ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ 2019| ಫಾಫ್ ಬಳಗದ ಫ್ಲಾಪ್ ಷೋ

ದಕ್ಷಿಣ ಆಫ್ರಿಕದಿಂದ ಹಿಂದೆಂದೂ ಕಾಣದಷ್ಟು ಕಳಪೆ ಪ್ರದರ್ಶನ
Last Updated 30 ಜೂನ್ 2019, 19:30 IST
ಅಕ್ಷರ ಗಾತ್ರ

ಹಾಲಿ ವಿಶ್ವಕಪ್‌ನ ಅನಿರೀಕ್ಷಿತಗಳಲ್ಲಿ ಒಂದು– ದಕ್ಷಿಣ ಆಫ್ರಿಕ ತಂಡದ ನಿರಾಶಾದಾಯಕ ಪ್ರದರ್ಶನ. ಈ ಬಾರಿ ಲಂಡನ್‌ಗೆ ಈ ತಂಡದ ಆಟಗಾರರು ಬಂದಿಳಿದಾಗ ಅವರ ಮೇಲೆ ‘ಫೆವರೀಟ್‌’ ಎಂಬ ನಿರೀಕ್ಷೆಯ ಭಾರವೇನೂ ಇರಲಿಲ್ಲ. ಆದರೆ ಅದೇ ಹೊತ್ತಿನಲ್ಲಿ ತಂಡವನ್ನು ಕಡೆಗಣಿಸುವಂತೆಯೂ ಇರಲಿಲ್ಲ. ಇತರ ತಂಡಗಳ ಮೇಲೇ ಹೆಚ್ಚು ಗಮನವಿರುತ್ತಿದ್ದ ಕಾರಣ, ಮೊದಲ ಬಾರಿ ಒತ್ತಡವಿಲ್ಲದೇ ವಿಶ್ವಕಪ್‌ ಆಡುವ ಅವಕಾಶ ತಂಡಕ್ಕಿತ್ತು. ಆದರೆ ತಂಡದ ಆಟ ಕ್ರಿಕೆಟ್‌ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.

ಸತತ ಸೋಲುಗಳಿಂದ ಆಟಗಾರರು ಒತ್ತಡದಲ್ಲಿದ್ದಾರೆ. ಎರಡು ಪಂದ್ಯಗಳು ಉಳಿದಿದ್ದರೂ, ಅಷ್ಟರೊಳಗೆ ಸೆಮಿಫೈನಲ್‌ ಬಾಗಿಲು ಮುಚ್ಚಿಹೋಗಿದೆ.ಆಡಿದ ಏಳು ಪಂದ್ಯಗಳಲ್ಲಿ ಐದು ಸೋಲು. ಒಂದು ಮಳೆಯ ಪಾಲು. ಒಂದು ಗೆಲುವು– ಅದೂ ತಳದಲ್ಲಿರುವ ಅಫ್ಗಾನಿಸ್ತಾನ ವಿರುದ್ಧ.ಇನ್ನು ಉಳಿದಿರುವ ಎರಡು ಪ‍ಂದ್ಯಗಳನ್ನು ಸಮಾಧಾನಕ್ಕೆಂಬಂತೆ ಆಡಬೇಕಷ್ಟೇ. ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಅದು ಕೊನೆಯ ಪಂದ್ಯ ಆಡಬೇಕಾಗಿದೆ.

ಹೆಚ್ಚಿನ ಪಂದ್ಯಗಳಲ್ಲಿ ಸಾಂಘಿಕ ಸ್ಫೂರ್ತಿ, ಹೋರಾಟದ ಕಿಚ್ಚು ಕಂಡುಬರಲಿಲ್ಲ.ಅನುಭವಿ ಬ್ಯಾಟ್ಸಮನ್‌ಗಳಿದ್ದರೂ– ವಿಕೆಟ್‌ ಕೀಪರ್‌ ಕ್ವಿಂಟನ್ ಡಿಕಾಕ್‌, ನಾಯಕ ಫಾಫ್‌ ಡುಪ್ಲೆಸಿ, ಹಾಶಿಂ ಆಮ್ಲಾ, ಜೀನ್‌ ಪಾಲ್‌ ಡುಮಿನಿ (ಎಲ್ಲರೂ ನೂರು ಪಂದ್ಯಗಳಿಗಿಂತ ಹೆಚ್ಚು ಆಡಿದವರೇ)– ಸ್ಥಿರ ಪ್ರದರ್ಶನ ಮೂಡಿಬರಲಿಲ್ಲ. ತಂಡದಿಂದ ಒಂದೂ ಶತಕ ದಾಖಲಾಗಲಿಲ್ಲ. ಏಳು ಅರ್ಧ ಶತಕಗಳಷ್ಟೇ ದಾಖಲಾದವು (ಅತ್ಯಧಿಕ 68, ಎರಡು ಬಾರಿ ಕ್ವಿಂಟನ್‌ ಡಿಕಾಕ್‌ ಈ ಮೊತ್ತ ಗಳಿಸಿದ್ದಾರೆ). ಕ್ರಿಸ್‌ ಮಾರಿಸ್‌ ಒಂದೆರಡು ಪಂದ್ಯಗಳಲ್ಲಿ ಆಕ್ರಮಣಕಾರಿಯಾಗಿ ಆಡಿದ್ದು ಎದ್ದುಕಂಡಿತು. ಕಳೆದ ನವೆಂಬರ್‌ನಿಂದ ಈ ವರ್ಷದ ಮಾರ್ಚ್‌ವರೆಗೆ ದಕ್ಷಿಣ ಆಫ್ರಿಕ ಆಡಿರುವ ಏಕದಿನ ಪಂದ್ಯಗಳು 13. ಇದರಲ್ಲಿ 10 ಪಂದ್ಯಗಳನ್ನು ಗೆದ್ದು, ಮೂರರಲ್ಲಿ ಮಾತ್ರ ಸೋಲನುಭವಿಸಿತ್ತು. ಇದರಲ್ಲಿ ಮೂರು ಸರಣಿ ಗೆಲುವು ಸೇರಿತ್ತು. ಈ ಪಂದ್ಯಗಳಲ್ಲಿ ಆಟಗಾರರು ಐದು ಶತಕ, 16 ಅರ್ಧಶತಕಗಳನ್ನು ಬಾರಿಸಿದ್ದರು.

ಈ ಹಿಂದೆ ತಂಡದಲ್ಲಿದ್ದ ಎ.ಬಿ.ಡಿವಿಲಿಯರ್ಸ್‌, ಆಲ್‌ರೌಂಡರ್ ಜಾಕ್‌ ಕಾಲಿಸ್‌, ವಿಕೆಟ್‌ ಕೀಪರ್‌ ಮಾರ್ಕ್‌ ಬೌಷರ್‌ ಅಂಥ ಉಪಯುಕ್ತ ಆಟಗಾರರ ಕೊರತೆಯೂ ಕಾಡಿತು. ಕಳೆದ ವರ್ಷ ನಿವೃತ್ತಿ ಘೋಷಿಸಿದ್ದ ಡಿವಿಲಿಯರ್ಸ್‌ ತಂಡ ಪ್ರಕಟಿಸುವ ಸಂದರ್ಭದಲ್ಲಿ ಮನಸ್ಸು ಬದಲಾಯಿಸಿದ್ದರು. ಆದರೆ ತನ್ನ ಮಾತು ಕೇಳದೇ ನಿವೃತ್ತಿ ಪ್ರಕಟಿಸಿದ್ದ ಅವರ ವಿರುದ್ಧ ಕ್ರಿಕೆಟ್‌ ಮಂಡಳಿ ಮಾತ್ರ ಮನಸ್ಸು ಬದಲಾಯಿಸಲಿಲ್ಲ.

ಬೌಲಿಂಗ್‌ನಲ್ಲಿ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಬಿಟ್ಟರೆ ಉಳಿದವರು ನಿರಾಶೆ ಮೂಡಿಸಿದರು. ಕಳೆದ ಐಪಿಎಲ್‌ನಲ್ಲಿ ಇಮ್ರಾನ್‌ ಅವರಿಗಿಂತ ಐದು ಪಂದ್ಯ ಕಡಿಮೆ ಆಡಿದರೂ 25 ವಿಕೆಟ್‌ಗಳೊಡನೆ ಎರಡನೇ ಸ್ಥಾನದಲ್ಲಿದ್ದ ಕಗಿಸೊ ರಬಾಡ, ಯುವ ಬೌಲರ್‌ ಲುಂಗಿ ಗಿಡಿ ಮೇಲಿಟ್ಟ ಭರವಸೆ ಹುಸಿಯಾಯಿತು. ಮತ್ತೊಬ್ಬ ಅನುಭವಿ ವೇಗಿ ಡೇಲ್‌ ಸ್ಟೇನ್‌ ಗಾಯಾಳಾಗಿದ್ದು ತಂಡದ ತಲೆನೋವನ್ನು ಹೆಚ್ಚಿಸಿತಷ್ಟೇ. ಮೊದಲ ಹತ್ತು ಓವರುಗಳಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ದಕ್ಷಿಣ ಆಫ್ರಿಕ ವೇಗಿಗಳು ವಿಫಲರಾದರು. ಈ ಹಿಂದೆ ವೇಗದ ಬೌಲರ್‌ಗಳೇ ದಕ್ಷಿಣ ಆಫ್ರಿಕ ಗೆಲುವಿಗೆ ಪ್ರಮುಖ ಕಾಣಿಕೆ ನೀಡುತ್ತಿದ್ದರು. ಆ್ಯಲನ್‌ ಡೊನಾಲ್ಡ್‌, ಶಾನ್‌ ಪೊಲಾಕ್‌, ಕ್ಲೂಸ್ನರ್‌, ಕಾಲಿಸ್‌, ಮಖಾಯ ಎನ್‌ಟಿನಿ ಮತ್ತಿತರರು ನೆನಪಾಗುತ್ತಾರೆ.

ಒಂದು ಕಾಲದಲ್ಲಿ ದಕ್ಷಿಣ ಆಫ್ರಿಕ ಉತ್ತಮ ಫೀಲ್ಡಿಂಗ್‌ ತಂಡವೆನಿಸಿತ್ತು. ಜಾಂಟಿ ರೋಡ್ಸ್‌, ಹರ್ಷೆಲ್‌ ಗಿಬ್ಸ್‌ ಅವರಂಥವರು ಮಾದರಿಯಾಗಿದ್ದರು. ಆದರೆ ಈ ವಿಶ್ವಕಪ್‌ನಲ್ಲಿ ಕ್ಷೇತ್ರರಕ್ಷಣೆ ಹೇಳಿಕೊಳ್ಳುವ ಮಟ್ಟದಲ್ಲಿರಲಿಲ್ಲ. ಡೇವಿಡ್‌ ಮಿಲ್ಲರ್‌ ಅಂಥ ಉತ್ತಮ ಫೀಲ್ಡರ್‌ ಸುಲಭ ಕ್ಯಾಚ್‌ಗಳನ್ನು, ಅದೂ ನಿರ್ಣಾಯಕ ಗಳಿಗೆಯಲ್ಲಿ ನೆಲಕ್ಕೆ ಹಾಕಿದರು. ಒಟ್ಟಾರೆ ಹತ್ತಕ್ಕೂ ಹೆಚ್ಚು– ಸುಲಭ ಮತ್ತು ಕಠಿಣ– ಕ್ಯಾಚ್ ಅವಕಾಶಗಳು ವ್ಯರ್ಥವಾದವು. ಇವೆಲ್ಲವೂ ದುಬಾರಿಯಾಯಿತು.ರನ್‌ಔಟ್‌ ಅವಕಾಶಗಳಲ್ಲೂ ಎಸೆತಗಳು ಗುರಿತಪ್ಪಿದ್ದವು.

ಚೋಕರ್ಸ್‌:‌ ಈ ಹಿಂದೆ ದಕ್ಷಿಣ ಆಫ್ರಿಕದ ‘ಚರಿತ್ರೆ’ ಗಮನಿಸಿದರೆ, ಅದು ನಿರ್ಣಾಯಕ (ಲೀಗ್‌ ಕೊನೆಯ ಪಂದ್ಯ, ಕ್ವಾರ್ಟರ್‌ಫೈನಲ್‌, ಸೆಮಿಫೈನಲ್‌) ಹಂತದಲ್ಲಿ ಮುಗ್ಗರಿಸುತ್ತಿರುವುದು ಸಾಮಾನ್ಯವಾಗಿತ್ತು. ಹೀಗಾಗಿ ‘ಚೋಕರ್ಸ್‌’ ಎಂಬ ಹಣೆಪಟ್ಟಿ ಹರಿಣಗಳ ತಂಡಕ್ಕಿತ್ತು. ಆದರೆ ಈ ಬಾರಿ ತಂಡದ ಪ್ರದರ್ಶನ ಸಾಧಾರಣ ಮಟ್ಟದಿಂದ ಕಳಪೆಯಾಗುವ ಹಾದಿಯಲ್ಲಿ ಸಾಗಿದ್ದು ವಿಸ್ಮಯ ಮೂಡಿಸಿತು. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ಮಣಿದ ನಂತರ ಬಾಂಗ್ಲಾದೇಶಕ್ಕೆ ಸೋತಿದ್ದು ದೊಡ್ಡ ಹೊಡೆತ ಎನಿಸಿತು.

ತಂಡ ಈಗ ನಿರಾಶೆಯ ಮಡುವಿಗೆ ಬಿದ್ದಿದೆ. ಬಾಕಿವುಳಿದ ಎರಡು ಪಂದ್ಯಗಳನ್ನು ಗೆದ್ದರೆ, ವಿಶ್ವಕಪ್‌ ನಂತರ ನಿವೃತ್ತಿ ಆಗಲಿರುವ ಇಮ್ರಾನ್‌ ತಾಹಿರ್‌ ಮತ್ತು ಡುಮಿನಿ ಅವರಿಗೆ ಒಂದಿಷ್ಟು ನೆಮ್ಮದಿಯೊಡನೆ ಬೀಳ್ಕೊಡಬಹುದಷ್ಟೇ.

2019ರ ವಿಶ್ವಕಪ್‌– ದಕ್ಷಿಣ ಆಫ್ರಿಕಕ್ಕೆ ನಿರಾಶೆಯ ಹಾದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT