ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಾಡ್‌: ಇಂಗ್ಲೆಂಡ್‌ನ ‘ಮ್ಯಾಚ್‌ ವಿನ್ನರ್’

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ವಿರಮಿಸಿದ ವೇಗಿ
Published 30 ಜುಲೈ 2023, 13:50 IST
Last Updated 30 ಜುಲೈ 2023, 13:50 IST
ಅಕ್ಷರ ಗಾತ್ರ

ಲಂಡನ್‌ : ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಪ್ರಕಟಿಸಿರುವ ವೇಗದ ಬೌಲರ್‌ ಸ್ಟುವರ್ಟ್‌ ಬ್ರಾಡ್‌ ಅವರು, ಇಂಗ್ಲೆಂಡ್‌ ತಂಡದಲ್ಲಿ ‘ಮ್ಯಾಚ್‌ ವಿನ್ನರ್‌’ ಆಗಿ ಗುರುತಿಸಿಕೊಂಡವರು.

ಆ್ಯಷಸ್‌ ಟೆಸ್ಟ್ ಸರಣಿಯ ಬಳಿಕ ನಿವೃತ್ತಿಯಾಗುವುದಾಗಿ ಬ್ರಾಡ್‌, ಶನಿವಾರ ಪ್ರಕಟಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದ ಬಳಿಕ ತಮ್ಮ ನಿರ್ಧಾರ ತಿಳಿಸಿದ್ದರು.

37 ವರ್ಷದ ಬ್ರಾಡ್‌, ಆ್ಯಷಸ್‌ನ ಅಂತಿಮ ಪಂದ್ಯ ಸೇರಿದಂತೆ ಒಟ್ಟು 167 ಟೆಸ್ಟ್‌ಗಳಿಂದ 602 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಅತ್ಯಧಿಕ ವಿಕೆಟ್‌ ಪಡೆದ ಐದನೇ ಬೌಲರ್‌ ಅವರಾಗಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800), ಆಸ್ಟ್ರೇಲಿಯಾದ ಶೇನ್‌ ವಾರ್ನ್‌ (708), ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್ಸನ್ (690) ಮತ್ತು ಭಾರತದ ಅನಿಲ್‌ ಕುಂಬ್ಳೆ (619) ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ.

ಟೆಸ್ಟ್‌ನಲ್ಲಿ ಹೆಚ್ಚು ವಿಕೆಟ್‌ ಗಳಿಸಿದ ವೇಗಿಗಳಲ್ಲಿ ಅವರು, ಆ್ಯಂಡರ್ಸನ್‌ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಆರಡಿ ಐದಿಂಚು ಎತ್ತರದ ಬ್ರಾಡ್‌, ತಮ್ಮ ವೃತ್ತಿಜೀವನದಲ್ಲಿ ಟೆಸ್ಟ್‌ನತ್ತ ಹೆಚ್ಚು ಗಮನಹರಿಸಿದ್ದರು. ‘ನಾನು ಟೆಸ್ಟ್‌ ಪಂದ್ಯದ ಚಟಕ್ಕೆ ಬಿದ್ದಿದ್ದೇನೆ’ ಎಂದು ಅವರು ಹಿಂದೊಮ್ಮೆ ಹೇಳಿದ್ದರು.

2006 ರಲ್ಲಿ ಟಿ20 ಮತ್ತು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, 2007 ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದೊಂದಿಗೆ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟಿದ್ದರು.

ವೃತ್ತಿಜೀವನದ ಅರಂಭದಲ್ಲೇ ಅವರಿಗೆ ಹಿನ್ನಡೆ ಎದುರಾಗಿತ್ತು. 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರತದ ಯುವರಾಜ್‌ ಸಿಂಗ್‌, ಬ್ರಾಡ್‌ ಅವರ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದಿದ್ದರು. ಆದರೆ ಆ ‘ಕಹಿ’ಯನ್ನು ಮರೆತು ಅನುಭವ ಗಳಿಸಿದಂತೆ ಅವರು ತಂಡದ ಪ್ರಮುಖ ಬೌಲರ್‌ ಆಗಿ ಬೆಳೆದು ನಿಂತರು.

2014ರಲ್ಲೇ ಟಿ20 ಪಂದ್ಯಗಳಿಂದ ದೂರವಾಗಿದ್ದ ಅವರು, 2016 ರಲ್ಲಿ ಏಕದಿನ ಕ್ರಿಕೆಟ್‌ಗೂ ಗುಡ್‌ಬೈ ಹೇಳಿದ್ದರು. ಇದರಿಂದ ಟೆಸ್ಟ್‌ನಲ್ಲಿ ಹೆಚ್ಚು ಕಾಲ ಆಡಲು ಸಾಧ್ಯವಾಗಿದೆ.

ಚೆಂಡು ಪುಟಿದೇಳುವಂತೆ ಮಾಡುವ ಸಾಮರ್ಥ್ಯದ ಜತೆಯಲ್ಲೇ ಇನ್‌ಸ್ವಿಂಗ್‌ ಮತ್ತು ಔಟ್‌ಸ್ವಿಂಗ್‌ ಎಸೆತಗಳ ಮೂಲಕ ಅವರು ಬ್ಯಾಟರ್‌ಗಳನ್ನು ಕಾಡಿದ್ದಾರೆ. ಟೆಸ್ಟ್‌ನ ಇನಿಂಗ್ಸ್‌ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದ ಸಾಧನೆಯನ್ನು 20 ಸಲ ಮಾಡಿದ್ದಾರೆ. 2015 ರಲ್ಲಿ ಟ್ರೆಂಟ್‌ಬ್ರಿಜ್‌ನಲ್ಲಿ ನಡೆದಿದ್ದ ಆ್ಯಷಸ್‌ ಟೆಸ್ಟ್‌ನ ಒಂದು ಇನಿಂಗ್ಸ್‌ನಲ್ಲಿ 15 ರನ್‌ಗಳಿಗೆ 8 ವಿಕೆಟ್‌ ಪಡೆದಿದ್ದರು. ಆಸ್ಟ್ರೇಲಿಯಾ ತಂಡ 60 ರನ್‌ಗಳಿಗೆ ಆಲೌಟಾಗಿತ್ತು.

ಕೆಳಗಿನ ಕ್ರಮಾಂಕದಲ್ಲಿ ಬ್ಯಾಟರ್‌ ಆಗಿಯೂ ಅವರು ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದಾರೆ. 2010 ರಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ 169 ರನ್‌ ಗಳಿಸಿದ್ದು ಅವರ ಗರಿಷ್ಠ ಸ್ಕೋರ್‌ ಆಗಿದೆ.

*******

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧನೆ

ಮಾದರಿ;ಪಂದ್ಯ;ಗಳಿಸಿದ ರನ್;ವಿಕೆಟ್;ಶ್ರೇಷ್ಠ ಬೌಲಿಂಗ್

ಟೆಸ್ಟ್‌;167;3655;602;121ಕ್ಕೆ 11

ಏಕದಿನ;121;529;178;23ಕ್ಕೆ 5

ಟಿ20;56;118;65;24ಕ್ಕೆ 4

* ಆ್ಯಷಸ್‌ ಸರಣಿಯ ಅಂತಿಮ ಟೆಸ್ಟ್‌ ಒಳಗೊಂಡಂತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT