ಶನಿವಾರ, ಆಗಸ್ಟ್ 17, 2019
24 °C

ಖುಷಿಯಲ್ಲಿ ಸ್ಟೀವ್ ಸ್ಮಿತ್ ವಿದಾಯಕ್ಕೆ ಸಜ್ಜು

Published:
Updated:
Prajavani

ಜೈಪುರ: ತವರಿನಲ್ಲಿ ಗೆಲುವಿನ ಓಟ ಮುಂದುವರಿಸಿರುವ ರಾಜಸ್ಥಾನ್ ರಾಯಲ್ಸ್‌ ತಂಡದ ಸಾಧನೆಗೆ ನಾಯಕ ಸ್ಟೀವ್ ಸ್ಮಿತ್ ಸಂತಸ ವ್ಯಕ್ತಪಡಿಸಿದ್ದಾರೆ.

ಶನಿವಾರ ರಾತ್ರಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಜಯಿಸಿದ ನಂತರ ಮಾತನಾಡಿದ ಅವರು ‘ತವರಿನಲ್ಲಿ ಕೊನೆಯ ಪಂದ್ಯವನ್ನು ಗೆದ್ದಿರುವುದು ಮತ್ತು ಈ ಮೂಲಕ ಪ್ಲೇ ಆಫ್ ಹಂತದ ಕನಸು ಜೀವಂತವಾಗಿರಿಸಿಕೊಳ್ಳಲು ಸಾಧ್ಯವಾಗಿರುವುದು ಖುಷಿ ನೀಡಿದೆ’ ಎಂದರು.

ಆಸ್ಟ್ರೇಲಿಯಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಸ್ಮಿತ್‌ ಸದ್ಯದಲ್ಲೇ ತವರಿಗೆ ಮರಳಲಿದ್ದಾರೆ. ಮುಂದಿನ ಶನಿವಾರ ದೆಹಲಿಯಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ. 

‘ಮುಂದಿನ ಪಂದ್ಯದಲ್ಲಿ ತಂಡದ ಆಟಗಾರರು ಉತ್ತಮವಾಗಿ ಆಡಲಿದ್ದಾರೆ. ತಂಡಕ್ಕೆ ಆ ಪಂದ್ಯದಲ್ಲಿ ಗೆಲುವು ಅನಿವಾರ್ಯ ಆಗಿದ್ದು ಅದನ್ನು ಸುಲಭವಾಗಿ ಸಾಧಿಸಲಿದೆ ಎಂಬುದು ನನ್ನ ಭರವಸೆ’ ಎಂದು ಅವರು ನುಡಿದರು.

ಶನಿವಾರದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರನ್ನು ಅದ್ಭುತ ಕ್ಯಾಚ್ ಮೂಲಕ ಸ್ಮಿತ್ ಔಟ್‌ ಮಾಡಿದ್ದರು. ಹಿಂದಕ್ಕೆ ಓಡಿ ಈ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ಬಿದ್ದು ಮೊಣಕೈಗೆ ಗಾಯವಾಗಿತ್ತು. ಈ ವರ್ಷದ ಆರಂಭದಲ್ಲಿ ಅವರು ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

‘ಬಿದ್ದಾಗ ಶಸ್ತ್ರಚಿಕಿತ್ಸೆ ನಡೆದ ಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತ್ತು. ಆದರೆ ಈಗ ತೊಂದರೆಯೇನೂ ಇಲ್ಲ’ ಎಂದು ಅವರು ತಿಳಿಸಿದರು.

ಸನ್‌ರೈಸರ್ಸ್ ಎದುರು ಲಿಯಾಮ್ ಲಿವಿಂಗ್ ಸ್ಟೋನ್ ಅತ್ಯುತ್ತಮವಾಗಿ ಆಡಿದರು. ಹೀಗಾಗಿ ತಂಡದ ಗೆಲುವು ಸುಲಭವಾಯಿತು. ಸಂಜು ಸ್ಯಾಮ್ಸನ್ ಅವರ ಸಾಮರ್ಥ್ಯ ಕೂಡ ಮೆಚ್ಚುಗೆಗೆ ಅರ್ಹ’ ಎಂದು ಸ್ಟೀವ್‌ ಹೇಳಿದರು.

Post Comments (+)