ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೆಡಿ ನಿಯಮ ತಂತ್ರಾಂಶಕ್ಕೆ ಹೊಸ ರೂಪ

ಪರಿಣಾಮಕಾರಿ ತಂತ್ರಾಂಶ ಸಿದ್ಧಗೊಳಿಸಿದ ಅಂಪೈರ್ ಕನ್ನಡಿಗ ಕೇಶವ್ ಕೊಲ್ಲೆ
Last Updated 13 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ದೇಶಿ ಕ್ರಿಕೆಟ್ ಪಂದ್ಯಗಳಲ್ಲಿ ಮಳೆ ಬಂದಾಗ ಗುರಿ ನಿಗದಿಪಡಿಸಲು ಬಳಸಲಾಗುವ ವಿ.ಜಯದೇವನ್ ನಿಯಮದ ಲೆಕ್ಕಾಚಾರವನ್ನು ಈಗ ಮತ್ತಷ್ಟು ಸರಳಗೊಳಿಸಲಾಗಿದೆ.ಅದಕ್ಕಾಗಿ ಒಂದು ನೂತನ ಮತ್ತು ಬಳಕೆದಾರಸ್ನೇಹಿಯಾದ ತಂತ್ರಾಂಶವನ್ನು ಬೆಂಳೂರಿನ ಅಂಪೈರ್ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಕೇಶವ ಕೊಲ್ಲೆ ಸಿದ್ಧಪಡಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಓವರ್ ಮತ್ತು ರನ್‌ಗಳ ಕಡಿತ, ಗುರಿ ನಿಗದಿಗೆ ಡಕ್ವರ್ಥ್–ಲೂಯಿಸ್ (ಡಿಎಲ್‌ಎಸ್) ನಿಯಮವನ್ನು ಪಾಲಿಸಲಾಗು ತ್ತದೆ. ಆದರೆ ದೇಶಿ ಕ್ರಿಕೆಟ್‌ನಲ್ಲಿ ಕಳೆದ 13 ವರ್ಷಗಳಿಂದ ವಿಜೆಡಿ (ವಿ.ಜಯದೇವನ್) ನಿಯಮವನ್ನು ಬಳಕೆ ಮಾಡಲಾಗುತ್ತದೆ.

ಕೇರಳದ ಜಯದೇವನ್ ಅವರು ಫೋರ್ಟರನ್ ಪ್ರೋಗ್ರಾಂನಲ್ಲಿ ಈ ತಂತ್ರಾಂಶವನ್ನು ಸಿದ್ಧಪಡಿಸಿದ್ದರು. ಇದು ಹಳೆಯ ಮಾದರಿಯ ಡಾಟಾ ಆಪರೇಟಿಂಗ್ ಸಿಸ್ಟಂ (ಡಾಸ್)ಆಧಾರದ ಲ್ಲಿತ್ತು. ಬಳಕೆ ಮಾಡಲು ತುಸು ಕ್ಲಿಷ್ಟ ವಾಗಿತ್ತು. ಇದೀಗ ಕೇಶವ್ ಕೊಲ್ಲೆ ಅವರು ವಿಂಡೋಸ್ ಆಧಾರದಲ್ಲಿ ನವೀಕರಣ ಮಾಡಿದ್ದಾರೆ.

‘ಲೆಕ್ಕಾಚಾರದ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಈ ಮೊದಲು ಇದ್ದ ಡಾಸ್‌ ಆಧಾರದ ತಂತ್ರಾಂಶಕ್ಕಿಂತ ವಿಂಡೋಸ್‌ ತಂತ್ರಾಂಶ ಬಳಕೆ ಸುಲಭವಾಗಲಿದೆ. ಡಾಸ್ ತಂತ್ರಾಂಶ ಬಳಕೆಗೆ ವಿಶೇಷ ತರಬೇತಿ ನೀಡಬೇಕಾಗುತ್ತಿತ್ತು. ಈಗ ಹಾಗಲ್ಲ. ಇದನ್ನು ಎಲ್ಲರೂ ಬಳಸಲು ಅನುಕೂಲ ಇದೆ. ಅತ್ಯಂತ ಸರಳ ಕಾರ್ಯವಿಧಾನ ಇದರಲ್ಲಿದೆ. ಸುಂದರವಾದ ವಿನ್ಯಾಸವೂ ಇದಕ್ಕಿದೆ’ ಎಂದು ಕೇಶವ ಹೇಳುತ್ತಾರೆ.

ವೃತ್ತಿಯಿಂದ ಸಾಫ್ಟ್‌ವೇರ್ ಡೆವಲ್‌ಪರ್ ಆಗಿದ್ದ ಕೇಶವ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು. ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮಾಡಿದ್ದಾರೆ. 14 ವರ್ಷ ಹನಿವೆಲ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿದ್ದರು. ಕಾಲೇಜು ಮತ್ತು ಕೆಎಸ್‌ಸಿಎ ಡಿವಿಷನ್ ಮಟ್ಟದಲ್ಲಿ ಕ್ರಿಕೆಟ್ ಆಡಿದವರು.

