ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಟೂರ್ನಿ ಐಪಿಎಲ್‌ಗೆ ಪ್ರವೇಶ ದ್ವಾರವೇ?

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20
Last Updated 10 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಸೈಯದ್ ಮುಷ್ತಾಕ್ ಅಲಿ ಚುಟುಕು ಕ್ರಿಕೆಟ್ ಟೂರ್ನಿಯು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವ ಅವಕಾಶ ಗಿಟ್ಟಿಸಲು ವೇದಿಕೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ದೇಶಿ ಕ್ರಿಕೆಟ್ ವೇಳಾಪಟ್ಟಿಯನ್ನು ಬದಲಿಸಿ, ರಣಜಿ ಟೂರ್ನಿಗಿಂತ ಮೊದಲೇ ಈ ಟೂರ್ನಿಯನ್ನು ಆಡಿಸುವ ಪರಿಪಾಟ ಆರಂಭವಾಗಿದೆ. ಮುಂದಿನ ತಿಂಗಳು ಕೋಲ್ಕತ್ತದಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ಮುಗಿಯುವ ಹೊತ್ತಿಗೆ ಈ ಟೂರ್ನಿಯೂ ಮುಕ್ತಾಯವಾಗಿರುತ್ತದೆ. ಇಲ್ಲಿ ಭರ್ಜರಿ ಆಟವಾಡಿದ ಹುಡುಗರಿಗೆ ಬಂಪರ್ ಲಾಟರಿ ಹೊಡೆದರೂ ಅಚ್ಚರಿಯಿಲ್ಲ

ಹೋದ ವರ್ಷ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಕರ್ನಾಟಕ ತಂಡದ ಆಟಗಾರರ ಸಂಭ್ರಮ ಮುಗಿಲುಮುಟ್ಟಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಳ್ಳೆಯ ಮೌಲ್ಯ ಪಡೆಯುವ ಕನಸು ಬಹುತೇಕರಲ್ಲಿ ಗರಿಗೆದರಿತ್ತು. ಅದಕ್ಕೆ ತಕ್ಕಂತೆ ಕೆಲವರು ಒಳ್ಳೆಯ ಮೊತ್ತ ಪಡೆದು ವಿವಿಧ ತಂಡಗಳಲ್ಲಿ ಆಡಿದರು. ಆದರೆ ಅವರೆಲ್ಲರಲ್ಲೂ ಒಂದು ಕೊರಗು ಮಾತ್ರ ಹಾಗೆಯೇ ಉಳಿಯಿತು.

ಅದೆನೆಂದರೆ, ತವರಿನ ತಂಡದ ರಾಯಲ್ ಚಾಲೆಂಜರ್ಸ್‌ ಬೆಂಗಳೂರಿನಲ್ಲಿ ಆಡುವ ಕನಸು. ಹೋದ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಎಲ್ಲ 14 ಪಂದ್ಯಗಳನ್ನು ಗೆದ್ದ ದಾಖಲೆ ಬರೆದಿದ್ದ ರಾಜ್ಯ ತಂಡದ ಒಬ್ಬ ಆಟಗಾರನೂ ಆರ್‌ಸಿಬಿಯಲ್ಲಿ ಸ್ಥಾನ ಪಡೆಯಲಿಲ್ಲ. ಆದರೆ ಮಯಂಕ್ ಅಗರವಾಲ್, ರಾಹುಲ್, ಪ್ರಸಿದ್ಧಕೃಷ್ಣ, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್ ಅವರು ತಮಗೆ ಅವಕಾಶ ಕೊಟ್ಟ ತಂಡಗಳಲ್ಲಿ ಮಿಂಚಿದರು. ಈ ಬಾರಿಯಾದರೂ ಆರ್‌ಸಿಬಿಯ ಕಣ್ಣು ಇತ್ತ ಹೊರಳುವುದೇ?

ಸತತ ಎರಡನೇ ಪ್ರಶಸ್ತಿ ಗೆಲ್ಲುವ ಛಲದೊಂದಿಗೆ ‘ಸಿಟಿ ಆಫ್ ಜಾಯ್’ ಕೋಲ್ಕತ್ತಕ್ಕೆ ತೆರಳಿರುವ ಕರ್ನಾಟಕ ತಂಡದಲ್ಲಿ ಈ ಬಾರಿ ಯುವಪ್ರತಿಭೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಾಂಗ್ಲಾ ವಿರುದ್ದ ಸರಣಿಯಲ್ಲಿ ಆಡಲು ಕೆ.ಎಲ್. ರಾಹುಲ್, ಮನೀಷ್ ಪಾಂಡೆ ತೆರಳಿದ್ದಾರೆ. ಮಯಂಕ್ ಅಗರವಾಲ್ ವಿಶ್ರಾಂತಿ ಪಡೆದಿದ್ದಾರೆ. ಅವರು ಟೆಸ್ಟ್‌ ಸರಣಿಗೆ ತೆರಳಲು ಅಭ್ಯಾಸ ನಡೆಸಿದ್ದಾರೆ. ಆದ್ದರಿಂದ ಯುವ ಆಟಗಾರರಾದ ದೇವದತ್ತ ಪಡಿಕ್ಕಲ್, ನಿಹಾಲ್ ಉಳ್ಳಾಲ್‌ ಮತ್ತು ಲವನೀತ್ ಸಿಸೋಡಿಯಾ ಅವರಿಗೆ ಸ್ಥಾನ ಲಭಿಸಿದೆ. ಈಚೆಗೆ ಮುಕ್ತಾಯವಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಚಾಂಪಿಯನ್ ಆಗಿತ್ತು. ಅದರಲ್ಲಿ ಆರುನೂರಕ್ಕೂ ಹೆಚ್ಚು ರನ್‌ ಗಳಿಸಿ ಮಿಂಚಿದ್ದ ದೇವದತ್ತ ಚುಟುಕು ಕ್ರಿಕೆಟ್‌ನಲ್ಲಿಯೂ ತಮ್ಮ ಭುಜಬಲ ಮೆರೆಯಲು ಸಿದ್ಧರಾಗಿದ್ದಾರೆ. ಅವರಿಂದ ಬಹಳಷ್ಟು ನಿರೀಕ್ಷೆಗಳೂ ಇವೆ.

ಹೋದ ಸಲ ಮಿಂಚಿದ್ದ ಬೆಳಗಾವಿ ಹುಡುಗ ರೋಹನ್ ಕದಂ ಮತ್ತೊಮ್ಮೆ ತಮ್ಮ ಪರಾಕ್ರಮ ಮೆರೆಯುವ ಛಲದಲ್ಲಿದ್ದಾರೆ. ಈ ಸಲವಾದರೂ ಐಪಿಎಲ್ ಫ್ರ್ಯಾಂಚೈಸ್‌ಗಳು ಮತ್ತು ಭಾರತ ಟಿ–20 ತಂಡದ ಆಯ್ಕೆದಾರರ ಕಣ್ಣು ತಮ್ಮ ಮೇಲೆ ಬೀಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಟೂರ್ನಿಯ ಪಂದ್ಯದಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ಅಭಿಯಾನ ಆರಂಭಿಸಿದ್ದಾರೆ. ರೋಹನ್ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಮಿಂಚುವ ಕಲೆಗಳನ್ನು ರೂಢಿಸಿಕೊಂಡಿದ್ದಾರೆ.

‘ಅವಕಾಶ ಸಿಕ್ಕಾಗ ಉತ್ತಮವಾಗಿ ಆಡುವುದಷ್ಟೇ ನನ್ನ ಗುರಿ. ನಾನು ಗಳಿಸುವ ರನ್‌ಗಳಿಂದ ತಂಡವು ಜಯಿಸಿದರೆ ಸಿಗುವ ಸಂತಸ ಮತ್ತು ತೃಪ್ತಿ ದೊಡ್ಡದು. ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯುವ ಆಸೆ ಎಲ್ಲರಿಗೂ ಇರುತ್ತದೆ’ ಎಂದು ಬೀಸು ಹೊಡೆತಗಾರ ರೋಹನ್ ಹೇಳುತ್ತಾರೆ.

ಎಡಗೈ ಮಧ್ಯಮವೇಗಿ ಜೈನ್: ಎಸ್. ಅರವಿಂದ್ ನಿವೃತ್ತಿಯಾದ ನಂತರ ಕರ್ನಾಟಕ ತಂಡದಲ್ಲಿ ಎಡಗೈ ಮಧ್ಯಮವೇಗಿಯ ಕೊರತೆ ಕಾಡುತ್ತಿದೆ. ಅದಕ್ಕೆ ಉತ್ತರವಾಗಿ ಪ್ರತೀಕ್ ಜೈನ್ ಭರವಸೆ ಮೂಡಿಸಿದ್ದಾರೆ. ಅವರಿಗೆ ಇದು ಚೊಚ್ಚಲ ಟೂರ್ನಿ. ಇದರಲ್ಲಿ ಮಿಂಚಿದರೆ ಭವಿಷ್ಯದಲ್ಲಿ ಕರ್ನಾಟಕಕ್ಕೆ ಉತ್ತಮ ಬೌಲರ್ ಸಿಗಬಹುದು.

ಏಕದಿನ ಮಾದರಿಯ ದೇಸಿ ಕ್ರಿಕೆಟ್‌ನಲ್ಲಿ ಮಿಂಚಿದ್ದ ಬಲಗೈ ಮಧ್ಯಮವೇಗಿ ವಿ. ಕೌಶಿಕ್ ಅವರು ಚುಟುಕು ಮಾದರಿಯಲ್ಲಿ ಮಿಂಚುವ ಛಲದಲ್ಲಿದ್ದಾರೆ. ಎಂಜಿನಿಯರಿಂಗ್ ಪದವೀಧರ ಕೌಶಿಕ್ ಅವರ ಎಸೆತಗಳಲ್ಲಿ ಚಾಣಾಕ್ಷ ಮತ್ತು ಹದವಾದ ವೇಗವು ಮೇಳೈಸಿದೆ. ಗಾಯಗೊಂಡಿರುವ ಪ್ರಸಿದ್ಧ ಕೃಷ್ಣ ಸ್ಥಾನವನ್ನು ತುಂಬುವ ಭರವಸೆಯನ್ನೂ ಅವರು ಮೂಡಿಸಿದ್ದಾರೆ. ಸೀನಿಯರ್ ಆಟಗಾರ ಅಭಿಮನ್ಯು ಮಿಥುನ್ ಅವರೊಂದಿಗೆ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡುವ ಸಾಮರ್ಥ್ಯ ಅವರಿಗೆ ಇದೆ. ಆದರೆ, ಮಧ್ಯಮವೇಗಿಗಳು ಮತ್ತು ಅನುಭವಿ ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್ ಅವರು ಜೊತೆಯಾಟಗಳನ್ನು ಮುರಿಯುವ ಸಾಮರ್ಥ್ಯವನ್ನು ಮತ್ತೆ ಕಂಡುಕೊಳ್ಳಬೇಕಿದೆ.

ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಕೆಲವು ಪಂದ್ಯಗಳಲ್ಲಿ ಆರಂಭದಲ್ಲಿಯೇ ಯಶಸ್ಸು ಸಾಧಿಸುತ್ತಿದ್ದ ಬೌಲರ್‌ಗಳು, ನಂತರದ ಹಂತದಲ್ಲಿ ರನ್‌ಗಳನ್ನು ಬಿಟ್ಟುಕೊಡುತ್ತಿದ್ದರು. ಹೊಳಪು ಮಾಸಿದ ಬಿಳಿ ಚೆಂಡಿನಲ್ಲಿಯೂ ಮೋಡಿ ಮಾಡಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಅವರ ಕೌಶಲ್ಯಕ್ಕೆ ಇಲ್ಲಿ ಪರೀಕ್ಷೆ ಎದುರಾಗಲಿದೆ.

ಈ ಬಾರಿ ಎ ಮತ್ತು ಬಿ ಜಂಟಿ ಪಟ್ಟಿಯಲ್ಲಿ ಅಗ್ರ ಐದು ಸ್ಥಾನಗಳನ್ನು ಪಡೆದು ನಾಕೌಟ್ ಹಂತ ಪ್ರವೇಶಿಸುವ ಸವಾಲು ಇದೆ. ಆದ್ದರಿಂದ ಲೀಗ್ ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆಲ್ಲುವತ್ತಲೇ ಚಿತ್ತ ಇಡುವ ಒತ್ತಡ ತಂಡದ ಮೇಲಿದೆ.

ಐಪಿಎಲ್ ಅಲ್ಲದೇ ಮುಂದಿನ ವರ್ಷ ನಡೆಯಲಿರುವ ಟಿ–20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲೂ ಕೂಡ ಇಲ್ಲಿ ಪ್ರಯತ್ನ ನಡೆಸುವ ಅವಕಾಶ ಕೆಲವು ಆಟಗಾರರಿಗೆ ಇದೆ. ಕೇವಲ ಮನರಂಜನೆಯೇ ಮುಖ್ಯವಾಗಿದ್ದ ಟಿ–20 ಈಗ ವೃತ್ತಿಪರ ಮಾದರಿಯಾಗಿ ರೂಪುಗೊಳ್ಳಲು ಕೂಡ ಈ ಟೂರ್ನಿ ವೇದಿಕೆಯಾಗುತ್ತದೆ. ಏಕದಿನ, ಟಿ–20 ಮತ್ತು ದೀರ್ಘ ಮಾದರಿ ಮೂರರಲ್ಲಿಯೂ ಸೈ ಎನಿಸಿಕೊಂಡವರಿಗೆ ಮಾತ್ರ ದೊಡ್ಡ ಅವಕಾಶಗಳು ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಂಕಿ ಅಂಶಗಳು

ಟೂರ್ನಿಯ ಆರಂಭ: 2009–10

ಮಾದರಿ: ಟ್ವೆಂಟಿ–20

ಫಾರ್ಮ್ಯಾಟ್: ರೌಂಡ್ ರಾಬಿನ್ –ನಾಕೌಟ್

ತಂಡಗಳು: 37

ಹಾಲಿ ಚಾಂಪಿಯನ್: ಕರ್ನಾಟಕ

ಅತಿ ಹೆಚ್ಚು ಪ್ರಶಸ್ತಿ ಗೆದ್ದವರು: ಬರೋಡಾ (2), ಗುಜರಾತ್ (2)

ಟೂರ್ನಿಯಲ್ಲಿ ಅಜೇಯ: ಕರ್ನಾಟಕ (14 ಪಂದ್ಯ)

ಸತತ ಸೋಲು: ಜಮ್ಮು–ಕಾಶ್ಮೀರ (22 ಪಂದ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT