ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ವಿಶ್ವಕಪ್‌ ಸಾಧನೆಯ ಹಿಂದಿನ ಕಥೆ...

Last Updated 25 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಇಂಗ್ಲೆಂಡ್‌ನಲ್ಲಿ ಅಂಗವಿಕಲರ ಚೊಚ್ಚಲ ಟಿ–20 ವಿಶ್ವಕಪ್‌ ಟೂರ್ನಿ ಆಯೋಜನೆಯಾಗಿದೆ ಎಂಬ ವಿಷಯ ಗೊತ್ತಾಗುತ್ತಲೇ ನಮ್ಮ ಭಾರತದ ಆಟಗಾರರಿಗೆ ಪುಳಕವಾಗಿತ್ತು. ವಿಶ್ವ ವೇದಿಕೆಯಲ್ಲಿ ನಮ್ಮ ಅಂಗವಿಕಲ ಕ್ರಿಕೆಟಿಗರಿಗೆ ಸಾಮರ್ಥ್ಯ ತೋರಿಸುವ ಅತ್ಯುತ್ತಮ ಅವಕಾಶ ಸಿಕ್ಕಿತ್ತು. ಆದ್ದರಿಂದ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಕಠಿಣ ಅಭ್ಯಾಸ ಮಾಡಿದ್ದರು. ಇದರಿಂದ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಯಿತು.

ಈ ಟ್ರೋಫಿ ಗೆಲುವಿನ ಹಿಂದಿದ್ದ ತಯಾರಿಯೇ ನಮಗೆ ಅರ್ಧ ಯಶಸ್ಸು ತಂದುಕೊಟ್ಟಿತ್ತು. ಆರಂಭದ ಹಂತದಲ್ಲಿ 500 ಆಟಗಾರರಿದ್ದ ತರಬೇತಿ ಶಿಬಿರವನ್ನು ಹಂತಹಂತವಾಗಿ ಕಡಿಮೆ ಮಾಡುತ್ತ, ಸಮರ್ಥ ಆಟಗಾರರನ್ನು ಆಯ್ಕೆ ಮಾಡಬೇಕಾದ ಸವಾಲು ನಮ್ಮ ಮುಂದಿತ್ತು.

ಹುಬ್ಬಳ್ಳಿಯಲ್ಲಿ ನಡೆದ ಮೊದಲ ತರಬೇತಿ ಶಿಬಿರಕ್ಕೆ ಬರೋಡ, ಮುಂಬೈ. ಜಮ್ಮು ಮತ್ತು ಕಾಶ್ಮೀರ ಹೀಗೆ ಬೇರೆ ಬೇರೆ ಕಡೆಯಿಂದ ಸಾಕಷ್ಟು ಆಟಗಾರರು ಬಂದಿದ್ದರು. ನಿತ್ಯ ತರಬೇತಿ ನೀಡಿ, ಅವರಲ್ಲಿಯೇ ತಂಡಗಳನ್ನಾಗಿ ಮಾಡಿ ಪಂದ್ಯಗಳನ್ನು ಆಡಿಸಿದೆವು. ಮ್ಯಾಟ್‌ ವಿಕೆಟ್‌ ಮೇಲೆ ಪಂದ್ಯಗಳನ್ನು ನಡೆಸಿ ವೃತ್ತಿಪರತೆಗೆ ಒತ್ತುಕೊಟ್ಟೆವು. ಹಂತಹಂತವಾಗಿ ಆಟಗಾರರನ್ನು ಕಡಿಮೆ ಮಾಡುತ್ತ ಹೋದೆವು.

ಮುಂಬೈ ಕ್ರಿಕೆಟ್‌ ತಂಡದ ಕೋಚ್‌ ಆಗಿದ್ದ ಸುಲಕ್ಷಣ್‌ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಮುಂಬೈ ಹತ್ತಿರದ ಬದ್ಲಾಪುರ ಮತ್ತು ನಾಗಪುರ ಸಮೀಪದ ಶಿಗಾವ್‌ನಲ್ಲಿ ತರಬೇತಿ ನೀಡಿ ಅಂತಿಮ ತಂಡವನ್ನು ಆಯ್ಕೆ ಮಾಡಲಾಯಿತು. ಕಡಿಮೆ ಓವರ್‌ಗಳಲ್ಲಿ ಹೆಚ್ಚು ರನ್‌ ಗಳಿಸುವ ಗುರಿ ನೀಡಿ ಅಭ್ಯಾಸ ಮಾಡಿಸಲಾಯಿತು.

ಇದರಿಂದ ವಿಶ್ವಕಪ್‌ ಟೂರ್ನಿಯ ಪಂದ್ಯಗಳಲ್ಲಿ ಸೋಲಿನ ಸನಿಹವಿದ್ದರೂ ಅದನ್ನು ಗೆಲುವಾಗಿ ಪರಿವರ್ತಿಸುವ ಕೌಶಲವನ್ನು ನಮ್ಮ ಆಟಗಾರರು ಪ್ರದರ್ಶಿಸಿದರು. ನಮ್ಮ ತಂಡಕ್ಕೆ ಸರ್ಕಾರ ನಯಾ ಪೈಸೆ ನೆರವು ನೀಡದಿದ್ದರೂ, ದಾನಿಗಳು ಕೈಬಿಡಲಿಲ್ಲ. ಅವರ ನೆರವಿನಿಂದ ಟೂರ್ನಿ ಆರಂಭಕ್ಕೂ ಮೂರ್ನಾಲ್ಕು ದಿನಗಳ ಮೊದಲು ಅಲ್ಲಿಗೆ ಹೋಗಿ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡೆವು. ಬೇರೆ, ಬೇರೆ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನಾಡಿ ಪಿಚ್‌ಗಳ ಮರ್ಮ ಅರಿತೆವು.

ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್‌, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ತಂಡಗಳೆಲ್ಲವೂ ಬಲಿಷ್ಠವಾಗಿದ್ದವು. ಆದ್ದರಿಂದ ಪ್ರತಿ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡಬೇಕಾದ ಜವಾಬ್ದಾರಿ ನಮ್ಮವರ ಮೇಲೆ ಇತ್ತು.

ಇಂಗ್ಲೆಂಡ್‌ಗೆ ತೆರಳಿದ ಆರಂಭದಲ್ಲಿ ಆತಿಥೇಯರ ವಿರುದ್ಧ ಒಂದು ಅಭ್ಯಾಸ ಪಂದ್ಯವಾಡಿ ಗೆಲುವು ಪಡೆದೆವು. ಇದರಿಂದ ಲೀಗ್‌ ಮತ್ತು ಫೈನಲ್‌ ಎರಡೂ ಪಂದ್ಯಗಳಲ್ಲಿ ಅವರನ್ನು ಮಣಿಸಲು ನಮಗೆ ಸಾಧ್ಯವಾಯಿತು. ಅಲ್ಲಿನ ಆಟಗಾರರು ಅಂಗವಿಕಲರು ಎಂಬುದು ಮೇಲ್ನೋಟಕ್ಕೆ ಗೊತ್ತೇ ಆಗುತ್ತಿರಲಿಲ್ಲ; ತಂತ್ರಜ್ಞಾನ ಬಳಸಿಕೊಂಡು ಬ್ಲೇಡ್‌ಗಳನ್ನು ಕಾಲಿಗೆ ಕಟ್ಟಿಕೊಂಡಿದ್ದರು. ಇದರಿಂದ ಇಂಗ್ಲೆಂಡ್‌ ತಂಡದವರ ಫೀಲ್ಡಿಂಗ್‌ ಚುರುಕಾಗಿತ್ತು. ಬಾಂಬ್‌ ದಾಳಿಯಲ್ಲಿ ಹಾಗೂ ಅಪಘಾತದಲ್ಲಿ ಕಾಲು ಕಳೆದುಕೊಂಡವರು ಅಫಘಾನಿಸ್ತಾನ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಭಾರತ ತಂಡ ಟೂರ್ನಿಯಲ್ಲಿ ಅಜೇಯವಾಗಿ ಟ್ರೋಫಿ ಜಯಿಸಿದ್ದು ವಿಶೇಷ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಗೆಲುವಂತೂ ಅವಿಸ್ಮರಣೀಯ. ಏಕೆಂದರೆ, ಪಾಕ್‌ ವಿರುದ್ಧ ನಾವು ಪಂದ್ಯವಾಡುತ್ತಿದ್ದಾಗ ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡುವ ಕುರಿತು ಜೋರು ಚರ್ಚೆ ನಡೆಯುತ್ತಿತ್ತು. ನಮ್ಮ ತಂಡದ ಪ್ರಮುಖ ಆಟಗಾರ ಜಮ್ಮು ಮತ್ತು ಕಾಶ್ಮೀರದ ವಾಸೀಮ್‌ ಇಕ್ಬಾಲ್‌ ಖಾನ್‌ ಆ ಪಂದ್ಯದಲ್ಲಿ 67 ರನ್‌ ಗಳಿಸಿದ್ದರು!

ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸುವುದು ಕಷ್ಟವೇ ಆಗಲಿಲ್ಲ. ಮೊದಲ ಹಂತದ ತರಬೇತಿಯಿಂದ ವೃತ್ತಿಪರತೆಗೆ ಒತ್ತುಕೊಟ್ಟು, ಯಾವುದೇ ಆಮಿಷಕ್ಕೆ ಒಳಗಾಗದೆ ಸಮರ್ಥ ಆಟಗಾರರನ್ನು ಆಯ್ಕೆ ಮಾಡಿದ್ದಕ್ಕೆ ವಿಶ್ವಕಪ್‌ ಜಯಿಸಲು ಸಾಧ್ಯವಾಯಿತು. ಇದು ಮುಂದಿನ ಮತ್ತಷ್ಟು ವಿಶ್ವ ಟೂರ್ನಿಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಹಾಗೂ ಭಾರತದಲ್ಲಿ ಅಂಗವಿಕಲರ ಕ್ರಿಕೆಟ್‌ ಬೆಳೆಯಲು ಪ್ರೇರಣೆಯೂ ಆಗಿದೆ.

ಟ್ರೋಫಿ ಗೆದ್ದ ಸುದ್ದಿ ಗೊತ್ತಾಗುತ್ತಿದ್ದಂತೆ ಇಂಗ್ಲೆಂಡ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು ನಮ್ಮ ತಂಡವನ್ನು ಕರೆದು ಗೌರವಿಸಿದರು. ಇದಕ್ಕಿಂತ ದೊಡ್ಡ ಹೆಮ್ಮೆ ಇನ್ನೇನು ಬೇಕು? ಇದೆಲ್ಲವೂ ಟ್ರೋಫಿ ಗೆದ್ದ ನಮ್ಮ ಸಂಭ್ರಮವನ್ನು ಇಮ್ಮಡಿಸಿತ್ತು. ಚೊಚ್ಚಲ ಟೂರ್ನಿ ಗೆದ್ದ ತಂಡದಲ್ಲಿ ಕರ್ನಾಟಕದ ನರೇಂದ್ರ ಮಂಗೋರೆ ಮತ್ತು ಬಾಗೇಪಲ್ಲಿಯ ಜಿತೇಂದ್ರ ವಡ್ಡಿ ತಂಡದಲ್ಲಿದ್ದರು.ಇದರಿಂದ ನನ್ನ ಖುಷಿ ಇಮ್ಮಡಿಯಾಯಿತು.

ನಿರೂಪಣೆ: ಪ್ರಮೋದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT