ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾಕಪ್‌ ಗೆಲುವು ದೇಶದ ಜನರಿಗೆ ಅರ್ಪಣೆ: ಭಾನುಕಾ

Last Updated 12 ಸೆಪ್ಟೆಂಬರ್ 2022, 13:24 IST
ಅಕ್ಷರ ಗಾತ್ರ

ದುಬೈ: ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ವಿಜಯವನ್ನು ಬಿಕ್ಕಟ್ಟು ಎದುರಿಸುತ್ತಿರುವ ದೇಶದ ಜನರಿಗೆ ಅರ್ಪಿಸುವುದಾಗಿ ಶ್ರೀಲಂಕಾ ತಂಡದ ಬ್ಯಾಟರ್ ಭಾನುಕಾ ರಾಜಪಕ್ಸ ಹೇಳಿದ್ದಾರೆ.

ಪುಟ್ಟ ದ್ವೀಪರಾಷ್ಟ್ರವು ಕಳೆದ ಕೆಲ ಸಮಯಗಳಿಂದ ರಾಜಕೀಯ ಬಿಕ್ಕಟ್ಟು ಮತ್ತು ಆರ್ಥಿಕ ಸಂಕಷ್ಟದಿಂದ ನಲುಗಿದೆ.

ಭಾನುವಾರ ನಡೆದ ಏಷ್ಯಾಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 23 ರನ್‌ಗಳಿಂದ ಪರಾಭವಗೊಳಿದ್ದ ಶ್ರೀಲಂಕಾ, ಆರನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡಿತ್ತು. 2014ರ ಬಳಿಕ ಮೊದಲ ಬಾರಿ ಚಾಂಪಿಯನ್ ಆಗಿತ್ತು.

ಪಂದ್ಯದಲ್ಲಿ ಶ್ರೀಲಂಕಾ ಸಂಕಷ್ಟದಲ್ಲಿದ್ದ ವೇಳೆ ಭಾನುಕಾ ಉತ್ತಮವಾಗಿ ಬ್ಯಾಟ್ ಬೀಸಿದ್ದರು. 45 ಎಸೆತಗಳಲ್ಲಿ ಅವರು ಗಳಿಸಿದ 71 ರನ್‌ಗಳು ತಂಡಕ್ಕೆ ಆಸರೆಯಾಗಿದ್ದವು. ಶ್ರೀಲಂಕಾ ಆರು ವಿಕೆಟ್‌ ಕಳೆದುಕೊಂಡು 170 ರನ್‌ ಗಳಿಸಿತ್ತು. ಬಳಿಕ ಪಾಕಿಸ್ತಾನ ತಂಡವನ್ನು 147 ರನ್‌ಗಳಿಗೆ ನಿಯಂತ್ರಿಸಿತ್ತು.

‘ಕೆಲವು ವರ್ಷಗಳ ಹಿಂದೆ ನಮ್ಮ ತಂಡ ಆಕ್ರಮಣಕಾರಿಯಾಗಿತ್ತು. ಒಗ್ಗಟ್ಟಿನೊಂದಿಗೆ ಅಂತಹ ಕ್ಷಣಗಳನ್ನು ಮತ್ತೆ ಸೃಷ್ಟಿಸಲು ನಾವು ಬಯಸಿದ್ದೆವು. ನಾವು ಏನೆಂದು ವಿಶ್ವಕ್ಕೆ ತೋರಿಸುವ ಉದ್ದೇಶವಿತ್ತು‘ ಎಂದು ಭಾನುಕಾ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಟಿ20 ವಿಶ್ವಕಪ್‌ ಟೂರ್ನಿಯವರೆಗೆ ಇದೇ ಲಯವನ್ನು ಮುಂದುವರಿಸುವ ಅಗತ್ಯವಿದೆ. ಸದ್ಯ ದೇಶ ಬಿಕ್ಕಟ್ಟು ಎದುರಿಸುತ್ತಿದೆ. ಶ್ರೀಲಂಕಾದ ಜನತೆಗೆ ಇದು ಸಂಕಷ್ಟದ ಸಮಯ. ಆದರೆ ಈ ಜಯದಿಂದ ಅವರ ಮೊಗದಲ್ಲಿ ಒಂದಷ್ಟು ಸಂತಸ ತಂದ ವಿಶ್ವಾಸ ನಮಗಿದೆ. ಬಹಳ ದಿನಗಳಿಂದ ಜನ ಇದನ್ನು ನಿರೀಕ್ಷಿಸುತ್ತಿದ್ದರು‘ ಎಂದು ಮಂದಹಾಸದೊಂದಿಗೆ ಭಾನುಕಾ ನುಡಿದರು.

‘ನಮ್ಮ ಕ್ರಿಕೆಟಿಗರಲ್ಲಿ ನಂಬಿಕೆ ಇರಲಿ. ಬಹಳಷ್ಟು ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಕ್ರಿಕೆಟಿಗರಾಗಿ ನಾವು ನಮ್ಮ ಬದುಕನ್ನು ಆಸ್ವಾದಿಸಬೇಕು. ಯಾವಾಗಲೂ ಕೆಟ್ಟ ಸುದ್ದಿಗಳನ್ನೇ ಹರಡಬಾರದು‘ ಎಂದು ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT