ಗುರುವಾರ , ನವೆಂಬರ್ 21, 2019
22 °C
ಐಪಿಎಲ್ ಮುಖ್ಯಸ್ಥರಾಗಿ ಬ್ರಿಜೇಶ್ ಪಟೇಲ್; ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಆಯ್ಕೆ ಸಾಧ್ಯತೆ

ಬಿಸಿಸಿಐ ಅಧ್ಯಕ್ಷ ಸ್ಥಾನ ಗಂಗೂಲಿಗೆ ಖಚಿತ

Published:
Updated:
Prajavani

ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಅವರಿಗೆ ದಕ್ಕುವುದು ಖಚಿತವಾಗಿದೆ.

ಇದೇ 23ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಒಬ್ಬರೇ ಆಕಾಂಕ್ಷಿಯಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾಗೆ ಕಾರ್ಯದರ್ಶಿ ಹುದ್ದೆ ಖಾತರಿಯಾಗಿದೆ.

ಭಾನುವಾರ ಮುಂಬೈನಲ್ಲಿ ನಡೆದಿದ್ದ ಬಿಸಿಸಿಐ ಸಭೆಯಲ್ಲಿ ಗಂಗೂಲಿ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸರ್ವಾನುಮತದಿಂದ ಆರಿಸಲಾಗಿತ್ತು. ಈ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಕರ್ನಾಟಕದ ಬ್ರಿಜೇಶ್ ಪಟೇಲ್ ಅವರಿಗೆ ಐಪಿಎಲ್ ಮುಖ್ಯಸ್ಥ ಸ್ಥಾನದ ಭರವಸೆ ನೀಡಲಾಗಿತ್ತು. ಗಂಗೂಲಿ, ಕಳೆದ ತಿಂಗಳು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಪುನರಾಯ್ಕೆ ಆಗಿದ್ದರು.

ಗೌರವ ಉಳಿಸುವುದಕ್ಕೆ ಆದ್ಯತೆ: ಭಾರತದಲ್ಲಿ ಕ್ರಿಕೆಟ್‌ ಜನಪ್ರಿಯವಾಗಿರುವ ಕಾರಣ ಬಿಸಿಸಿಐ ವಿಶ್ವದಲ್ಲೇ ಕ್ರಿಕೆಟ್ ಆಡಳಿತದ ಶ್ರೀಮಂತ ಸಂಸ್ಥೆಯಾಗಿ ಬೆಳೆದಿದೆ. ಆದರೆ ಐಪಿಎಲ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ನಂಥ ಆರೋಪಗಳು ಮಂಡಳಿಯ ಖ್ಯಾತಿಗೆ ಧಕ್ಕೆ ತಂದಿದ್ದವು.   

‘ಬಿಸಿಸಿಐಯ ಗೌರವವನ್ನು ಉಳಿಸುವುದು ನನ್ನ ಪ್ರಥಮ ಆದ್ಯತೆಯಾಗಿದ್ದು ಮೂರು ವರ್ಷಗಳಿಂದ ನಡೆದಿರುವ ಕಹಿ ಘಟನೆಗಳನ್ನು ಮರೆಯುವಂತೆ ಮಾಡುವ ದೊಡ್ಡ ಜವಾಬ್ದಾರಿ ನನ್ನ ಮೇಲೆ ಇದೆ’ ಎಂದು ಗಂಗೂಲಿ ಸೋಮವಾರ ಹೇಳಿದರು.

47 ವರ್ಷದ ಗಂಗೂಲಿ ಭಾರತ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದು ಎಡಗೈ ಬ್ಯಾಟ್ಸ್‌ಮನ್ ಆಗಿರುವ ಅವರು ಟೆಸ್ಟ್‌ನಲ್ಲಿ 7,212 ರನ್ ಕಲೆ ಹಾಕಿದ್ದಾರೆ. 2008ರಲ್ಲಿ ಕ್ರಿಕೆಟ್‌ನ ಈ ಮಾದರಿಯಿಂದ ನಿವೃತ್ತರಾಗಿದ್ದರು.

ಗಂಗೂಲಿ ಅವರ ಮೂಲಕ ಎರಡು ವರ್ಷಗಳ ನಂತರ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಹೊಂದಿದಂತಾಗುತ್ತದೆ. 2016ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಅನುರಾಗ್ ಠಾಕೂರ್ ಮೇಲೆ ಅವ್ಯವಹಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 2017ರಲ್ಲಿ ಅವರನ್ನು ಹುದ್ದೆ ತೊರೆಯುವಂತೆ ಸುಪ್ರಿಂ ಕೋರ್ಟ್ ಸೂಚಿಸಿತ್ತು. ಅಂದಿನಿಂದ ಆಡಳಿತಾಧಿಕಾರಿಗಳ ಸಮಿತಿಯು ಮಂಡಳಿಯ ಆಡಳಿತ ನೋಡಿಕೊಳ್ಳುತ್ತಿತ್ತು.

ಪ್ರತಿಕ್ರಿಯಿಸಿ (+)