ಭಾನುವಾರ, ಮೇ 29, 2022
31 °C

IND vs SA: 2ನೇ ಏಕದಿನದಲ್ಲೂ ದ.ಆಫ್ರಿಕಾ ಜಯಭೇರಿ; ಭಾರತಕ್ಕೆ ಸರಣಿ ಸೋಲಿನ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ಲ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲೂ ಏಳು ವಿಕೆಟ್ ಅಂತರದ ಸೋಲಿಗೆ ಶರಣಾಗಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 0-2ರ ಅಂತರದಲ್ಲಿ ಸೋಲಿನ ಮುಖಭಂಗಕ್ಕೊಳಗಾಗಿದೆ. 

ಇದರೊಂದಿಗೆ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ ಆಡಿದ ಮೊದಲ ಏಕದಿನ ಸರಣಿಯಲ್ಲೇ ಸೋಲಿನ ಆಘಾತವನ್ನು ಎದುರಿಸಿದೆ. ಅಲ್ಲದೆ ಅಂತಿಮ ಪಂದ್ಯವು ಪ್ರತಿಷ್ಠೆಗಷ್ಟೇ ಸೀಮಿತಗೊಂಡಿದೆ. ಈ ಮೊದಲು ನಡೆದ ಟೆಸ್ಟ್ ಸರಣಿಯಲ್ಲೂ ಭಾರತ ಸೋಲಿಗೆ ಶರಣಾಗಿತ್ತು. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (85), ನಾಯಕ ಕೆ.ಎಲ್. ರಾಹುಲ್ (55) ಆಕರ್ಷಕ ಅರ್ಧಶತಕ ಮತ್ತು ಶಾರ್ದೂಲ್ ಠಾಕೂರ್ (40*) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ  ಆರು ವಿಕೆಟ್ ನಷ್ಟಕ್ಕೆ 287 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. 

ಬಳಿಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರಂಭಿಕರಾದ ಜೆನ್‌ಮನ್ ಮಲಾನ್ (91) ಹಾಗೂ ಕ್ವಿಂಟನ್ ಡಿಕಾಕ್ (78) ಅಮೋಘ ಅರ್ಧಶತಕಗಳ ನೆರವಿನಿಂದ ಇನ್ನೂ 9 ಎಸೆತಗಳು ಬಾಕಿ ಉಳಿದಿರುವಂತೆಯೇ 48.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ  ಮಲಾನ್ ಹಾಗೂ ಡಿಕಾಕ್ ಮೊದಲ ವಿಕೆಟ್‌ಗೆ 132 ರನ್ ಕಲೆ ಹಾಕಿ ಭದ್ರ ಅಡಿಪಾಯ ಹಾಕಿಕೊಟ್ಟರು. 

ಕೇವಲ ಒಂಬತ್ತು ರನ್ ಅಂತರದಿಂದ ಶತಕ ವಂಚಿತರಾದ ಮಲಾನ್ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಇನ್ನೊಂದೆಡೆ ಡಿಕಾಕ್ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್ ಬಾರಿಸಿ ಅಬ್ಬರಿಸಿದರು. 

ಇನ್ನುಳಿದಂತೆ ನಾಯಕ ತೆಂಬಾ ಬವುಮಾ (35), ಏಡನ್ ಮರ್ಕರಮ್ (37*), ರಸ್ಸೀ ವ್ಯಾನ್ ಡರ್ ಡಸೆನ್ (37*) ತಂಡದ ಗೆಲುವನ್ನು ಸುಲಭಗೊಳಿಸಿದರು. ಭಾರತದ ಪರ ಯಾವ ಬೌಲರ್ ಕೂಡ ಯಶಸ್ವಿ ಎನಿಸಲಿಲ್ಲ. 

ಪಂತ್-ರಾಹುಲ್ ಶತಕದ ಜೊತೆಯಾಟ, ಕೊಹ್ಲಿ ಶೂನ್ಯಕ್ಕೆ ಔಟ್...
ಈ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆರು ವಿಕೆಟ್ ನಷ್ಟಕ್ಕೆ 287 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.  

ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಕನ್ನಡಿಗ ರಾಹುಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅಲ್ಲದೆ ರಾಹುಲ್ ಹಾಗೂ ಶಿಖರ್ ಧವನ್ (29) ಮೊದಲ ವಿಕೆಟ್‌ಗೆ 63 ರನ್‌ಗಳ ಉಪಯುಕ್ತ ಜೊತೆಯಾಟ ಕಟ್ಟಿದರು. 

ಈ ನಡುವೆ ಶೂನ್ಯಕ್ಕೆ ಔಟ್ ಆದ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಜೊತೆಗೂಡಿದ ರಾಹುಲ್ ಹಾಗೂ ರಿಷಭ್ ಪಂತ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. 

ತೃತೀಯ ವಿಕೆಟ್‌ಗೆ ಶತಕದ ಜೊತೆಯಾಟ (115) ಕಟ್ಟಿದ ಈ ಜೋಡಿ ತಂಡಕ್ಕೆ ನೆರವಾದರು. ಬಿರುಸಿನ ಆಟವನ್ನು ಪ್ರದರ್ಶಿಸಿದ ಪಂತ್ ಕೇವಲ 71 ಎಸೆತಗಳಲ್ಲಿ 10 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 85 ರನ್ ಗಳಿಸಿ ಶತಕ ವಂಚಿತರಾದರು. 

ರಾಹುಲ್ 79 ಎಸೆತಗಳಲ್ಲಿ ನಾಲ್ಕು ಬೌಂಡರಿ ನೆರವಿನಿಂದ 55 ರನ್ ಗಳಿಸಿದರು. ಆದರೆ ಇವರಿಬ್ಬರ ವಿಕೆಟ್ ಪತನದ ಬೆನ್ನಲ್ಲೇ ಭಾರತ ಮಗದೊಮ್ಮೆ ಹಿನ್ನಡೆ ಅನುಭವಿಸಿತು. 

ಶ್ರೇಯಸ್ ಅಯ್ಯರ್ (11) ಹಾಗೂ ವೆಂಕಟೇಶ್ ಅಯ್ಯರ್ (22) ಹೆಚ್ಚು ಹೊತ್ತು ನಿಲ್ಲಲಿಲ್ಲ. 

ಅಂತಿಮ ಹಂತದಲ್ಲಿ ಮುರಿಯದ ಏಳನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟ ಕಟ್ಟಿದ ಶಾರ್ದೂಲ್ ಠಾಕೂರ್ ಹಾಗೂ ರವಿಚಂದ್ರನ್ ಅಶ್ವಿನ್ (25*) ತಂಡಕ್ಕೆ ನೆರವಾದರು. 

38 ಎಸೆತಗಳನ್ನು ಎದುರಿಸಿದ ಠಾಕೂರ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 40 ರನ್ ಗಳಿಸಿ ಔಟಾಗದೆ ಉಳಿದರು. ದಕ್ಷಿಣ ಆಫ್ರಿಕಾ ಪರ ತಬ್ರೇಜ್ ಶಮ್ಸಿ ಎರಡು ವಿಕೆಟ್ ಕಬಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು