ಶುಕ್ರವಾರ, ಡಿಸೆಂಬರ್ 6, 2019
19 °C

ಟಿ20 ಕ್ರಿಕೆಟ್ ದಾಖಲೆ: ಒಂದೂ ರನ್‌ ನೀಡದೆ 6 ವಿಕೆಟ್ ಕಬಳಿಸಿದ ನೇಪಾಳ ಬೌಲರ್

Published:
Updated:

ಪೊಕಹರ(ನೇಪಾಳ): ಒಂದು ರನ್ ಕೂಡ ನೀಡದೆ ಆರು ವಿಕೆಟ್ ಕಬಳಿಸಿದ ನೇಪಾಳದ ಅಂಜಲಿ ಚಂದ ಅವರು ಮಹಿಳೆಯರ ಅಂತರ ರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಸೋಮವಾರ ದಾಖಲೆ ಬರೆದರು. 

ದಕ್ಷಿಣ ಏಷ್ಯಾ ಕ್ರೀಡಾಕೂಟದ ಅಂಗವಾಗಿ ನಡೆದ ಪಂದ್ಯದಲ್ಲಿ ಮಾಲ್ಡಿವ್ಸ್ ಎದುರು ಅಂಜಲಿ ಈ ಸಾಧನೆ ಮಾಡಿದರು. ಪಂದ್ಯದಲ್ಲಿ ನೇಪಾಳ 10 ವಿಕೆಟ್‌ಗಳ ಜಯ ಸಾಧಿಸಿತು. ಗೆಲುವಿಗೆ ಬೇಕಾದ 17 ರನ್‌ಗಳನ್ನು ಈ ತಂಡ ಕೇವಲ ಐದು ಎಸೆತಗಳಲ್ಲಿ ಗಳಿಸಿತು.  

‌24 ವರ್ಷದ ಅಂಜಲಿ 2.1 ಓವರ್‌ಗಳಲ್ಲಿ ಆರು ಮಂದಿಯನ್ನು ವಾಪಸ್ ಕಳುಹಿಸಿದರು. ಅವರ ಈ ಅಪರೂಪದ ಸಾಧನೆಯಿಂದ ಬೆದರಿದ ಮಾಲ್ಡಿವ್ಸ್‌ 10.1 ಓವರ್‌ಗಳಲ್ಲಿ ಪತನ ಕಂಡಿತು. ಕರುಣಾ ಭಂಡಾರಿ 4 ರನ್‌ಗಳಿಗೆ 2 ವಿಕೆಟ್ ಪಡೆದರು. ಉಳಿದ ಇಬ್ಬರು ಆಟಗಾರ್ತಿಯರು ರನ್ ಔಟ್ ಆದರು.

ಮಾಲ್ಡಿವ್ಸ್ ತಂಡದ 8 ಮಂದಿ ಬ್ಯಾಟ್ಸ್‌ವುಮನ್ ಖಾತೆ ತೆರೆಯದೇ ವಾಪಸಾದರೆ ಇಬ್ಬರು ಮಾತ್ರ ರನ್ ಗಳಿಸಿದರು.

ಅತ್ಯಂತ ಸುಲಭ ಗುರಿ ಬೆನ್ನತ್ತಿದ ನೇಪಾಳದ ಕಾಜಲ್ ಶ್ರೇಷ್ಠ ಅವರು 13 ರನ್‌ ಗಳಿಸಿದರು. 4 ಇತರೆ ರನ್‌ಗಳು (2 ವೈಡ್, 1 ಲೆಗ್‌ಬೈ, 1 ನೋಬಾಲ್) ತಂಡದ ಜಯವನ್ನು ಇನ್ನಷ್ಟು ಸುಲಭಗೊಳಿಸಿದವು.

ಇದು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಎರಡನೇ ಅತಿ ವೇಗದ ಗೆಲುವು. ಇದೇ ವರ್ಷದ ಜುಲೈನಲ್ಲಿ ರುವಾಂಡ ತಂಡ ಮಾಲಿ ವಿರುದ್ಧ 4 ಎಸೆತಗಳಲ್ಲಿ ಜಯಿಸಿತ್ತು. ಇದೇ ವರ್ಷದ ಜನವರಿಯಲ್ಲಿ ಚೀನಾ ಎದುರಿನ ಪಂದ್ಯದಲ್ಲಿ 3 ರನ್‌ ನೀಡಿದ 6 ವಿಕೆಟ್ ಉರುಳಿಸಿದ್ದ ಮಲೇಷ್ಯಾದ ಮಾಸ್ ಎಲಿಸಾ ದಾಖಲೆ ಬರೆದಿದ್ದರು.

ಸೋಮವಾರ ಪಂದ್ಯದ ನಂತರ ಟ್ವೀಟ್ ಮಾಡಿರುವ ಕ್ರಿಕೆಟ್ ನೇಪಾಳ ‘ನಮ್ಮ ತಂಡದ ಅಂಜಲಿ, ಮಹಿಳೆಯರ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ದಾಖಲೆಯ ಸಾಧನೆ ಮಾಡಿದ್ದಾರೆ. ಇದು ಚುಟುಕು ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲಿ ಆಟಗಾರ್ತಿಯೊಬ್ಬರ ಉತ್ತಮ ಸಾಧನೆಯೂ ಆಗಿದೆ’ ಎಂದು ಹೇಳಿದೆ. 

ಸಂಕ್ಷಿಪ್ತ ಸ್ಕೋರು: ಮಾಲ್ಡಿವ್ಸ್‌: 10.1 ಓವರ್‌ಗಳಲ್ಲಿ 16 (ಅಂಜಲಿ ಚಂದ 0ಗೆ6, ಕರುಣಾ ಭಂಡಾರಿ 4ಕ್ಕೆ2); ನೇಪಾಳ: 0.5 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 17 (ಕಾಜಲ್ ಶ್ರೇಷ್ಠ 13). ಫಲಿತಾಂಶ: ನೇಪಾಳಕ್ಕೆ 10 ವಿಕೆಟ್‌ಗಳ ಜಯ.

ಇದನ್ನೂ ಓದಿ: ಹ್ಯಾಟ್ರಿಕ್‌ ಸಹಿತ ವಿಶ್ವದಾಖಲೆಯ ಬೌಲಿಂಗ್: ದೀಪಕ್ ದಾಳಿಗೆ ದಂಗಾದ ಬಾಂಗ್ಲಾದೇಶ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು