದಾರೆ. ಎಲ್ಲರೂ ಜವಾಬ್ದಾರಿ ಅರಿತು ಆಡಿದರೆ ತಂಡ ಖಂಡಿತವಾಗಿಯೂ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !