ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್‌: ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್‌ ಜಯಭೇರಿ

Last Updated 26 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಕೊಲಂಬೊ: ವೇಗಿಗಳಾದ ಟ್ರೆಂಟ್‌ ಬೌಲ್ಟ್‌ (17ಕ್ಕೆ2) ಮತ್ತು ಟಿಮ್‌ ಸೌಥಿ (15ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ನ್ಯೂಜಿಲೆಂಡ್‌ ತಂಡ ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 65ರನ್‌ಗಳಿಂದ ಜಯಭೇರಿ ಮೊಳಗಿಸಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ 1–1 ಸಮಬಲ ಸಾಧಿಸಿತು.

ಸಾರಾ ಓವಲ್‌ ಮೈದಾನದಲ್ಲಿ ಸೋಮವಾರ 5 ವಿಕೆಟ್‌ಗೆ 382ರನ್‌ಗಳಿಂದ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ ಕೇನ್‌ ವಿಲಿಯಮ್ಸನ್‌ ಸಾರಥ್ಯದ ನ್ಯೂಜಿಲೆಂಡ್‌ 115 ಓವರ್‌ಗಳಲ್ಲಿ 6 ವಿಕೆಟ್‌ಗೆ 431ರನ್‌ ಗಳಿಸಿ ಡಿಕ್ಲೇರ್‌ ಮಾಡಿ ಕೊಂಡಿತು. ವಿಕೆಟ್‌ ಕೀಪರ್‌ ಬಿಜೆ ವಾಟ್ಲಿಂಗ್‌ (105; 226ಎ, 9ಬೌಂ) ಅಜೇಯ ಶತಕ ಸಿಡಿಸಿ ಸಂಭ್ರಮಿಸಿದರು.

ಶ್ರೀಲಂಕಾ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 70.2 ಓವರ್‌ಗಳಲ್ಲಿ 122ರನ್‌ ಗಳಿಸಿ ಹೋರಾಟ ಮುಗಿಸಿತು. ಈ ತಂಡ 75ರನ್‌ಗಳಿಗೆ ಏಳು ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು.

ಡ್ರಾ ಮಾಡಿಕೊಳ್ಳಲು ಲಂಕಾ ತಂಡ ಅಂತಿಮ ದಿನದ ಕೊನೆಯ ಅವಧಿಯಲ್ಲಿ 36 ಓವರ್‌ಗಳನ್ನು ಆಡಬೇಕಿತ್ತು. ಮಂದ ಬೆಳಕಿನ ಕಾರಣ ಆಟವು ಬೇಗನೆ ಸ್ಥಗಿತಗೊಳ್ಳುವ ಸಾಧ್ಯತೆಯೂ ಇತ್ತು. ನಿರೋಷನ್‌ ಡಿಕ್ವೆಲ್ಲಾ (51; 161ಎ, 6ಬೌಂ) ಮತ್ತು ಸುರಂಗ ಲಕ್ಮಲ್‌ (14; 45ಎ, 2ಬೌಂ, 1ಸಿ) ಇದನ್ನು ಗಮನದಲ್ಲಿಟ್ಟುಕೊಂಡು ಆಡಿದರು. ಎಂಟನೇ ವಿಕೆಟ್‌ಗೆ ಈ ಜೋಡಿ 40ರನ್‌ ಸೇರಿಸಿತು. ಅಜಾಜ್‌ ಪಟೇಲ್‌ ಮತ್ತು ವಿಲಿಯಮ್‌ ಸೋಮರ್‌ವಿಲ್‌ ಅವರು ಕ್ರಮವಾಗಿ ಡಿಕ್ವೆಲ್ಲಾ ಮತ್ತು ಲಕ್ಮಲ್‌ ವಿಕೆಟ್‌ ಉರುಳಿಸಿ ಎದುರಾಳಿಗಳ ಡ್ರಾ ಕನಸಿಗೆ ತಣ್ಣೀರು ಸುರಿದರು.

ಸೌಥಿ ಮತ್ತು ಬೌಲ್ಟ್‌ ಅವರು ಟೆಸ್ಟ್‌ನಲ್ಲಿ 250 ವಿಕೆಟ್‌ ಪಡೆದ ಸಾಧನೆಯನ್ನೂ ಈ ಪಂದ್ಯದಲ್ಲಿ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌; ಮೊದಲ ಇನಿಂಗ್ಸ್‌: 115 ಓವರ್‌ಗಳಲ್ಲಿ 6 ವಿಕೆಟ್‌ಗೆ 431 ಡಿಕ್ಲೇರ್‌ (ಬಿಜೆ ವಾಟ್ಲಿಂಗ್‌ ಔಟಾಗದೆ 105, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 83, ಟಿಮ್‌ ಸೌಥಿ ಔಟಾಗದೆ 24; ದಿಲ್ರುವಾನ ಪೆರೇರಾ 114ಕ್ಕೆ3, ಲಾಹಿರು ಕುಮಾರ 115ಕ್ಕೆ1, ಲಸಿತ್‌ ಎಂಬುಲ್ದೆನಿಯಾ 156ಕ್ಕೆ2).

ಶ್ರೀಲಂಕಾ; ಮೊದಲ ಇನಿಂಗ್ಸ್‌: 90.2 ಓವರ್‌ಗಳಲ್ಲಿ 244 ಮತ್ತು 70.2 ಓವರ್‌ಗಳಲ್ಲಿ 122 (ಕುಶಾಲ್‌ ಮೆಂಡಿಸ್‌ 20, ನಿರೋಷನ್‌ ಡಿಕ್ವೆಲ್ಲಾ 51, ದಿಮುತ್‌ ಕರುಣಾರತ್ನೆ 21, ಸುರಂಗ ಲಕ್ಮಲ್‌ 14; ಟ್ರೆಂಟ್‌ ಬೌಲ್ಟ್‌ 17ಕ್ಕೆ2, ಟಿಮ್‌ ಸೌಥಿ 15ಕ್ಕೆ2, ಅಜಾಜ್‌ ಪಟೇಲ್‌ 31ಕ್ಕೆ2, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 8ಕ್ಕೆ1, ವಿಲಿಯಮ್‌ ಸೋಮರ್‌ವಿಲ್‌ 49ಕ್ಕೆ2).

ಫಲಿತಾಂಶ: ನ್ಯೂಜಿಲೆಂಡ್‌ಗೆ ಇನಿಂಗ್ಸ್‌ ಮತ್ತು 65ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT