ಗಾಲೆ: ಪ್ರಭಾತ್ ಜಯಸೂರ್ಯ ಮತ್ತು ನಿಶಾನ್ ಪೀರಿಸ್ ಅವರ ಸ್ಪಿನ್ ದಾಳಿಗೆ ಕುಸಿದ ನ್ಯೂಜಿಲೆಂಡ್ ಎರಡನೇ ಟೆಸ್ಟ್‌ನಲ್ಲೂ ಸೋಲಿನ ಹಾದಿಯಲ್ಲಿದೆ. ಫಾಲೊಆನ್‌ಗೆ ಒಳಗಾದ ನ್ಯೂಜಿಲೆಂಡ್ ಎರಡನೇ ಇನಿಂಗ್ಸ್‌ನಲ್ಲೂ ಅರ್ಧದಷ್ಟು ವಿಕೆಟ್‌ಗಳನ್ನು ಕಳೆದುಕೊಂಡು 199 ರನ್ ಗಳಿಸಿದೆ. ಇನಿಂಗ್ಸ್ ಸೋಲು ತಪ್ಪಿಸಲು ಇನ್ನೂ 315 ರನ್ ದೂರವಿದೆ.
ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ 13 ವಿಕೆಟ್‌ಗಳು ಬಿದ್ದವು. ಶ್ರೀಲಂಕಾದ 5 ವಿಕೆಟ್‌ಗೆ 602 ರನ್‌ಗಳಿಗೆ (ಡಿಕ್ಲೇರ್ಡ್) ಉತ್ತರವಾಗಿ ಶುಕ್ರವಾರ 2 ವಿಕೆಟ್‌ಗೆ 20 ರನ್ ಗಳಿಸಿದ್ದ ನ್ಯೂಜಿಲೆಂಡ್ ಶನಿವಾರ ಭೋಜನಕ್ಕೆ ಮೊದಲೇ 88 ರನ್‌ಗಳಿಗೆ ಕುಸಿಯಿತು. ಫಾಲೊ ಆನ್‌ಗೆ ಒಳಗಾದ ಟಿಮ್ ಸೌಥಿ ಬಳಗ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 199 ರನ್ ಗಳಿಸಿದೆ. ಮಂದ ಬೆಳಕು ಮತ್ತು ಮಳೆಯಿಂದ ಬೇಗನೇ ಕೊನೆಗೊಂಡಿತು.
ಟಾಮ್ ಬ್ಲಂಡೆಲ್ (ಔಟಾಗದೇ 47, 50ಎ) ಮತ್ತು ಗ್ಲೆನ್ ಫಿಲಿಪ್ಸ್ (ಔಟಾಗದೇ 32, 41ಎ) ಅವರು ಮುರಿಯದ ಆರನೇ ವಿಕೆಟ್‌ಗೆ 78 ರನ್ ಸೇರಿಸಿ ಮತ್ತೊಂದು ಕುಸಿತವನ್ನು ತತ್ಕಾಲಕ್ಕೆ ಮುಂದೂಡಿದರು. ಶ್ರೀಲಂಕಾ ಈಗ 2–0 ಸರಣಿ ವಿಜಯದ ಹಾದಿಯಲ್ಲಿದೆ.
ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ (42ಕ್ಕೆ6) ಮತ್ತು ಆಫ್ ಸ್ಪಿನ್ನರ್ ನಿಶಾನ್ ಪೀರಿಸ್ (33ಕ್ಕೆ3) ಅವರು ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ಕುಸಿತಕ್ಕೆ ಕಾರಣರಾದರು. ತಂಡ 40 ಓವರುಗಳ ಒಳಗೆ ಆಲೌಟಾಯಿತು. ಮೂವರಷ್ಟೇ ಎರಡಂಕಿ ಮೊತ್ತ ಗಳಿಸಿದ್ದು ಮಿಚೆಲ್ ಸ್ಯಾಂಟ್ನರ್ ಅವರ 29 ರನ್‌ಗಳೇ ಅತ್ಯಧಿಕ ಎನಿಸಿತು.
ಜಯಸೂರ್ಯ ಟೆಸ್ಟ್‌ನಲ್ಲಿ ಐದನೇ ಬಾರಿ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದರು. ಇವುಗಳಲ್ಲಿ ಎಂಟು, ಗಾಲೆಯಲ್ಲೇ ದಾಖಲಾಗಿವೆ. ಆತಿಥೇಯ ತಂಡದ ನಾಯಕ ಧನಂಜಯ ಡಿಸಿಲ್ವ ಸ್ಪಿಪ್‌ನಲ್ಲಿ ಜಾಗೃತರಾಗಿದ್ದು ಸ್ಲಿಪ್‌ನಲ್ಲಿ ಐದು ಕ್ಯಾಚ್‌ಗಳನ್ನು ಪಡೆದರು.
514 ರನ್‌ಗಳಿಂದ ಹಿಂದುಳಿದ ನ್ಯೂಜಿಲೆಂಡ್ ಫಾಲೊಆನ್‌ಗೆ ಒಳಗಾಯಿತು. ಎರಡನೇ ಇನಿಂಗ್ಸ್‌ನಲ್ಲೂ ಪ್ರಮುಖ ಬ್ಯಾಟರ್‌ಗಳು ಸ್ವಲ್ಪ ಪ್ರತಿರೋಧ ತೋರಿಸಿದರು.
ಟಾಮ್ ಲೇಥಮ್ ಎರಡನೇ ಇನಿಂಗ್ಸ್‌ನಲ್ಲಿ ಮೊದಲ ಓವರಿನಲ್ಲೇ ಜಯಸೂರ್ಯ ಅವರಿಗೆ ವಿಕೆಟ್ ನೀಡಿದರು. ಆದರೆ ಡೇವನ್ ಕಾನ್ವೆ (61) ಮತ್ತು ಅನುಭವಿ ಕೇನ್ ವಿಲಿಯಮ್ಸನ್ ಎರಡನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ವೇಳೆ ಸ್ಪಿನ್ನರ್‌ಗಳು ಮತ್ತೆ ಪೆಟ್ಟುಕೊಟ್ಟರು.
ಕಾನ್ವೆ ಅವರು ಧನಂಜಯ ಡಿ‘ಸಿಲ್ವ ಅವರಿಗೆ ವಿಕೆಟ್ ನೀಡಿದರೆ, ವಿಲಿಯಮ್ಸನ್ (46, 58ಎ) ಪೀರಿಸ್ ಬೌಲಿಂಗ್‌ನಲ್ಲಿ ನಿರ್ಗಮಿಸಿದರು. ರಚಿನ್ ರವೀಂದ್ರ (12) ಅವರ ವಿಕೆಟ್ ಪೀರಿಸ್ ಅವರಿಗೆ ಚೊಚ್ಚಲ ಟೆಸ್ಟ್‌ನಲ್ಲಿ ಆರನೇಯದು ಎನಿಸಿತು.
ಸ್ಕೋರುಗಳು:
ಮೊದಲ ಇನಿಂಗ್ಸ್: ಶ್ರೀಲಂಕಾ: 5 ವಿಕೆಟ್‌ಗೆ 602 ಡಿಕ್ಲೇರ್; ನ್ಯೂಜಿಲೆಂಡ್: 39.5 ಓವರುಗಳಲ್ಲಿ 88 (ಮಿಚೆಲ್ ಸ್ಯಾಂಟ್ನರ್ 29; ನಿಶಾನ್ ಪೀರಿಸ್ 33ಕ್ಕೆ3, ಪ್ರಭಾತ್ ಜಯಸೂರ್ಯ 42ಕ್ಕೆ6), ಎರಡನೇ ಇನಿಂಗ್ಸ್: ನ್ಯೂಜಿಲೆಂಡ್: 41 ಓವರುಗಳಲ್ಲಿ 5 ವಿಕೆಟ್‌ಗೆ 199 (ಡೆವಾನ್ ಕಾನ್ವೆ 61, ಕೇನ್ಸ್ ವಿಲಿಯಮ್ಸನ್ 46, ಟಾಮ್ ಬ್ಲಂಡೆಲ್ ಔಟಾಗದೇ 47, ಗ್ಲೆನ್ ಫಿಲಿಪ್ಸ್ ಔಟಾಗದೇ 32; ನಿಶಾನ್ ಪೀರಿಸ್ 91ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.