ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೇನ್: ನೋವಿನಲ್ಲೂ ವೇಗದ ಕಾವು

Last Updated 30 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

‘ಅವನು ಬೌಲಿಂಗ್ ದಾಳಿಯ ನಿಜ ನೇತಾರ. ನನ್ನ ದಾಖಲೆ ಮುರಿದಿರುವುದು ಅಚ್ಚರಿಯೇನೂ ಅಲ್ಲ’– ದಕ್ಷಿಣ ಆಫ್ರಿಕಾದ ಬೌಲರ್ ಶಾನ್ ಪೊಲಾಕ್ ಕೊಟ್ಟ ಶಹಬ್ಬಾಸ್‌ಗಿರಿ ಇದು. ಅದನ್ನು ಪಡೆದ ಡೇಲ್ ಸ್ಟೇನ್‌ ತನ್ನ ಕುಟುಂಬದವರು, ಸ್ನೇಹಿತರು ಹಾಗೂ ಸ್ವಯಂ ಕ್ರಿಕೆಟ್ ಆಟಕ್ಕೆ ಧನ್ಯವಾದ ಸಲ್ಲಿಸಿರುವುದೂ ಅರ್ಥಪೂರ್ಣ.

ಪ್ರತಿ 22.60 ರನ್‌ಗಳಿಗೆ ಒಂದರಂತೆ 422 ವಿಕೆಟ್‌ ಗಳಿಸಿದ ಸ್ಟೇನ್ ಈಗ ಟೆಸ್ಟ್‌ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಗಣ್ಯ. 89 ಪಂದ್ಯಗಳಲ್ಲಿ ಅವರು ಮಾಡಿರುವ ಈ ಸಾಧನೆ ಹತ್ತು ವರ್ಷಗಳಿಂದ ಪೊಲಾಕ್ ಹೆಸರಿನಲ್ಲಿ ಇದ್ದ ದಾಖಲೆಯನ್ನು ಅಳಿಸಿಹಾಕಿದೆ (ಪೊಲಾಕ್ 108 ಪಂದ್ಯಗಳಲ್ಲಿ 421 ವಿಕೆಟ್ ಪಡೆದಿದ್ದಾರೆ).

ವನ್ಯಜೀವಿಗಳ ಸ್ವರ್ಗ ಎಂದೇ ಪರಿಗಣಿತವಾದ ಕ್ರುಗೆರ್ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ಫಲಬೋರ್ವಾ ಸ್ಟೇನ್‌ ತವರು. ಮೀನು ಹಿಡಿಯುವುದು, ಸ್ಕೇಟ್‌ ಬೋರ್ಡಿಂಗ್‌ ಎಂದೆಲ್ಲ ತೊಡಗಿಕೊಳ್ಳುತ್ತಿದ್ದ ಸ್ಟೇನ್‌ 11ನೇ ವಯಸ್ಸಿನಲ್ಲಿ ಗಂಭೀರವಾಗಿ ಕ್ರಿಕೆಟ್‌ ಆಡತೊಡಗಿದರು. ಕ್ರಿಸ್‌ಮಸ್‌ ಉಡುಗೊರೆಯಾಗಿ ಹ್ಯಾನ್ಸಿ ಕ್ರೋನಿಯೆ ಆಡಿದ್ದ ಪರಿಕರಗಳ ಸೆಟ್‌ ಸಿಕ್ಕಾಗ ಸ್ವರ್ಗಕ್ಕೆ ಮೂರೇ ಗೇಣು. ಮೆರೆನ್ಸಿ ಹೈಸ್ಕೂಲಿನಲ್ಲೇ ವೇಗದ ಬೌಲಿಂಗ್‌ ಸಾಣೆಗೆ ಒಡ್ಡಿಕೊಂಡ ಸ್ಟೇನ್‌ 2003ರಲ್ಲಿ ನಾರ್ದರ್ನ್ಸ್ ತಂಡದ ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟಾಗ ವೇಗ, ಸ್ವಿಂಗ್ ಮೊನಚು ಸ್ಪಷ್ಟವಾಯಿತು. ದೇಸಿ ಕ್ರಿಕೆಟ್‌ನ ಎರಡೇ ಋತುಗಳ ಪ್ರದರ್ಶನದಲ್ಲಿ ಅಂತರರಾಷ್ಟ್ರೀಯ ಟೆಸ್ಟ್‌ ಪಂದ್ಯಕ್ಕೆ ಅರ್ಹ ಎನ್ನುವುದನ್ನು ಸಾಬೀತು ಪಡಿಸಿದರು.

ಸೀಮ್‌ ನೆಲಕ್ಕೆ ಬಡಿದು ಹೊರಹೋಗುವಂತೆ ಸ್ಟೇನ್‌ ಬೌಲಿಂಗ್‌ ಮಾಡುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ವೇಗದ ಬೌಲರ್‌ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ರಿಚರ್ಡ್‌ ಹ್ಯಾಡ್ಲಿ, ಶಾನ್ ಪೊಲಾಕ್ ಅವರ ಬೌಲಿಂಗ್‌ ಆ್ಯಕ್ಷನ್‌ಗೆ ಹೋಲಿಸಿದರೆ ಸ್ಟೇನ್‌ ಇನ್ನೂ ವೇಗಿಯೇ ಹೌದು. ಆದರೂ 20ರ ಹರೆಯದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟ ಅವರು 15 ವರ್ಷದ ಟೆಸ್ಟ್‌ ಕ್ರಿಕೆಟ್‌ ವೃತ್ತಿಬದುಕನ್ನು ಕಟ್ಟಿಕೊಂಡ ಬಗೆ ಅನನ್ಯ.

ಮೂರೂವರೆ ವರ್ಷಗಳಿಂದ ಅವರು ಹೆಣಗಾಡುತ್ತಿದ್ದಾರೆ. 2015ರ ನಡುಘಟ್ಟದಲ್ಲಿ ಭಾರತದ ವಿರುದ್ಧ ಆಡಬೇಕಾದ ಹೊತ್ತಿನಲ್ಲೇ ತೊಡೆಸಂದಿನ ನೋವು ಕಾಣಿಸಿಕೊಂಡಿತು. 2009ರಿಂದ ಸತತವಾಗಿ 48 ಟೆಸ್ಟ್‌ಗಳಲ್ಲಿ ಆಡಿ 263 ವಿಕೆಟ್‌ಗಳನ್ನು ಕಿತ್ತು ದಾಖಲೆ ವೀರ ಎನಿಸಿಕೊಂಡಿದ್ದ ವೇಗದ ಬೌಲರ್‌ಗೆ ಸಹಜವಾಗಿಯೇ ಇಂಥ ನೋವು ಹೈರಾಣು ಮಾಡಿಬಿಡುತ್ತದೆ. ಅದು ಸಾಲದೆಂಬಂತೆ ಎರಡು ಸಲ ಭುಜದ ನೋವು ಕಾಡಿತು. 80ನೇ ಟೆಸ್ಟ್‌ನಲ್ಲಿ 400 ವಿಕೆಟ್‌ ಗಡಿ ದಾಟಿದ ಸ್ಟೇನ್‌, ಆಮೇಲಿನ 22 ವಿಕೆಟ್‌ಗಳನ್ನು ಪಡೆಯಲು ಮೂರೂಕಾಲು ವರ್ಷ ಕಾಯಬೇಕಾಗಿ ಬಂದದ್ದು ಕ್ರಿಕೆಟ್‌ನಲ್ಲಿನ ನಿಶ್ಚಿತತೆಗೆ ಉದಾಹರಣೆ.

ಈ ವರ್ಷ ಜನವರಿಯಲ್ಲಿ ಭಾರತದ ವಿರುದ್ಧ ಆಡುವ ತಂಡದಲ್ಲಿ ಅವರಿದ್ದರಾದರೂ ಹಿಮ್ಮಡಿನೋವು ಮೊದಲ ಪಂದ್ಯದಲ್ಲೇ ಕಾಡಿತು. ಉಳಿದ ಪಂದ್ಯಗಳಲ್ಲಿ ಬೆಂಚು ಕಾಯಬೇಕಾಯಿತು. ಆಮೇಲೆ 27 ಟೆಸ್ಟ್‌ ಪಂದ್ಯಗಳಲ್ಲಿ ಅವರು ಆಡಿರಲಿಲ್ಲ. ಪಾಕಿಸ್ತಾನದ ಎದುರು ಮತ್ತೆ ಕಣಕ್ಕೆ ಇಳಿದು, ಫಕರ್‌ ಜಮಾನ್ ವಿಕೆಟ್‌ ಪಡೆದಾಗ ಶಾನ್‌ ಪೊಲಾಕ್ ವೀಕ್ಷಕ ವಿವರಣೆ ನೀಡುತ್ತಿದ್ದುದು ವಿಶೇಷ. ತಮ್ಮ ದಾಖಲೆ ಅಳಿಸಿದ ಆಟಗಾರನ ಗುಣಗಾನ ಅವರ ಬಾಯಿಂದಲೇ.

ವಿಶ್ವದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಸ್ಟೇನ್‌, ನ್ಯೂಜಿಲೆಂಡ್‌ನ ಹ್ಯಾಡ್ಲಿ ದಾಖಲೆಯನ್ನು ಮುಟ್ಟಲು ಇನ್ನೂ ಒಂಬತ್ತು ವಿಕೆಟ್‌ಗಳು ಬೇಕು. ಅದು ಸಾಧ್ಯವೇ ಎಂಬ ಪ್ರಶ್ನೆಗೆ ಸದ್ಯಕ್ಕೆ ನಗುವೇ ಅವರು ಕೊಡುವ ಉತ್ತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT