ದಿಟ್ಟ ತಿರುಗೇಟು ನೀಡಿದ ಪ್ರವಾಸಿಗರು

7

ದಿಟ್ಟ ತಿರುಗೇಟು ನೀಡಿದ ಪ್ರವಾಸಿಗರು

Published:
Updated:
Deccan Herald

ಬೆಂಗಳೂರು: ದಕ್ಷಿಣ ಆಫ್ರಿಕಾ ‘ಎ’ ತಂಡವು ಶನಿವಾರ ಇಡೀ ದಿನ ತನ್ನ ಪ್ರಾಬಲ್ಯವನ್ನು ಬಿಟ್ಟುಕೊಡಲಿಲ್ಲ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಪ್ರವಾಸಿ ಬಳಗವು ಭಾರತ ‘ಎ’ ತಂಡಕ್ಕೆ ದಿಟ್ಟ ಉತ್ತರ ನೀಡಿತು.

ಬೆಂಗಳೂರು ಹೊರವಲಯದ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಟೆಸ್ಟ್‌’ ಪಂದ್ಯದಲ್ಲಿ ಡುವಾನ್ ಒಲಿವಿಯರ್ (63ಕ್ಕೆ6) ಅವರ ಶಿಸ್ತಿನ ದಾಳಿಯಿಂದಾಗಿ ಭಾರತ ‘ಎ’ ತಂಡವು 345 ರನ್‌ ಮೊತ್ತಕ್ಕೆ ಮೊದಲ ಇನಿಂಗ್ಸ್‌ ಮುಗಿಸಿತು.

ಶನಿವಾರ ಬೆಳಿಗ್ಗೆ ಒಂದು ತಾಸಿನಲ್ಲಿಯೇ ಆತಿಥೇಯರ ಆರು ವಿಕೆಟ್‌ಗಳು ಪತನವಾದವು. ನಂತರ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಎಸೆತದಲ್ಲಿಯೇ ಪೀಟರ್ ಮಲಾನ್ ವಿಕೆಟ್‌ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಅವರು ಬಿದ್ದರು.

ಆದರೆ ಇನ್ನೊಂದು ಬದಿಯಲ್ಲಿದ್ದ ಸೆರೆಲ್ ಎರ್ವಿ (58; 118ಎಸೆತ, 7ಬೌಂಡರಿ, 2 ಸಿಕ್ಸರ್) ಮತ್ತು ಅವರೊಂದಿಗೆ ಸೇರಿದ ಜುಬೇರ್ ಹಮ್ಜಾ (93; 125ಎಸೆತ, 15ಬೌಂಡರಿ ) ಎರಡನೇ ವಿಕೆಟ್ ಜೊತೆಯಾಟದಲ್ಲಿ 154 ಸೇರಿಸಿದರು. ಇವರಿಬ್ಬರ ದಿಟ್ಟ ಆಟದ ನೆರವಿನಿಂದ ತಂಡ ಮೂರು ವಿಕೆಟ್‌ಗಳಿಗೆ 219 ರನ್ ಗಳಿಸಿದೆ. ಸಂಜೆ ಮಳೆ ಸುರಿದ ಕಾರಣ ಆಟ ಸ್ಥಗಿತಗೊಳಿಸಿದಾಗ ದಿನದಾಟದ 15 ಓವರ್‌ಗಳು ಬಾಕಿ ಉಳಿದಿದ್ದವು.

ಪಂದ್ಯದ ಮೊದಲ ದಿನವಾದ ಶುಕ್ರವಾರ ಹನುಮವಿಹಾರಿ ಶತಕದ ಬಲದಿಂದ ಭಾರತ ‘ಎ’ ನಾಲ್ಕು ವಿಕೆಟ್‌ ನಷ್ಟಕ್ಕೆ 322 ರನ್‌ ಗಳಿಸಿತ್ತು. ಎರಡನೇ ದಿನದಾಟದಲ್ಲಿ ಕೇವಲ 23 ರನ್ ಗಳಿಸಿ ಉಳಿದ ಆರೂ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಲ್ಲಿ ಐದು ವಿಕೆಟ್‌ಗಳನ್ನು ಒಲಿವರ್ ಅವರೇ ಕಬಳಿಸಿದರು.

ತುಸು ಜೋರಾಗಿಯೇ ಬೀಸುತ್ತಿದ್ದ ಗಾಳಿ ಮತ್ತು ಪಿಚ್‌ನ ತೇವಾಂಶದ ಲಾಭವನ್ನು ಬಳಸಿಕೊಂಡ ಒಲಿವರ್ ಆತಿಥೇಯರ ಬ್ಯಾಟ್ಸ್‌ಮನ್‌ಗಳಿಗೆ ರನ್‌ ಗಳಿಸುವ ಅವಕಾಶವನ್ನೇ ನೀಡಲಿಲ್ಲ. 34 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಕೆ.ಎಸ್‌. ಭರತ್ ವಿಕೆಟ್ ಕಬಳಿಸುವ ಮೂಲಕ ದಿನದ ಆರಂಭ ಮಾಡಿದ ಒಲಿವರ್ ನಂತರ ಜಯಂತ್ ಯಾದವ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಅಂಕಿತ್ ರಜಪೂತ್ ಅವರ ವಿಕೆಟ್ ಪಡೆದರು.

ಶುಕ್ರವಾರ ಬೆಳಿಗ್ಗೆ ತಮ್ಮ ಮೊದಲ ಓವರ್‌ನಲ್ಲಿ ಒಲಿವರ್ ಅವರು ಮಯಂಕ್ ಅಗರವಾಲ್ ವಿಕೆಟ್ ಪಡೆದಿದ್ದರು. ಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಹನುಮವಿಹಾರಿ ತಮ್ಮ ಖಾತೆಗೆ ಮತ್ತೆ 10 ರನ್ ಸೇರಿಸಿ ಔಟಾದರು. ಅವರು ಎನ್ರಿಚ್ ನಾರ್ಜಿ ಹಾಕಿದ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ಎರಡನೇ ಸ್ಲಿಪ್‌ನಲ್ಲಿದ್ದ ಜುಬೇರ್‌ ಹಮ್ಜಾ ಅವರಿಗೆ ಕ್ಯಾಚಿತ್ತರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 101 ಓವರ್‌ಗಳಲ್ಲಿ 345 (ಜಿ. ಹನುಮವಿಹಾರಿ 148, ಕೆ.ಎಸ್. ಭರತ್ 34, ಜಯಂತ್ ಯಾದವ್ 1, ಯಜುವೇಂದ್ರ ಚಾಹಲ್ 1, ಮೊಹಮ್ಮದ್ ಸಿರಾಜ್ 4, ಡುವಾನ್ಲಿ ಒಲಿವಿಯರ್ 63ಕ್ಕೆ6, ಅಂಕಿತ್ ನಾರ್ಜಿ 69ಕ್ಕೆ2, ಸೆನುರನ್ ಮುತುಸಾಮಿ 51ಕ್ಕೆ1, ಡೇನ್ ಪಿಡ್ತ್ 46ಕ್ಕೆ; ದಕ್ಷಿಣ ಆಫ್ರಿಕಾ ಎ: 59. 5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 219 (ಸೆರೆಲ್ ಎರ್ವಿ 58, ಜುಬೇರ್ ಹಮ್ಜಾ 93, ವ್ಯಾನ್ ಡೆರ್ ಡುಸೆನ್‌ ಔಟಾಗದೆ 18, ರೂಡಿ ಸೆಕೆಂಡ್‌ ಔಟಾಗದೆ 35; ಮೊಹಮ್ಮದ್‌ ಸಿರಾಜ್‌ 51ಕ್ಕೆ1, ಯಜುವೇಂದ್ರ ಚಾಹಲ್‌ 62ಕ್ಕೆ2). 

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !