ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA: ಪಂತ್ ಶತಕ, ಕುತೂಹಲದ ಘಟ್ಟದಲ್ಲಿ ಮೂರನೇ ಟೆಸ್ಟ್– ಒಲಿಯುವುದೇ ಜಯ?

ಭಾರತಕ್ಕೆ ಕೀಗನ್‌ ಪೀಟರ್ಸನ್ ತಡೆಗೋಡೆ
Last Updated 14 ಜನವರಿ 2022, 2:16 IST
ಅಕ್ಷರ ಗಾತ್ರ

ಕೇಪ್‌ಟೌನ್: ದೆಹಲಿ ಹುಡುಗ ರಿಷಭ್ ಪಂತ್ ಭಾರತ ತಂಡದ ಪಾಲಿಗೆ ಮತ್ತೊಮ್ಮೆ ಆಪದ್ಭಾಂದವನಾದರು. ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದ ಪಿಚ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ಗಳ ಶಿಸ್ತಿನ ದಾಳಿಯ ಮುಂದೆ ಅಜೇಯ ಶತಕ ಹೊಡೆದರು.

ಲಭಿಸಿದ ಎರಡು ಜೀವದಾನಗಳನ್ನು ಸಮರ್ಥವಾಗಿ ಬಳಸಿಕೊಂಡ ಪಂತ್ ಸಾಹಸದಿಂದಾಗಿ ಆತಿಥೇಯರಿಗೆ 212 ರನ್‌ಗಳ ಗುರಿ ಒಡ್ಡಲು ಸಾಧ್ಯವಾಯಿತು. ಆದರೆ, ಎರಡನೇ ಇನಿಂಗ್ಸ್ ಆರಂಭಿಸಿರುವ ಆತಿಥೇಯ ತಂಡವು ಈ ಮೊತ್ತದ ಬಹುತೇಕ ಅರ್ಧಹಾದಿ ಸವೆಸಿದೆ. ಮೂರನೇ ದಿನದಾಟದ ಮುಕ್ತಾಯಕ್ಕೆ 29.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 101 ರನ್ ಗಳಿಸಿದೆ. ಕೀಗನ್ ಪೀಟರ್ಸನ್ (ಬ್ಯಾಟಿಂಗ್ 48; 61ಎ) ಕ್ರೀಸ್‌ನಲ್ಲಿದ್ದಾರೆ. ಕೀಗನ್ ಮತ್ತು ಡೀನ ಎಲ್ಗರ್ ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಸೇರಿಸಿದರು. ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ ಎಲ್ಗರ್ ಔಟಾಗುವುದರೊಂದಿಗೆ ದಿನದಾಟ ಮತ್ತು ಜೊತೆಯಾಟಕ್ಕೆ ತೆರೆಬಿತ್ತು. ಇನಿಂಗ್ಸ್‌ನ ಎಂಟನೆ ಓವರ್‌ನಲ್ಲಿಯೇ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಏಡನ್ ಮರ್ಕರಂ ಔಟಾಗಿದ್ದರು.

ಪಂತ್ ದಿಟ್ಟ ಬ್ಯಾಟಿಂಗ್: ಮೊದಲ ಇನಿಂಗ್ಸ್‌ನಲ್ಲಿ 13 ರನ್‌ಗಳ ಅಲ್ಪ ಮುನ್ನಡೆ ಗಳಿಸಿದ್ದ ಪ್ರವಾಸಿ ಬಳಗವು ವೇಗಿ ಮಾರ್ಕೊ ಜ್ಯಾನ್ಸನ್, ಲುಂಗಿ ಗಿಡಿ ಮತ್ತು ಕಗಿಸೊ ರಬಾಡ ದಾಳಿಗೆ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. 58 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕ್ರೀಸ್‌ನಲ್ಲಿದ್ದ ನಾಯಕ ವಿರಾಟ್ ಆಸರೆ ನೀಡಲು ಹರಸಾಹಸ ನಡೆಸಿದ್ದರು. ತಮ್ಮ ಆಕ್ರಮಣಶೈಲಿಯನ್ನು ಕೈಬಿಟ್ಟು ಅಪಾರ ತಾಳ್ಮೆಯಿಂದ ಬ್ಯಾಟಿಂಗ್ ಮಾಡುತ್ತಿದ್ದರು. 40 ಎಸೆತಗಳಲ್ಲಿ 14 ರನ್ ಗಳಿಸಿದ್ದ ಅವರೊಂದಿಗೆ ಸೇರಿದ ಪಂತ್ ಎಸೆತಗಳನ್ನು ಚುರುಕಾಗಿ ಬೌಂಡರಿಯತ್ತ ಹೊಡೆದರು. ಕೊಹ್ಲಿ ಮತ್ತಷ್ಟು ರಕ್ಷಣಾತ್ಮಕವಾಗಿ ಆಡಿ, ರಿಷಭ್‌ಗೆ ಅವಕಾಶ ಕೊಟ್ಟರು.

ಇದರಿಂದಾಗಿ ಸ್ಕೋರ್‌ಬೋರ್ಡ್‌ನಲ್ಲಿ ರನ್‌ಗಳು ಪಟಪಟನೆ ಸೇರತೊಡಗಿದವು. ಐದನೇ ವಿಕೆಟ್ ಜೊತೆಯಾದಲ್ಲಿ 94 ರನ್‌ ಸೇರಿದವು. ಆದರೆ, 49ನೇ ಓವರ್‌ನಲ್ಲಿ ಲುಂಗಿ ಗಿಡಿ ಎಸೆತದಲ್ಲಿ ಕೆಟ್ಟ ಹೊಡೆತವಾಡಿದ ಕೊಹ್ಲಿ ದಂಡ ತೆತ್ತರು. ಜೊತೆಯಾಟ ಮುರಿದುಬಿತ್ತು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ

ಆದರೆ, ರಿಷಭ್ ಸಿಕ್ಕ ಅವಕಾಶದಲ್ಲಿಯೇ ಶತಕದ ಗಡಿ ಮುಟ್ಟಿದರು. ದಕ್ಷಿಣ ಆಫ್ರಿಕಾದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ವಿಕೆಟ್‌ಕೀಪರ್ ಹೆಗ್ಗಳಿಕೆಗೆ ಪಾತ್ರರಾದರು. ಒಂದೆಡೆ ವಿಕೆಟ್ ಪತನವಾಗುತ್ತಿದ್ದರೂ ತಂಡದ ಮೊತ್ತವು ಹೆಚ್ಚುವಂತೆ ನೋಡಿಕೊಂಡರು. ಭಾರತವು 67.3 ಓವರ್‌ಗಳಲ್ಲಿ 198 ರನ್ ಗಳಿಸಿ ಆಲೌಟ್ ಆಯಿತು. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ನಿರೀಕ್ಷಿತ ಗುರಿ ನೀಡಲು ವಿರಾಟ್ ಬಳಗಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ ನಾಲ್ಕನೇ ದಿನದಾಟದಲ್ಲಿ ಭಾರತಕ್ಕೆ ಗೆಲುವಿನ ಹಾದಿ ಕಠಿಣವಾಗಲಿದೆ. ಸರಣಿ ಜಯದ ಇತಿಹಾಸ ನಿರ್ಮಿಸಲು ಇನ್ನೂ ಎಂಟು ವಿಕೆಟ್‌ಗಳನ್ನು ಭಾರತ ಗಳಿಸಬೇಕಿದೆ. ನಾಲ್ಕನೇ ದಿನದ ಮೊದಲ ಅವಧಿಯ ಆಟವು ನಿರ್ಣಾಯಕವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT