ಮಂಗಳವಾರ, ಸೆಪ್ಟೆಂಬರ್ 24, 2019
29 °C
ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿಗೆ ಭಾರತ ತಂಡದ ಆಯ್ಕೆ ಇಂದು

ಆಯ್ಕೆಗಾರರಿಗೆ ‘ಆರಂಭ’ದ ಸವಾಲು

Published:
Updated:

ಮುಂಬೈ : ಪ್ರವಾಸಿ ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್‌ ತಂಡವನ್ನು ಆಯ್ಕೆ ಮಾಡಲು ರಾಷ್ಟ್ರೀಯ ಆಯ್ಕೆಗಾರರು ಗುರುವಾರ ಇಲ್ಲಿ ಸೇರಲಿದ್ದಾರೆ. ಕೆಲಸಮಯದಿಂದ ಕಾಡುತ್ತಿರುವ ಆರಂಭ ಆಟಗಾರರ ಸಮಸ್ಯೆಗೆ ಪರಿಹಾರ ಹುಡುಕುವುದು ಆಯ್ಕೆಗಾರರ ಕಾರ್ಯಸೂಚಿಯಲ್ಲಿ ಆದ್ಯತೆ ಪಡೆಯಲಿದೆ.

ಟೆಸ್ಟ್ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರೂ, ಭಾರತ ತಂಡ ಸೂಕ್ತ ಆರಂಭ ಆಟಗಾರರ ಜೋಡಿಯನ್ನು ಕಂಡುಕೊಳ್ಳುವಲ್ಲಿ ಪರದಾಡುತ್ತಿದೆ. ಇದರ ಪರಿಣಾಮ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಬೀಳುತ್ತಿದೆ.

2018ರ ನಂತರ ಕೆ.ಎಲ್‌.ರಾಹುಲ್, ಮುರಳಿ ವಿಜಯ್‌, ಶಿಖರ್‌ ಧವನ್‌, ಪಾರ್ಥಿವ್‌ ಪಟೇಲ್‌, ಪ್ರಥ್ವಿ ಶಾ, ಮಯಂಕ್‌ ಅಗರವಾಲ್‌ ಮತ್ತು ಹನುಮ ವಿಹಾರಿ ಅವರು ಟೆಸ್ಟ್‌ಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಇನಿಂಗ್ಸ್‌ ಆರಂಭಿಸಿದ್ದಾರೆ. ಆದರೆ ಯಾರೂ ಸ್ಥಿರ ಪ್ರದರ್ಶನ ನೀಡಿ ಆ ಸ್ಥಾನದಲ್ಲಿ ಗಟ್ಟಿಯಾಗುವಂತೆ ಕಂಡಿಲ್ಲ.

ಸತತವಾಗಿ ವಿಫಲರಾದ ಕಾರಣ ಧವನ್‌ ಮತ್ತು ವಿಜಯ್‌ ಅವರನ್ನು ಪರಿಗಣಿಸುವ ಸಾಧ್ಯತೆ ಕ್ಷೀಣವಾಗಿದೆ. ಉದ್ದೀಪನ ಮದ್ದು ಸೇವನೆ ಪರಿಣಾಮ ಪ್ರಥ್ವಿ ಶಾ ಸದ್ಯ ನಿಷೇಧ ಶಿಕ್ಷೆ ಅನುಭವಿಸುತ್ತಿದ್ದಾರೆ.

ಲೋಕೇಶ್‌ ರಾಹುಲ್‌ 36 ಟೆಸ್ಟ್‌ಗಳನ್ನು ಆಡಿದ್ದಾರೆ. ಆದರೆ ಕೊನೆಯ ಏಳು ಟೆಸ್ಟ್‌ಗಳಲ್ಲಿ ಅವರಿಗೆ ಒಮ್ಮೆಯೂ ಅರ್ಧ ಶತಕದ ಗಡಿ ದಾಟಲು ಸಾಧ್ಯವಾಗಿಲ್ಲ. ವೆಸ್ಟ್‌ ಇಂಡೀಸ್‌ನಲ್ಲಿ ಅವರ ಜೊತೆ ಇನಿಂಗ್ಸ್‌ ಆರಂಭಿಸಿದ್ದ ಇನ್ನೊಬ್ಬ ಕನ್ನಡಿಗ ಮಯಂಕ್‌  ಇದುವರೆಗೆ ನಾಲ್ಕು ಟೆಸ್ಟ್‌ಗಳನ್ನು ಮಾತ್ರ ಆಡಿದ್ದಾರೆ.

ಅಜಿಂಕ್ಯ ರಹಾನೆ ಮತ್ತು ವಿಹಾರಿ, ವಿಂಡೀಸ್‌ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ  ಇನಿಂಗ್ಸ್‌ಗಳನ್ನು ಆಡಿದ್ದಾರೆ. ಇದರಿಂದಾಗಿ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುವ ರೋಹಿತ್‌ ಶರ್ಮಾ ಅವರಿಗೆ ಅಲ್ಲಿ ಅವಕಾಶ ಸಿಗಲಿಲ್ಲ. ಇದು, ಅವರನ್ನು ನಿಗದಿತ ಓವರುಗಳ ಪಂದ್ಯದ ರೀತಿ ಟೆಸ್ಟ್‌ನಲ್ಲೂ ಆರಂಭ ಆಟಗಾರನ ಸ್ಥಾನದಲ್ಲಿ ಆಡಿಸಬೇಕೆನ್ನುವ ಚರ್ಚೆಗಳಿಗೂ ದಾರಿ ಮಾಡಿಕೊಟ್ಟಿದೆ. ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಕೂಡ ಇಂಥದ್ದೊಂದು ಸುಳಿವು ನೀಡಿದ್ದಾರೆ.

32 ವರ್ಷದ ರೋಹಿತ್‌, ಟಿ–20 ಮತ್ತು ಏಕದಿನ ಪಂದ್ಯಗಳಲ್ಲಿ ಆರಂಭ ಆಟಗಾರನಾಗಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಅವರು ಅತ್ಯಧಿಕ ರನ್‌ ಗಳಿಸಿದ್ದರು. ಏಕದಿನ ಪಂದ್ಯಗಳಲ್ಲಿ ಮೂರು ದ್ವಿಶತಕಗಳನ್ನು ಚಚ್ಚಿರುವ ಅವರು ಟೆಸ್ಟ್‌ನಲ್ಲಿ ಅವರ ಅಂಥ ಛಾಪು ಮೂಡಿಸಿಲ್ಲ.

ಆರಂಭ ಆಟಗಾರರ ಸಮಸ್ಯೆ ಬಿಟ್ಟರೆ ಉಳಿದಂತೆ ವಿರಾಟ್‌ ಕೊಹ್ಲಿ ಬಳಗದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ವೆಸ್ಟ್‌ ಇಂಡೀಸ್‌ ವಿರುದ್ಧ ಬೌಲರ್‌ಗಳ ಪ್ರದರ್ಶನ ಪರಿಣಾಮಕಾರಿಯಾಗಿದ್ದು, ಅವರನ್ನೇ ಉಳಿಸಿಕೊಳ್ಳುವುದು ಖಚಿತವಾಗಿದೆ.

ಮೊದಲ ಟೆಸ್ಟ್‌ ವಿಶಾಖಪಟ್ಟಣದಲ್ಲಿ ಅಕ್ಟೋಬರ್‌ 2ರಂದು ಆರಂಭವಾಗಲಿದೆ. ಉಳಿದ ಎರಡು ಪಂದ್ಯಗಳು ಕ್ರಮವಾಗಿ ಪುಣೆ ಮತ್ತು ರಾಂಚಿಯಲ್ಲಿ ನಿಗದಿಯಾಗಿವೆ.

Post Comments (+)