ಬಿಸಿಸಿಐ ಪ್ಯಾನೆಲ್‌ ಅಂಪೈರ್‌ ಆಗಿ ನೇಮಕವಾದ ನಂತರ ನೌಕರಿಗೆ ರಾಜೀನಾಮೆ ಕೊಟ್ಟಿದ್ದರು. ಅಂಪೈರಿಂಗ್ ಜೊತೆಗೆ ಸಾಫ್ಟವೇರ್ ಡೆವಲಪ್‌ಮೆಂಟ್‌ನ ಕನ್ಸಲ್ಟೆನ್ಸಿಯನ್ನೂ ನಿರ್ವಹಿಸುತ್ತಿದ್ದಾರೆ.

‘2007ರಿಂದ ವಿಜೆಡಿ ನಿಯಮವು ದೇಶಿ ಕ್ರಿಕೆಟ್‌ನಲ್ಲಿ ಬಳಕೆಯಾಗುತ್ತಿದೆ. ಸರಳ ಲೆಕ್ಕಾಚಾರದ ಸೂತ್ರವನ್ನು ನಾನು ಸಿದ್ಧಪಡಿಸಿದ್ದೆ. ಆ ಸಮಯದಲ್ಲಿ ಗೊತ್ತಿದ್ದ ಪದ್ದತಿಯಲ್ಲಿಯೇ ತಂತ್ರಾಂಶ ರೂಪಿಸಿದ್ದೆ. ಇದೀಗ ಕೇಶವ ಅವರು ಅದನ್ನು ಮತ್ತಷ್ಟು ಸರಳಗೊಳಿಸಿ ದ್ದಾರೆ. ಬಳಕೆಸ್ನೇಹಿಯಾಗಿದೆ. ಉಳಿದಂತೆ ಬೇರೆ ಬದಲಾವಣೆ ಇಲ್ಲ’ ಎಂದು ವಿ. ಜಯದೇವನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಪದ್ಧತಿ ಬರುವ ಮುನ್ನ ರನ್‌ ರೇಟ್ ಮತ್ತು ಓವರ್‌ಗಳ ಲೆಕ್ಕಾಚಾರದಲ್ಲಿ ಗೆಲುವಿನ ಗುರಿ ನಿಗದಿ ಮಾಡಲಾಗುತ್ತಿತ್ತು. ಅದರಲ್ಲಿ ಕೆಲವು ಲೋಪಗಳಿದ್ದವು. ಆದ್ದರಿಂದ ಜಯದೇವನ್ ಸ್ವಯಂ ಆಸಕ್ತಿಯಿಂದ ಸೂತ್ರ ರೂಪಿಸಿದ್ದರು.

‘ಸ್ವದೇಶದಲ್ಲಿಯೇ ಉತ್ತಮ ವಾದದ್ದು ಸಿಕ್ಕಿದ್ದರಿಂದ ಬಳಸುವತ್ತ ಆಗ ಸುನಿಲ್ ಗಾವಸ್ಕರ್ ಆಸಕ್ತಿ ವಹಿಸಿದ್ದರು. ಅದರಿಂದಾಗಿ ದೇಶಿ ಕ್ರಿಕೆಟ್‌ನಲ್ಲಿ ಬಳಕೆಗೆ ಬಂದಿತ್ತು’ ಎಂದು ಜಯದೇವನ್ ನೆನಪಿಸಿಕೊಳ್ಳುತ್ತಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಡಿಎಲ್‌ಎಸ್‌ ಪದ್ಧತಿಯ ಬಗ್ಗೆ ಮೊದಲಿನಿಂದಲೂ ಕೆಲವು ಆಟಗಾರರಿಂದ ಟೀಕೆಗಳು ವ್ಯಕ್ತವಾಗಿವೆ. ಆದರೆ ದೇಶಿ ಕ್ರಿಕೆಟ್‌ನಲ್ಲಿ ವಿಜೆಡಿ ನಿಯಮದ ಬಗ್ಗೆ ಇದುವರೆಗೂ ಗಂಭೀರ ಟೀಕೆಗಳು ಕೇಳಿಬಂದಿಲ್ಲ. ಇದೀಗ ಹೊಸ ರೂಪದ ತಂತ್ರಾಂಶವು ಗಮನ ಸೆಳೆದರೆ ಮುಂದೊಂದು ದಿನ ಡಿಎಲ್‌ಎಸ್‌ ಪದ್ಧತಿಗೂ ಸೆಡ್ಡು ಹೊಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT