ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ವಿಶ್ಲೇಷಣೆ: ಸ್ಪಿನ್ ಭೂಮಿಯಲ್ಲಿ ಸ್ಪಿನ್ನರ್‌ಗಳಿಗೆ ಲಭಿಸದ ವಿಕೆಟ್

Last Updated 25 ನವೆಂಬರ್ 2019, 1:56 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ದೇಶದ ಕ್ರಿಕೆಟ್ ತಂಡವೂ ಭಾರತಕ್ಕೆ ಬರುವ ಮುನ್ನ ಇಲ್ಲಿಯ ಸ್ಪಿನ್‌ ಬೌಲರ್‌ಗಳನ್ನು ಎದುರಿಸುವುದು ಹೇಗೆ? ಎಂಬ ಪ್ರಶ್ನೆಯೊಂದಿಗೆ ಬರುತ್ತಾರೆ. ಸ್ಪಿನ್ನರ್‌ಗಳ ಮೋಡಿಯಿಂದಲೇ ಭಾರತ ತಂಡವು ಗೆದ್ದ ಪಂದ್ಯಗಳು ಬಹಳಷ್ಟಿವೆ.

ಆದರೆ, ಇದೇ ಮೊದಲ ಬಾರಿಗೆ ಭಾರತದ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್‌ಗಳ ಕೈಚಳಕಕ್ಕೆ ವಿಕೆಟ್ ಒಲಿಯಲಿಲ್ಲ. ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಭಾನುವಾರ ಮುಕ್ತಾಯವಾದ ಬಾಂಗ್ಲಾದೇಶ ಎದುರಿನ ಟೆಸ್ಟ್ ಪಂದ್ಯದ ಎರಡೂ ಇನೀಂಗ್ಸ್‌ಗಳಲ್ಲಿ ಭಾರತದ ಮೂವರು ಮಧ್ಯಮವೇಗಿಗಳದ್ದೇ ಪಾರುಪತ್ಯ. ಒಟ್ಟು 19 ವಿಕೆಟ್‌ಗಳನ್ನು ಈ ಮೂವರು ಹಂಚಿಕೊಂಡರು.

ತಂಡದಲ್ಲಿದ್ದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಮತ್ತು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಬರಿಗೈಲಿ ಮರಳಿದರು. ದೇಶದಲ್ಲಿ ನಡೆದ ಪ್ರಪ್ರಥಮ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ವಿಕೆಟ್ ಸಾಧನೆ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಇದು ಚೆಂಡಿನ ಪರಿಣಾಮವೇ? ಸ್ಪಿನ್ ಬೌಲಿಂಗ್‌ಗೆ ಮಹತ್ವ ಕಡಿಮೆಯಾಗುತ್ತಿದೆಯೇ? ಎಂಬ ಪ್ರಶ್ನೆಗಳು ಈಗ ಸುಳಿದಾಡುತ್ತಿವೆ.

ಈ ಕುರಿತು ಹಿರಿಯ ಕ್ರಿಕೆಟಿಗ, ಎಡಗೈ ಸ್ಪಿನ್ನರ್ ಸುನಿಲ್ ಜೋಶಿ, ‘ಇದು ಸ್ಪಿನ್‌ ಕಲೆಗೆ ಮಾರಕ ಎಂದು ನನಗನಿಸುವುದಿಲ್ಲ. ಇಂದೋರ್‌ನಲ್ಲಿ ನಡೆದಿದ್ದ ಮೊದಲ ಪಂದ್ಯ ಮತ್ತು ಅದಕ್ಕೂ ಮುನ್ನ ದ.ಆಫ್ರಿಕಾ ಸರಣಿಯಲ್ಲಿ ಸ್ಪಿನ್ನರ್‌ಗಳು ಉತ್ತಮವಾಗಿ ಆಡಿದ್ದರು. ಈ ಪಂದ್ಯದ ಗೆಲುವಿನಲ್ಲಿ ಮಧ್ಯಮವೇಗಿಗಳ ಪಾತ್ರ ದೊಡ್ಡದು. ನಮ್ಮ ತಂಡದಲ್ಲಿ ಉತ್ತಮ ಮಧ್ಯಮವೇಗಿಗಳು ಇದ್ದಾರೆ. ಅವರು ಪಂದ್ಯ ಗೆಲ್ಲಿಸಿಕೊಡುವ ಸಮರ್ಥರಾಗಿದ್ದಾರೆ. ಅವರ ಸ್ವಿಂಗ್ ಮತ್ತು ಶಿಸ್ತಿನ ದಾಳಿಯನ್ನು ತಾಳ್ಮೆಯಿಂದ ಆಡುವಲ್ಲಿ ಎದುರಾಳಿಗಳು ಸಫಲರಾಗಲಿಲ್ಲ’ ಎಂದರು.

‘ಬಾಂಗ್ಲಾ ತಂಡದ ವೇಗಿಗಳು ಕೂಡ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಪಿಂಕ್ ಬಾಲ್‌ ಸ್ಪಿನ್ನರ್‌ಗಳಿಗೆ ಸೂಕ್ತವಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಇದು ಆರಂಭವಷ್ಟೇ. ಸ್ವಲ್ಪ ಸ್ವಿಂಗ್ ಜಾಸ್ತಿಯಾಗುತ್ತದೆ. ಆದರೆ, ದಿನದಾಟ ಹೆಚ್ಚು ನಡೆದಾಗ ಮಾತ್ರ ಅಂದಾಜು ಮಾಡಲು ಸಾಧ್ಯ’ ಎಂದರು.

ಜೋಶಿಯವರು ಭಾರತ ತಂಡದ ಪರ 15 ಟೆಸ್ಟ್‌ ಪಂದ್ಯಗಳನ್ನು ಆಡಿ 41 ವಿಕೆಟ್ ಗಳಿಸಿದ್ದಾರೆ. 2017ರಲ್ಲಿ ಅವರು ಬಾಂಗ್ಲಾ ತಂಡದ ಸ್ಪಿನ್ ಬೌಲಿಂಗ್ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT