ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ರಂದು ಗಂಗೂಲಿ ಆಸ್ಪತ್ರೆಯಿಂದ ಮನೆಗೆ ಮರಳುವ ಸಾಧ್ಯತೆ

Last Updated 4 ಜನವರಿ 2021, 11:16 IST
ಅಕ್ಷರ ಗಾತ್ರ

ಕೋಲ್ಕತ್ತ: ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ಬುಧವಾರ ಮನೆಗೆ ಕಳುಹಿಸುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಒಂಬತ್ತು ಸದಸ್ಯರ ಹಿರಿಯ ವೈದ್ಯರ ತಂಡವು ಸೋಮವಾರ ಗಂಗೂಲಿ ಆರೋಗ್ಯದ ಬಗ್ಗೆ ಸಮಾಲೋಚನೆ ನಡೆಸಿತು. ಅವರಿಗೆ ಆ್ಯಂಜಿಯೊಪ್ಲಾಸ್ಟಿ ಅಗತ್ಯವಿದ್ದರೂ, ಈಗ ಚೇತರಿಸಿರುವ ಕಾರಣ ಮುಂದಿನ ದಿನಗಳಲ್ಲಿ ನಡೆಸುವ ಬಗ್ಗೆ ತಂಡ ಒಮ್ಮತದ ನಿರ್ಧಾರಕ್ಕೆ ಬಂದಿದೆ.

ಖ್ಯಾತ ಹೃದ್ರೋಗ ತಜ್ಞರಾದ ಡಾ.ದೇವಿ ಶೆಟ್ಟಿ ಮತ್ತು ಡಾ.ಆರ್‌.ಕೆ.ಪಾಂಡಾ ಅವರು ಆನ್‌ಲೈನ್ ವೇದಿಕೆ ಮೂಲಕ ಚರ್ಚೆಯಲ್ಲಿ ಭಾಗಿಯಾದರು. ಈಗ ಆರೋಗ್ಯ ಸ್ಥಿರವಾಗಿರುವ ಕಾರಣ, ಸದ್ಯ ಆ್ಯಂಜಿಯೊಪ್ಲಾಸ್ಟಿ ನಡೆಸದಿರುವ ತೀರ್ಮಾನಕ್ಕೆ ಬರಲಾಯಿತು ಎಂದು ತಂಡದ ಸದಸ್ಯ ಡಾ.ಬಸು ತಿಳಿಸಿದರು.

ಈ ವೇಳೆ ಗಂಗೂಲಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಈಗಿನ ಆರೋಗ್ಯ ಸ್ಥಿತಿ ಮತ್ತು ಮುಂದೆ ಕೈಗೊಳ್ಳಬೇಕಾದ ಆರೈಕೆ ಬಗ್ಗೆ ಅವರಿಗೆ ವೈದ್ಯರ ತಂಡ ಮಾಹಿತಿ ನೀಡಿತು.

ಕೆಲವೇ ದಿನಗಳ ನಂತರ ಅಥವಾ ವಾರಗಳ ನಂತರ ಆ್ಯಂಜಿಯೊಪ್ಲಾಸ್ಟಿ ನಡೆಸಲಾಗುವುದು. ಬಹುಶಃ ಅವರು ನಾಡಿದ್ದು ಡಿಸ್‌ಚಾರ್ಜ್ ಆಗಬಹುದು ಎಂದು ಬಸು ತಿಳಿಸಿದರು.

ಡಾ.ದೇವಿ ಶೆಟ್ಟಿ ಅವರು ಮಂಗಳವಾರ ಗಂಗೂಲಿ ಅವರನ್ನು ಭೇಟಿಯಾಗಲಿದ್ದು, ಮುಂದಿನ ಚಿಕಿತ್ಸೆಯ ವೇಳೆ ಹಾಜರಿರಲಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, 48 ವರ್ಷದ ಗಂಗೂಲಿ ಅವರಿಗೆ ಶನಿವಾರ ವ್ಯಾಯಾಮ ನಡೆಸುತ್ತಿದ್ದ ವೇಳೆ ಲಘು ಹೃದಯಾಘಾತ ಆಗಿತ್ತು. ಅವರ ಹೃದಯದ ರಕ್ತನಾಳಗಳಲ್ಲಿ ಬ್ಲಾಕ್‌ಗಳು ಕಂಡುಬಂದ ಕಾರಣ ಆ್ಯಂಜಿಯೊಪ್ಲಾಸ್ಟಿ ನಡೆಸಿ, ಒಂದು ಕಡೆ ಸ್ಟೆಂಟ್‌ ಅಳವಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT