ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂಡದಿಂದ ಹೊರದಬ್ಬಿಸಿಕೊಳ್ಳುವ ಮುನ್ನವೇ ಧೋನಿ ನಿವೃತ್ತಿ ಪಡೆಯಲಿ’

ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್‌ ಅನಿಸಿಕೆ
Last Updated 20 ಸೆಪ್ಟೆಂಬರ್ 2019, 16:00 IST
ಅಕ್ಷರ ಗಾತ್ರ

ಮುಂಬೈ: ‘ಮಹೇಂದ್ರ ಸಿಂಗ್‌ ಧೋನಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕು ಬಹುತೇಕ ಅಂತ್ಯವಾಗಿದೆ. ತಂಡದಿಂದ ಹೊರಗೆ ಹಾಕುವ ಮುನ್ನವೇ ಅವರು ವಿದಾಯ ಪ್ರಕಟಿಸುವುದು ಒಳಿತು’ ಎಂದು ಭಾರತದ ಹಿರಿಯ ಕ್ರಿಕೆಟಿಗ ಸುನಿಲ್‌ ಗಾವಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡವು ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋತ ಬಳಿಕ ಧೋನಿ ನಿವೃತ್ತಿಯ ಕುರಿತು ಚರ್ಚೆಗಳು ಆರಂಭವಾಗಿದ್ದವು. ವೆಸ್ಟ್‌ ಇಂಡೀಸ್‌ ಎದುರಿನ ಸರಣಿಗೆ ಅಲಭ್ಯರಾಗಿದ್ದ ಅವರನ್ನು ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ–20 ಸರಣಿಯಿಂದ ಕೈಬಿಡಲಾಗಿತ್ತು.

‘ಧೋನಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ತಮ್ಮ ಮುಂದಿನ ನಡೆ ಏನು ಎಂಬುದನ್ನು ಅವರೇ ತಿಳಿಸಬೇಕು. ಅವರಿಗೆ ಈಗಾಗಲೇ 38 ವರ್ಷ ವಯಸ್ಸಾಗಿದೆ. ಮುಂದಿನ ವಿಶ್ವ ಟ್ವೆಂಟಿ–20 ಟೂರ್ನಿ ವೇಳೆಗೆ ಅವರ ಪ್ರಾಯ 39 ವರ್ಷವಾಗಲಿದೆ. ಬಿಸಿಸಿಐ ಈಗ ಯುವ ಆಟಗಾರರತ್ತ ಹೆಚ್ಚು ಗಮನ ಕೇಂದ್ರೀಕರಿಸಿದೆ. ಇದನ್ನು ನೋಡಿದರೆ ಮುಂದೆ ಧೋನಿಗೆ ಅವಕಾಶ ಸಿಗುವುದು ಅನುಮಾನ’ ಎಂದಿದ್ದಾರೆ.

‘ಧೋನಿ, ವಿಶ್ವಶ್ರೇಷ್ಠ ನಾಯಕ ಹಾಗೂ ಆಟಗಾರ. ಅವರ ಉಪಸ್ಥಿತಿಯಿಂದ ತಂಡಕ್ಕೆ ಲಾಭವೇ ಹೆಚ್ಚು. ಎಂತಹುದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದ ಅವರು ಶಾಂತ ಚಿತ್ತದಿಂದಲೇ ಎಲ್ಲವನ್ನೂ ನಿಭಾಯಿಸುತ್ತಿದ್ದರು. ಪ್ರಯೋಗಶೀಲರಾಗಿದ್ದ ಅವರು ಅಮೂಲ್ಯ ಸಲಹೆಗಳನ್ನು ನೀಡುತ್ತಾ ಯುವ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಆದರೆ ಎಲ್ಲದಕ್ಕೂ ಕೊನೆ ಇದೆಯಲ್ಲವೇ. ಎಲ್ಲರಿಗೂ ಕುಟುಂಬ ಎಂಬುದೂ ಇದೆಯಲ್ಲವೇ. ಅವರ ಜೊತೆಯೂ ಸಮಯ ಕಳೆಯಬೇಕು. ಈ ನಿಟ್ಟಿನಲ್ಲಿ ನೋಡಿದರೆ ನಿವೃತ್ತಿ ಪಡೆಯಲು ಧೋನಿಗೆ ಇದು ಸೂಕ್ತ ಸಮಯ. ಅವರು ಗೌರವಯುತವಾಗಿಯೇ ತಂಡದಿಂದ ಹೊರಬರಬೇಕು’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT