ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

"ಚೋಕರ್’ ಪಟ್ಟ ಕಿತ್ತೆಸೆಯಲು ಜಯವೊಂದೇ ದಾರಿ

Last Updated 20 ಮೇ 2019, 17:42 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಆಫ್ರಿಕಾ ತಂಡವು ‘ಚೋಕರ್‌’ ಪಟ್ಟ ಕಿತ್ತೆಸೆಯಬೇಕಾದರೆ ವಿಶ್ವಕಪ್ ಜಯಿಸುವುದೊಂದೇ ದಾರಿ ಎಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಕೆಪ್ಲರ್ ವೆಸಲ್ಸ್‌ ಸೋಮವಾರ ಹೇಳಿದ್ದಾರೆ.

1992ರ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದ ಕೆಪ್ಲರ್, ‘ಈ ಬಾರಿಯ ಟೂರ್ನಿಯಲ್ಲಿ ನಮ್ಮದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿಲ್ಲ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಆದರೆ ಒಂದು ವಿಶ್ವಕಪ್ ಗೆಲ್ಲುವವರೆಗೂ ಜನರು ನಮ್ಮ ತಂಡವನ್ನು ಚೋಕರ್ ಎಂದೇ ಕರೆಯುತ್ತಾರೆ. 1999ರಲ್ಲಿ ನಮ್ಮದು ಶ್ರೇಷ್ಠ ತಂಡವಾಗಿತ್ತು. ಆದರೂ ಆಗ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ’ ಎಂದರು.

‘ತಂಡದಲ್ಲಿ ಎಬಿ ಡಿವಿಲಿಯರ್ಸ್‌ ಇಲ್ಲದೇ ಇರುವುದು ದೊಡ್ಡ ಹಿನ್ನಡೆ. ಅನುಭವಿ ಹಾಶೀಂ ಆಮ್ಲಾ ಮತ್ತಿತರ ಮೇಲೆ ತಂಡವು ಅವಲಂಬಿತವಾಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಸದ್ಯ ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಭಾರತವು ಉತ್ತಮ ತಂಡವಾಗಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳಿಗೂ ಭಾರತವನ್ನು ಸೋಲಿಸುವುದು ಸುಲಭವಾಗಿಲ್ಲ. ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿರುವ ಇಂಗ್ಲೆಂಡ್ ಕೂಡ ಉಳಿದೆಲ್ಲ ತಂಡಗಳಿಗೂ ಕಠಿಣ ಪೈಪೋಟಿ ಒಡ್ಡುವುದು ಖಚಿತ. ಆದರೆ, ಆತಿಥೇಯ ನೆಲದಲ್ಲಿ ಆಡುವಾಗಿನ ಒತ್ತಡವು ಆ ತಂಡದ ಮೇಲೆ ಇದೆ’ ಎಂದು 61 ವರ್ಷದ ಕೆಪ್ಲರ್ ವಿಶ್ಲೇಷಿಸಿದರು.

‘ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಅಮೋಘವಾಗಿ ಆಡಿದ್ದಾರೆ. ಆದರೆ ಅವರು ಈ ಟೂರ್ನಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ. ಒಂದೊಮ್ಮೆ ತಂಡವು ಹತ್ತು ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡರೆ, ವಿರಾಟ್ ಆಸರೆ ನೀಡಬಲ್ಲರು’ ಎಂದರು.

‘ಇಂಗ್ಲೆಂಡ್‌ನಲ್ಲಿ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ವಿಪರೀತ ಬಿಸಿಲು ಇರುತ್ತದೆ. ಆಧ್ದರಿಂದ ಹಗಲು ಅವಧಿಯ ಪಂದ್ಯಗಳಲ್ಲಿ 300–320 ರನ್‌ಗಳ ಮೊತ್ತ ಪೇರಿಸಲು ಸಾಧ್ಯವಾಗಬಹುದು. ಆದರೆ ಪ್ರತಿಯೊಂದು ಕ್ರೀಡಾಂಗಣ ಮತ್ತು ಪಿಚ್‌ಗಳು ವಿಭಿನ್ನವಾಗಿರುವುದರಿಂದ ಬೌಲರ್‌ಗಳಿಗೆ ಹೆಚ್ಚು ನೆರವು ಸಿಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT