ಶುಕ್ರವಾರ, ನವೆಂಬರ್ 22, 2019
27 °C

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅಪ್ರತಿಮ ಆಟಗಾರ ಸ್ಟೀವ್ ಸ್ಮಿತ್‌...

Published:
Updated:

ಅಂದು ಆ ಆಟಗಾರ ಎಜ್‌ಬಾಸ್ಟನ್‌ ಅಂಗಳಕ್ಕೆ ಕಾಲಿಟ್ಟಾಗ ಗ್ಯಾಲರಿಗಳಲ್ಲಿ ಕುಳಿತಿದ್ದ ಪ್ರೇಕ್ಷಕರು ಬೂ.. ಎಂದು ಮೂದಲಿಸಿದ್ದರು. ಇಂಗ್ಲೆಂಡ್‌ನ ಹಿರಿಯ ಆಟಗಾರರೆಲ್ಲಾ ವಾಗ್ಬಾಣ ಬಿಟ್ಟು ಆತನ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಲು ಪ್ರಯತ್ನಿಸಿದ್ದರು...

30ರ ಹರೆಯದ ಆ ಬ್ಯಾಟ್ಸ್‌ಮನ್‌ ಅದ್ಯಾವುದಕ್ಕೂ ಜಗ್ಗಲಿಲ್ಲ. ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿ, ಬೈಯ್ದವರಿಂದಲೇ ಭೇಷ್‌ ಎನಿಸಿಕೊಂಡರು. ಹೀಯಾಳಿಸಿದ್ದ ಅಭಿಮಾನಿಗಳಿಂದಲೇ ಚಪ್ಪಾಳೆ ಗಿಟ್ಟಿಸಿ ಖುಷಿಯ ಕಡಲಲ್ಲಿ ತೇಲಿದ್ದರು. ಕಲಾತ್ಮಕ ಆಟದ ಮೂಲಕವೇ ಕ್ರಿಕೆಟ್‌ ಲೋಕದ ಹೃದಯ ಗೆದ್ದ ಆ ತಾರೆ, ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌.

ಒಂದು ವರ್ಷದ ಹಿಂದಿನ ಮಾತು. ಕೇಪ್‌ ಟೌನ್‌ನ ನ್ಯೂಲ್ಯಾಂಡ್ಸ್‌ ಮೈದಾನದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸ್ಮಿತ್‌ ಭಾಗಿಯಾಗಿದ್ದರು. ಆಗ ಆಸ್ಟ್ರೇಲಿಯಾ ತಂಡದ ಸಾರಥ್ಯ ವಹಿಸಿದ್ದ ಅವರನ್ನು ಎಲ್ಲರೂ ವಂಚಕ, ಮೋಸಗಾರ ಎಂದೇ ಜರಿದಿದ್ದರು. 2018ರ ಮಾರ್ಚ್‌ 29ರಂದು ಸಿಡ್ನಿಯಲ್ಲಿ ನಡೆದಿದ್ದ ಸುದ್ದಿಗೋಷ್ಠಿ ಅಭಿಮಾನಿಗಳ ಕ್ಷಮೆಯಾಚಿಸಿದ್ದ ಸ್ಮಿತ್‌, ಮಾಧ್ಯಮದವರ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದರು.

‘ಈ ತಪ್ಪು ನನಗೆ ಒಳ್ಳೆಯ ಪಾಠ ಕಲಿಸಿದೆ. ಈಗ ಕಳೆದುಕೊಂಡಿರುವ ಘನತೆ, ಗೌರವವನ್ನು ಖಂಡಿತಾ ಮರಳಿ ಪಡೆಯುತ್ತೇನೆ’ ಎಂದು ಅವರು ಹೇಳಿದ್ದ ಆ ಮಾತು ಈಗ ಅಕ್ಷರಶಃ ನಿಜವಾಗಿದೆ.

ಮಾಡಿದ ತಪ್ಪಿಗಾಗಿ 12 ತಿಂಗಳ ‘ವನವಾಸ’ ಮುಗಿಸಿ ಬಂದಿರುವ ಸ್ಮಿತ್‌, ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ರನ್‌ ಮಳೆ ಸುರಿಸುತ್ತಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಕುಸಿತದ ಹಾದಿ ಹಿಡಿದಿದ್ದಾಗ ತಂಡಕ್ಕೆ ಆಸರೆಯಾಗಿದ್ದು ಇದೇ ಸ್ಮಿತ್‌. ಬರೋಬ್ಬರಿ 336 ನಿಮಿಷ ಕ್ರೀಸ್‌ನಲ್ಲಿ ಇದ್ದ ಅವರು ಇಂಗ್ಲೆಂಡ್‌ ಬೌಲರ್‌ಗಳನ್ನು ಹೈರಾಣಾಗಿಸಿಬಿಟ್ಟಿದ್ದರು. ಅವರು ಕಟ್ಟಿದ ಆ ಇನಿಂಗ್ಸ್‌ ಬಗ್ಗೆ ಮೆಚ್ಚುಗೆಯ ಮಹಾ‍ಪೂರವೇ ಹರಿದುಬಂದಿತ್ತು. ಎರಡನೇ ಇನಿಂಗ್ಸ್‌ನಲ್ಲೂ ಜಾದೂ ಮಾಡಿದ್ದ ಸ್ಮಿತ್‌ ತಂಡದ ಗೆಲುವಿನ ರೂವಾರಿಯೂ ಆಗಿದ್ದರು.

ಮೊದಲ ಟೆಸ್ಟ್‌ನಲ್ಲಿ ಎರಡು ಶತಕ ಸಿಡಿಸಿದರೂ ಸ್ಮಿತ್ ಸಂತೃಪ್ತರಾಗಿರಲಿಲ್ಲ. ಸಂತಸದಲ್ಲಿ ಮೈಮರೆ ತಿರಲೂ ಇಲ್ಲ. ಬದಲಾಗಿ ನೆಟ್ಸ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಿದ್ದರು. ಸಹ ಆಟಗಾರ ಡೇವಿಡ್‌ ವಾರ್ನರ್‌ ಅವರ ಅತಿವೇಗದ ‘ಥ್ರೋ ಡೌನ್‌’ಗಳನ್ನು ಎದುರಿಸಿ ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಪರಿಪಕ್ಷತೆ ಗಳಿಸಲು ಪ್ರಯತ್ನಿಸುತ್ತಿದ್ದರು.

‘20 ರನ್‌ಗಳಿಗೆ ಔಟಾದರೂ ಸರಿ, 220ರನ್‌ ಕಲೆಹಾಕಿದರೂ ಸರಿ. ತಂಡದ ಅಭ್ಯಾಸದ ವೇಳೆ ಸ್ಮಿತ್‌ ಹಾಜರಿ ಇದ್ದೇ ಇರುತ್ತಿತ್ತು. ಅವರು ನೆಟ್ಸ್‌ನಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದರು. ಆಟದ ಬಗ್ಗೆ ಹೊಂದಿದ್ದ ಈ ಬದ್ಧತೆಯೇ ಅವರು ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿ ರೂಪುಗೊಳ್ಳಲು ಕಾರಣ’ ಎಂದು ಆಸ್ಟ್ರೇಲಿಯಾದ ಆಟಗಾರ ಮಿಚೆಲ್‌ ಮಾರ್ಚ್‌ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಬೌನ್ಸರ್‌ ಪೆಟ್ಟಿಗೂ ಅಂಜಲಿಲ್ಲ

‘ಕ್ರಿಕೆಟ್‌ ಕಾಶಿ’ ಲಾರ್ಡ್ಸ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನ ಮಾತು. ಇಂಗ್ಲೆಂಡ್‌ನ ಜೋಫ್ರಾ ಆರ್ಚರ್‌ (77ನೇ ಓವರ್‌ನ ಎರಡನೇ ಎಸೆತ) ಅವರ ಬೌನ್ಸರ್‌, ಸ್ಮಿತ್‌ ಅವರ ಕುತ್ತಿಗೆಗೆ ಬಡಿದಿತ್ತು. ನೋವು ಸಹಿಸಲಾರದೆ ಸ್ಮಿತ್, ಕ್ರೀಸ್‌ನಲ್ಲೇ ಕುಸಿದು ಬಿದ್ದಿದ್ದರು. ತಂಡದ ವೈದ್ಯಕೀಯ ಸಿಬ್ಬಂದಿ ಅವರನ್ನು ಅಂಗಳದ ಆಚೆ ಕರೆದುಕೊಂಡು ಹೋದರು. ಪೀಟರ್‌ ಸಿಡ್ಲ್‌ ಔಟಾದ ನಂತರ ಮತ್ತೆ ಮೈದಾನಕ್ಕೆ ಮರಳಿದ್ದ ಸ್ಮಿತ್‌, ಬೆನ್‌ ಸ್ಟೋಕ್ಸ್‌ ಹಾಕಿದ 86ನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಬಾರಿಸಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದ್ದರು. 92ರನ್ ಗಳಿಸಿ ಔಟ್‌ ಆಗಿದ್ದರು. ಕುತ್ತಿಗೆಗೆ ಬಿದ್ದಿದ್ದ ಪೆಟ್ಟು ಗಂಭೀರ ಸ್ವರೂಪದ್ದಾಗಿದ್ದರಿಂದ ಎರಡನೇ ಇನಿಂಗ್ಸ್‌ನಲ್ಲಿ ಅವರು ಕಣಕ್ಕಿಳಿಯಲಿಲ್ಲ. ಮೂರನೇ ಟೆಸ್ಟ್‌ಗೂ ಅಲಭ್ಯರಾದರು. ಆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸೋತಿತು!

ನಾಲ್ಕನೇ ಟೆಸ್ಟ್‌ನಲ್ಲಿ ಸ್ಮಿತ್‌ ಮತ್ತೆ ಪರಾಕ್ರಮ ಮೆರೆದರು. ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ದಾಖಲಿಸಿದ್ದ ಅವರು ಎರಡನೇ ಇನಿಂಗ್ಸ್‌ನಲ್ಲೂ ಪರಿಣಾಮಕಾರಿ ಬ್ಯಾಟಿಂಗ್‌ ಮಾಡಿ ಮತ್ತೊಮ್ಮೆ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಜೊತೆಗೆ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದರು. ಈ ಹಾದಿಯಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಹಿಂದಿಕ್ಕಿದ್ದರು. ಅಷ್ಟೇ ಅಲ್ಲದೆ ಟೆಸ್ಟ್‌ನಲ್ಲಿ ಅತಿ ವೇಗವಾಗಿ 26 ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೂ ಭಾಜನರಾಗಿದ್ದರು. ಆ್ಯಷಸ್‌ ಸರಣಿಯಲ್ಲಿ ಸತತ ಎಂಟು ಅರ್ಧಶತಕ ಸಿಡಿಸಿದ ಹಿರಿಮೆಯೂ ಅವರದ್ದಾಗಿತ್ತು.

‘ರನ್‌ ಮಷಿನ್‌’ ಸ್ಮಿತ್‌, ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸುವತ್ತ ಚಿತ್ತ ನೆಟ್ಟಿದ್ದಾರೆ. ಟೆಸ್ಟ್‌ ಸರಣಿಯೊಂದರಲ್ಲಿ ಅತಿ ಹೆಚ್ಚು ರನ್‌ ಗಳಿಸಿ ರುವ ಡಾನ್‌ ಬ್ರಾಡ್ಮನ್‌ (1930ರಲ್ಲಿ ನಡೆದಿದ್ದ ಆ್ಯಷಸ್‌ ಸರಣಿಯಲ್ಲಿ 974ರನ್‌) ಅವರ 89 ವರ್ಷಗಳ ಹಿಂದಿನ ದಾಖಲೆಯನ್ನು ಮೀರಿನಿಲ್ಲುವ ತವಕದಲ್ಲಿದ್ದಾರೆ. ಅದಕ್ಕಾಗಿ ಅವರಿಗೆ ಬೇಕಿರುವುದು 304ರನ್‌. ಓವಲ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ನಲ್ಲಿ ಅವರಿಂದ ಈ ಸಾಧನೆ ಅರಳಲಿ ಎಂಬುದು ಕ್ರಿಕೆಟ್‌ ಪ್ರಿಯರ ಆಶಯ.

ಮೊದಲ ಟೆಸ್ಟ್ -(ಎಜ್‌ಬಾಸ್ಟನ್) ಮೊದಲ ಇನ್ನಿಂಗ್ಸ್ : 144 , ಎರಡನೇ ಇನ್ನಿಂಗ್ಸ್ : 142, ಎರಡನೇ ಟೆಸ್ಟ್ -(ಲಾರ್ಡ್ಸ್), ಮೊದಲ ಇನ್ನಿಂಗ್ಸ್ : 92, ನಾಲ್ಕನೇ ಟೆಸ್ಟ್ (ಮ್ಯಾಂಚೆಸ್ಟರ್ ), ಮೊದಲ ಇನ್ನಿಂಗ್ಸ್ : 211, ಎರಡನೇ ಇನ್ನಿಂಗ್ಸ್ : 82

                                      

    

ಪ್ರತಿಕ್ರಿಯಿಸಿ (+)