ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರರಾಜ್ಯದಲ್ಲಿ ಸನ್ಮಾನ, ರಾಜ್ಯದಲ್ಲಿ ಅವಮಾನ!

ಅಂಗವಿಕಲರ ಕ್ರಿಕೆಟ್‌ ವಿಶ್ವಕಪ್‌ ವಿಜೇತರು
Last Updated 19 ಅಕ್ಟೋಬರ್ 2019, 16:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ತಿಂಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ಅಂಗವಿಕಲರ ಚೊಚ್ಚಲ ವಿಶ್ವಕಪ್‌ ಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಭಾರತ ತಂಡದ ಆಟಗಾರರಿಗೆ ಅನೇಕ ಕಡೆ ಸನ್ಮಾನಗಳು ನಡೆದಿವೆ. ಆದರೆ, ತಂಡದಲ್ಲಿದ್ದ ಮೂವರು ಕನ್ನಡಿಗರಿಗೆ ರಾಜ್ಯ ಸರ್ಕಾರ ಇದುವರೆಗೆ ಕನಿಷ್ಠ ಅಭಿನಂದಿಸುವ ಕೆಲಸವನ್ನೂ ಮಾಡಿಲ್ಲ.

ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಜಿಂಬಾಬ್ವೆ ಮತ್ತು ಪಾಕಿಸ್ತಾನ ತಂಡಗಳು ಭಾಗವಹಿಸಿದ್ದವು. ಭಾರತ ತಂಡ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವನ್ನು ಮಣಿಸಿತ್ತು. ಭಾರತ ತಂಡದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ನರೇಂದ್ರ ಮಂಗೋರೆ ಮತ್ತುಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ಜಿತೇಂದ್ರ ವಡ್ಡಿ ಇದ್ದರು. ಹುಬ್ಬಳ್ಳಿಯ ಶಿವಾನಂದ ಗುಂಜಾಳ ಅವರು ತಂಡಕ್ಕೆ ಲಾಜಿಸ್ಟಿಕ್‌ ಮ್ಯಾನೇಜರ್‌ ಆಗಿದ್ದರು.

ವಿಶ್ವಕಪ್‌ ಜಯಿಸಿದ ಬಳಿಕ ಇಂಗ್ಲೆಂಡ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು ಆಟಗಾರರನ್ನು ಕರೆಯಿಸಿ ಅಭಿನಂದಿಸಿದ್ದರು.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಂಡವನ್ನು ಸನ್ಮಾನಿಸಿದ್ದರು. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿ ಆಟಗಾರನಿಗೆ ತಲಾ ₹3 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.

ದೆಹಲಿ, ಗುಜರಾತ್‌, ಪಂಜಾಬ್‌ ಮತ್ತು ಮಹಾರಾಷ್ಟ್ರ ರಾಜ್ಯಗಳು ತಂಡದಲ್ಲಿದ್ದ ತಮ್ಮ ಆಟಗಾರರಿಗೆ ಬಹುಮಾನ ಘೋಷಿಸಿವೆ. ಆದರೆ, ಕರ್ನಾಟಕದಲ್ಲಿ ಇವ್ಯಾವು ನಡೆದಿಲ್ಲ. ಇದರಿಂದ ಆಟಗಾರರು ‘ನಮ್ಮ ಸಾಧನೆಗೆ ಬೆಲೆ ಇಲ್ಲವೇ. ಬಹುಮಾನ ನೀಡದಿದ್ದರೂ; ಕನಿಷ್ಠ ಅಭಿನಂದಿಸುವ ಕೆಲಸವನ್ನಾದರೂ ಮಾಡಬೇಕಿತ್ತು’ ಎಂದಿದ್ದಾರೆ.

‘ವಿಶ್ವಕಪ್‌ ಗೆದ್ದ ತಂಡವನ್ನು ಕೇಂದ್ರ ಸರ್ಕಾರ ಸನ್ಮಾನಿಸಿದೆ. ಆಯಾ ರಾಜ್ಯಗಳು ತಮ್ಮ ಆಟಗಾರರಿಗೆ ಬಹುಮಾನ ನೀಡಿವೆ. ನೌಕರಿ ನೀಡುವುದಾಗಿಯೂ ಭರವಸೆ ಕೊಟ್ಟಿವೆ. ಆದರೆ, ರಾಜ್ಯದ ಆಟಗಾರರನ್ನು ಯಾರೂ ಕೇಳುತ್ತಿಲ್ಲ. ಸ್ಥಳೀಯ ಆಡಳಿತವೂ ಗಮನ ಹರಿಸುತ್ತಿಲ್ಲ’ ಎಂದು ನರೇಂದ್ರ ಬೇಸರ ವ್ಯಕ್ತಪಡಿಸಿದರು.

‘ಕ್ರೀಡೆಯಲ್ಲಿ ಸಾಧನೆ ಮಾಡಿದ ಹೊರ ರಾಜ್ಯಗಳ ಆಟಗಾರರಿಗೆ ಕರ್ನಾಟಕ ಸರ್ಕಾರ ಇಲ್ಲಿಗೆ ಕರೆಯಿಸಿ ಬಹುಮಾನ ನೀಡುತ್ತದೆ. ಆದರೆ, ತಮ್ಮ ರಾಜ್ಯದ ಸಾಧಕ ಕ್ರೀಡಾಪಟುಗಳನ್ನೇ ಮರೆತಿದೆ’ ಎಂದು ಜಿತೇಂದ್ರ ನೋವು ತೋಡಿಕೊಂಡಿದ್ದಾರೆ.

ಲಾಜಿಸ್ಟಿಕ್‌ ಮ್ಯಾನೇಜರ್‌ ಶಿವಾನಂದ ಗುಂಜಾಳ, ‘ಭಾರತದಲ್ಲಿ ಅಂಗವಿಕಲರ ಕ್ರಿಕೆಟ್‌ ಈಗಷ್ಟೇ ಬೆಳೆಯುತ್ತಿದೆ. ವಿಶ್ವಕಪ್‌ ಗೆದ್ದಾಗ ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ಸಿಕ್ಕಿದ್ದರೆ ಇನ್ನೂ ವೇಗವಾಗಿ ಬೆಳೆಯುತ್ತಿತ್ತು. ಹೊಸ ಅಂಗವಿಕಲ ಆಟಗಾರರು ಕ್ರಿಕೆಟ್‌ ಆಡಲು ಮುಂದೆ ಬರುತ್ತಿದ್ದರು.

ಸರ್ಕಾರದ ನೆರವು ಸಾಧಕರಿಗೆ ಸ್ಫೂರ್ತಿಯಾಗುತ್ತಿತ್ತು. ಹೀಗೆ ನಿರ್ಲಕ್ಷ್ಯ ಮಾಡಿದರೆ ಕರ್ನಾಟಕದಲ್ಲಿ ಅಂಗವಿಕಲರ ಕ್ರಿಕೆಟ್‌ ಬೆಳೆಯುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

**
ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದ ಆಟಗಾರರಿಗೆ ಆಯಾ ರಾಜ್ಯಗಳು ಬಹುಮಾನ ಮೊತ್ತ ಘೋಷಿಸಿವೆ. ರಾಜ್ಯದಲ್ಲಿಯೂ ಈ ಕೆಲಸ ಆಗಬೇಕಿತ್ತು.
–ನರೇಂದ್ರ ಮಂಗೋರೆ, ಭಾರತ ಅಂಗವಿಕಲರ ತಂಡದ ಕ್ರಿಕೆಟಿಗ

**

ಬಹುಮಾನ ಕೊಡಲಿ, ಬಿಡಲಿ; ಅದು ಬೇರೆ ವಿಷಯ. ತಮ್ಮ ರಾಜ್ಯದ ಆಟಗಾರರ ಸಾಧನೆ ಗೊತ್ತಾದ ನಂತರವಾದರೂ ಕ್ರೀಡಾ ಇಲಾಖೆ ಆಟಗಾರರನ್ನು ಅಭಿನಂದಿಸಬೇಕಿತ್ತು.
–ಜಿತೇಂದ್ರ ವಡ್ಡಿ, ಭಾರತ ತಂಡದಲ್ಲಿದ್ದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT