ಗುರುವಾರ , ನವೆಂಬರ್ 14, 2019
23 °C
ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌ ಬಿರುಗಾಳಿ

ದಕ್ಷಿಣ ಆಫ್ರಿಕಾ ಎದುರಿನ 3ನೇ ಟೆಸ್ಟ್‌: ‘ಕ್ಲೀನ್‌ ಸ್ವೀಪ್‌’ ಹೊಸ್ತಿಲಲ್ಲಿ ಭಾರತ

Published:
Updated:
Prajavani

ರಾಂಚಿ: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡುವ ಹಂಬಲದಲ್ಲಿರುವ ಭಾರತ ತಂಡವು ಈ ಹಾದಿಯಲ್ಲಿ ಇನ್ನೆರಡು ಹೆಜ್ಜೆ ಸಾಗಬೇಕಿದೆ.

ಇಲ್ಲಿನ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಗೆಲುವಿನ ತೋರಣ ಕಟ್ಟಲು ವಿರಾಟ್‌ ಕೊಹ್ಲಿ ಬಳಗ ಎರಡು ವಿಕೆಟ್‌ಗಳನ್ನು ಉರುಳಿಸಬೇಕಿದೆ.

ಅಂತಿಮ ಟೆಸ್ಟ್‌ನಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಸೋಮವಾರ ಭಾರತದ ವೇಗಿಗಳಾದ ಉಮೇಶ್‌ ಯಾದವ್‌ ಮತ್ತು ಮೊಹಮ್ಮದ್‌ ಶಮಿ ಆಘಾತ ನೀಡಿದರು. ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ಶಹಬಾಜ್‌ ನದೀಮ್‌ ಕೂಡ ಮೋಡಿ ಮಾಡಿದರು. ಹೀಗಾಗಿ ಮೂರನೆ ದಿನವೇ ಫಾಫ್‌ ಡು ಪ್ಲೆಸಿ ಪಡೆಯು ಒಟ್ಟು 16 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ.

ಎರಡು ವಿಕೆಟ್‌ಗೆ ಒಂಬತ್ತು ರನ್‌ಗಳಿಂದ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ್ದ ದಕ್ಷಿಣ ಆಫ್ರಿಕಾ, 56.2 ಓವರ್‌ಗಳಲ್ಲಿ 162ರನ್‌ಗಳಿಗೆ ಆಲೌಟ್‌ ಆಯಿತು.

ಫಾಲೋ ಆನ್‌ ಪಡೆದು ಎರಡನೇ ಇನಿಂಗ್ಸ್‌ ಆರಂಭಿಸಿದ ಪ್ರವಾಸಿ ಪಡೆಯು ಮತ್ತೆ ಬ್ಯಾಟಿಂಗ್‌ ವೈಫಲ್ಯ ಕಂಡಿತು. ಕ್ವಿಂಟನ್‌ ಡಿ ಕಾಕ್‌ (5), ಜುಬೇರ್‌ ಹಮ್ಜಾ (0), ಡು ಪ್ಲೆಸಿ (4), ತೆಂಬಾ ಬವುಮಾ (0) ಮತ್ತು ಹೆನ್ರಿಕ್‌ ಕ್ಲಾಸೆನ್‌ (5) ಒಂದಂಕಿ ಮೊತ್ತಕ್ಕೆ ಔಟಾದರು. ಹೀಗಾಗಿ ದಿನದಾಟದ ಅಂತ್ಯಕ್ಕೆ ತಂಡವು 46 ಓವರ್‌ಗಳಲ್ಲಿ 8 ವಿಕೆಟ್‌ಗೆ 132ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ದಕ್ಷಿಣ ಆಫ್ರಿಕಾವು 2002ರ ನಂತರ ಮೊದಲ ಸಲ ಸತತ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಫಾಲೋ ಆನ್‌ ಪಡೆಯಿತು.

ಸೋಮವಾರ ಬ್ಯಾಟಿಂಗ್‌ ಆರಂಭಿಸಿದ ದಕ್ಷಿಣ ಆಫ್ರಿಕಾಕ್ಕೆ ದಿನದ ಮೊದಲ ಓವರ್‌ನಲ್ಲೇ ಆಘಾತ ಎದುರಾಯಿತು. ಉಮೇಶ್‌ ಯಾದವ್‌ ಹಾಕಿದ ಐದನೇ ಎಸೆತದಲ್ಲಿ ಡು ಪ್ಲೆಸಿ ಬೌಲ್ಡ್‌ ಆದರು.

ಜುಬೇರ್‌ ಹಮ್ಜಾ (62; 79ಎ, 10ಬೌಂ, 1ಸಿ) ಮತ್ತು ತೆಂಬಾ ಬವುಮಾ (32; 72ಎ, 5ಬೌಂ) ಕೆಲ ಹೊತ್ತು ಆತಿಥೇಯ ಬೌಲರ್‌ಗಳನ್ನು ಕಾಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 91ರನ್‌ ಸೇರಿಸಿದ್ದರಿಂದ ತಂಡದ ಮೊತ್ತವು ಶತಕದ ಗಡಿ ದಾಟಿತು.

28ನೇ ಓವರ್‌ ಬೌಲ್‌ ಮಾಡಿದ ರವೀಂದ್ರ ಜಡೇಜ, ಜುಬೇರ್‌ಗೆ ಪೆವಿಲಿಯನ್‌ ದಾರಿ ತೋರಿಸಿದರು. ನಂತರ ಪ್ರವಾಸಿ ಪಡೆ ಕುಸಿತದ ಹಾದಿ ಹಿಡಿಯಿತು. 23ರನ್‌ ಕಲೆಹಾಕುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

ನಂತರ ಜಾರ್ಜ್‌ ಲಿಂಡ್‌ (37; 81ಎ, 3ಬೌಂ, 1ಸಿ) ತಂಡದ ಇನಿಂಗ್ಸ್‌ ಬೆಳೆಸಿದರು. ಅವರಿಗೆ ಎನ್ರಿಚ್‌ ನೋರ್ಟ್ಜೆ ಸೂಕ್ತ ಬೆಂಬಲ ನೀಡಿದರು. 55 ಎಸೆತಗಳನ್ನು ಆಡಿದ ಎನ್ರಿಚ್‌, ನಾಲ್ಕು ರನ್‌ ಗಳಿಸಿದರು!

ಮತ್ತೆ ವೈಫಲ್ಯ: ದ್ವಿತೀಯ ಇನಿಂಗ್ಸ್‌ನಲ್ಲೂ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್‌ ವೈಫಲ್ಯ ಕಂಡಿತು. 36 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡ ಡು ಪ್ಲೆಸಿ ಬಳಗಕ್ಕೆ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಆಸರೆಯಾದರು.

ಡೇನ್‌ ಪೀಡ್ತ್‌ (23; 73ಎ, 2ಬೌಂ, 1ಸಿ) ಅವರು ಎರಡು ಉಪಯುಕ್ತ ಜೊತೆಯಾಟಗಳಲ್ಲಿ ಭಾಗಿಯಾದರು. ಜಾರ್ಜ್‌ ಲಿಂಡ್‌ (27; 55ಎ, 5ಬೌಂ) ಮತ್ತು ತೆವುನಿಶ್‌ ಡಿ ಬ್ರ್ಯೂನ್‌ (ಬ್ಯಾಟಿಂಗ್‌; 30) ಜೊತೆ ಕ್ರಮವಾಗಿ ಏಳು ಮತ್ತು ಎಂಟನೇ ವಿಕೆಟ್‌ಗೆ ತಲಾ 31ರನ್‌ ಸೇರಿಸಿದರು. 

29ನೇ ಓವರ್‌ನಲ್ಲಿ ಲಿಂಡ್‌ ರನ್‌ಔಟ್‌ ಆದರು. 38ನೇ ಓವರ್‌ನಲ್ಲಿ ಪಿಡ್ತ್‌ ವಿಕೆಟ್‌ ಪಡೆದ ರವೀಂದ್ರ ಜಡೇಜ ಭಾರತದ ಗೆಲುವಿನ ಹಾದಿ ಸುಗಮ ಮಾಡಿದರು.

ಪ್ರತಿಕ್ರಿಯಿಸಿ (+)