ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಮ್ಯಾಥ್ಯೂಸ್‌, ಧನಂಜಯ ಆಸರೆ; ಪಾಕ್‌ ಹೋರಾಟ

ಮುನ್ನಡೆ ಹಿಗ್ಗಿಸಿದ ಲಂಕಾ
Last Updated 26 ಜುಲೈ 2022, 13:45 IST
ಅಕ್ಷರ ಗಾತ್ರ

ಗಾಲ್: ಪಾಕ್‌ ತಂಡದ ಬಿಗುವಾದ ಬೌಲಿಂಗ್‌ ದಾಳಿಯ ಮುಂದೆ ಎಚ್ಚರಿಕೆಯ ಆಟವಾಡಿದ ಶ್ರೀಲಂಕಾ ತಂಡ ಎರಡನೇ ಕ್ರಿಕೆಟ್ ಟೆಸ್ಟ್‌ ಪಂದ್ಯದಲ್ಲಿ ತನ್ನ ಹಿಡಿತ ಬಿಗಿಗೊಳಿಸಿದೆ.

ಗಾಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನ ಮಂಗಳವಾರದ ಆಟದ ಅಂತ್ಯಕ್ಕೆ ಶ್ರೀಲಂಕಾ, ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 176 ರನ್ ಕಲೆಹಾಕಿದೆ.

ಮೊದಲ ಇನಿಂಗ್ಸ್‌ನಲ್ಲಿ 147 ರನ್‌ ಮುನ್ನಡೆ ಗಳಿಸಿದ್ದ ಆತಿಥೇಯ ತಂಡ ಒಟ್ಟಾರೆ ಮುನ್ನಡೆಯನ್ನು 323 ರನ್‌ಗಳಿಗೆ ಹಿಗ್ಗಿಸಿದೆ. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು, ಈ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ಹೊರಹೊಮ್ಮುವುದು ನಿಚ್ಚಳ ಎನಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ 378 ರನ್‌ ಗಳಿಸಿದ್ದ ಲಂಕಾ, ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. 117 ರನ್‌ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಏಂಜೆಲೊ ಮ್ಯಾಥ್ಯೂಸ್‌ (35 ರನ್, 81 ಎ.) ಅಲ್ಪ ಪ್ರತಿರೋಧ ಒಡ್ಡಿದರು.

ಆದರೆ ಮುರಿಯದ ಆರನೇ ವಿಕೆಟ್‌ಗೆ 59 ರನ್ ಸೇರಿಸಿದ ನಾಯಕ ದಿಮುತ್‌ ಕರುಣರತ್ನೆ (ಬ್ಯಾಟಿಂಗ್‌ 27) ಮತ್ತು ಧನಂಜಯ ಡಿಸಿಲ್ವಾ (ಬ್ಯಾಟಿಂಗ್ 30) ಅವರು ಪಾಕ್‌ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿರುವ ಕರುಣರತ್ನೆ ತಂಡದ ಇನಿಂಗ್ಸ್‌ ಆರಂಭಿಸಲಿಲ್ಲ. ನಾಲ್ಕನೇ ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದ ಅವರು ನೋವನ್ನು ಲೆಕ್ಕಿಸದೆ ಛಲದಿಂದ ಆಡಿದರು.

ಮೆಂಡಿಸ್‌ಗೆ ಐದು ವಿಕೆಟ್‌: ಇದಕ್ಕೂ ಮುನ್ನ 7 ವಿಕೆಟ್‌ಗೆ 191 ರನ್‌ಗಳಿಂದ ಮೂರನೇ ದಿನದಾಟ ಮುಂದುವರಿಸಿದ ಪಾಕ್‌, ಮೊದಲ ಇನಿಂಗ್ಸ್‌ನಲ್ಲಿ 231 ರನ್‌ಗಳಿಗೆ ಆಲೌಟಾಯಿತು. ರಮೇಶ್‌ ಮೆಂಡಿಸ್‌ (47ಕ್ಕೆ 5) ಐದು ವಿಕೆಟ್‌ಗಳ ಸಾಧನೆ ಮಾಡಿದರು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್‌ ಶ್ರೀಲಂಕಾ 378 (103 ಓವರ್). ಪಾಕಿಸ್ತಾನ 231 (88.1 ಓವರ್) ಎರಡನೇ ಇನಿಂಗ್ಸ್‌ ಶ್ರೀಲಂಕಾ 5ಕ್ಕೆ 176 (50 ಓವರ್) ಏಂಜೆಲೊ ಮ್ಯಾಥ್ಯೂಸ್‌ 35, ದಿನೇಶ್‌ ಚಾಂಡಿಮಲ್‌ 21, ದಿಮುತ್‌ ಕರುಣರತ್ನೆ ಬ್ಯಾಟಿಂಗ್‌ 27, ಧನಂಜಯ ಡಿಸಿಲ್ವಾ ಬ್ಯಾಟಿಂಗ್ 30, ನಸೀಮ್‌ ಶಾ 29ಕ್ಕೆ 2, ಮೊಹಮ್ಮದ್‌ ನವಾಜ್ 32ಕ್ಕೆ 1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT