ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಕಾರ: ಭರ್ತಿ ಆಗದ 50 ಚುನಾವಣಾಧಿಕಾರಿ ಹುದ್ದೆಗಳು

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಸಹಕಾರ ನೀಡದ ಕಾರಣ ಸುಮಾರು 50 ಚುನಾವಣಾಧಿಕಾರಿಗಳ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ.

ಚುನಾವಣಾ ದಿನಾಂಕ ಪ್ರಕಟಿಸಿ, ನೀತಿ ಸಂಹಿತೆ ಜಾರಿಗೊಳಿಸಿರುವುದರಿಂದ ಅಧಿಕಾರಿಗಳ ನೇಮಕ ಮಾಡುವ ಹೊಣೆ ಈಗ ಚುನಾವಣಾ ಆಯೋಗದ ಹೆಗಲಿಗೆ ಬಿದ್ದಿದೆ. ತಕ್ಷಣವೇ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಆಯೋಗ ಚಿಂತನೆ ನಡೆಸಿದೆ.

ಚುನಾವಣಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಆಯೋಗವು ವಿವಿಧ ಇಲಾಖೆಗಳಲ್ಲಿರುವ ಸಿಬ್ಬಂದಿಗೆ  ಪರೀಕ್ಷೆ ನಡೆಸಿದೆ. ಉತ್ತೀರ್ಣ ಆದವರನ್ನು ನೇಮಕ ಮಾಡಲು ಸಿದ್ಧತೆ ನಡೆಸಿದೆ. ಆರಂಭದಿಂದಲೂ ರಾಜ್ಯ ಸರ್ಕಾರ ನಿಯೋಜನೆ ಮೇಲೆ ಅಧಿಕಾರಿಗಳನ್ನು ನೇಮಿಸಲು ನಿರ್ಲಕ್ಷ್ಯ ತೋರಿದ್ದರಿಂದ ಸಮಸ್ಯೆ ಆಗಿದೆ ಎಂದು ಹೆಸರು ಹೇಳಲು ಬಯಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಯಾವ ಅಧಿಕಾರಿಗಳು ಯಾವ ಯಾವ ಕ್ಷೇತ್ರಗಳಲ್ಲಿ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದರೋ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲಾಗುವುದು. ಶಾಸಕರು ಮತ್ತು ಸಚಿವರು ತಮಗೆ ಬೇಕಾದವರನ್ನು ಹಾಕಿಸಿಕೊಂಡಿದ್ದರೆ, ಅಂತಹವರನ್ನೂ ಬದಲಿಸಲಾಗುವುದು ಎಂದರು.

ಎಲ್ಲ ಜಿಲ್ಲೆಗಳಿಗೂ ಜಿಲ್ಲಾ ಚುನಾವಣಾಧಿಕಾರಿಗಳನ್ನಾಗಿ ಐಎಎಸ್‌ ಅಧಿಕಾರಿಗಳನ್ನೇ ನೇಮಿಸಲಾಗುವುದು. ಕೆಎಎಸ್‌ನಿಂದ ಬಡ್ತಿ ಹೊಂದಿರುವವರನ್ನು ಆ ಹುದ್ದೆಗಳಿಗೆ ಹಾಕಿದರೆ ಶಾಸಕರು, ಮಂತ್ರಿಗಳ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ. ದಕ್ಷ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವವರ ಪಟ್ಟಿ ತಯಾರಿಸಲಾಗುತ್ತಿದೆ. ಇಂತಹವರನ್ನೇ ಜಿಲ್ಲಾ ಚುನಾವಣಾಧಿಕಾರಿಗಳ ಹುದ್ದೆಗೆ ನೇಮಿಸಲಾಗುವುದು.

ಅಧಿಕಾರಿಗಳ ಮೇಲೆ ನಿಗಾ
ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವುದು ಮತ್ತು ಅಕ್ರಮಗಳಿಗೆ ಸಹಕರಿಸುವುದನ್ನು ತಪ್ಪಿಸಲು ಅಧಿಕಾರಿಗಳ ಮೇಲೆ ಕಣ್ಣಿಡಲು ಆಯೋಗ ನಿರ್ಧರಿಸಿದೆ.

ಅಕ್ರಮಕ್ಕೆ ಸಹಕರಿಸುವ ಅಧಿಕಾರಿಗಳ ಪಟ್ಟಿ ಮಾಡಿ ಕೇಂದ್ರ ಚುನಾವಣಾ ಆಯೋಗಕ್ಕೆ ರಹಸ್ಯ ವರದಿ ನೀಡಲಾಗುವುದು. ಇದರಿಂದ ಅಧಿಕಾರಿಗಳಿಗೆ ಬಡ್ತಿಗೆ ತೊಂದರೆ ಆಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾ ಚುನಾವಣಾಧಿಕಾರಿಗಳ ಜೊತೆ ಆಯೋಗದ ಹಿರಿಯ ಅಧಿಕಾರಿಗಳ ವಿಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಅಸಹಾಯಕತೆ ತೋಡಿಕೊಂಡಿದ್ದರು. ಈ ವಿಷಯವನ್ನು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರುವುದಾಗಿಯೂ ತಿಳಿಸಿದ್ದರು.

ರಾಜ್ಯದಲ್ಲಿ ಚುನಾವಣಾ ಅಕ್ರಮಗಳು ನಡೆಯಬಹುದು ಎಂಬ ಬಗ್ಗೆ ಸುಮಾರು ಎಂಟರಿಂದ ಹತ್ತು ದೂರುಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಈ ಬಗ್ಗೆ ಗಮನಹರಿಸುವಂತೆ ಮುಖ್ಯ ಚುನಾವಣಾ ಆಯುಕ್ತ ಓ.ಪಿ.ರಾವತ್‌ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ಅವರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT