ಭಾನುವಾರ, ನವೆಂಬರ್ 17, 2019
21 °C
‘ಮೇಕಿಂಗ್ ಸ್ಪೋರ್ಟ್ಸ್‌ ಇನ್ ಇಂಡಿಯಾ’ ಸಂವಾದದಲ್ಲಿ

ಕ್ರೀಡೆಗಳೇ ವೃತ್ತಿಯಾಗಿ ಬೆಳೆಯಬೇಕು: ಸುನಿಲ್ ಗಾವಸ್ಕರ್ ಅಭಿಮತ

Published:
Updated:
Prajavani

ಬೆಂಗಳೂರು: ಮಕ್ಕಳು ತಮ್ಮ ಇಷ್ಟದ ಕ್ರೀಡೆಗಳಲ್ಲಿಯೇ ವೃತ್ತಿಯನ್ನೂ ಮಾಡುವಂತಹ ಅವಕಾಶಗಳು ಹೆಚ್ಚಬೇಕು. ಕ್ರಿಕೆಟ್‌ನಲ್ಲಿ ಇಂದು ಅಂತಹ ಅವಕಾಶಗಳಿವೆ. ಉಳಿದ ಕ್ರೀಡೆಗಳಲ್ಲಿ ವೃತ್ತಿಪರತೆ ಬೆಳೆದಾಗ ಮಾತ್ರ ಆ ಆಟಗಳೂ ಬೆಳೆಯುತ್ತವೆ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಹೇಳಿದರು.

ಎಂಬೆಸಿ ಸಮೂಹವು ಆಯೋಜಿಸಿದ್ದ ‘ಮೇಕಿಂಗ್ ಸ್ಪೋರ್ಟ್ಸ್‌ ಇನ್ ಇಂಡಿಯಾ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ರಿಕೆಟ್ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಇವತ್ತು ರಣಜಿ ಟ್ರೋಫಿ ಟೂರ್ನಿಯ ಹಂತದಲ್ಲಿ ಆಡಿದರೂ ಸಾಕು.  ಯಾವುದೇ ಸರ್ಕಾರಿ ಇಲಾಖೆ ಮತ್ತು ಖಾಸಗಿ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವವರಿಗಿಂತಲೂ ಉತ್ತಮ ಆದಾಯ ಆಟಗಾರರಿಗೆ ಲಭಿಸುತ್ತದೆ. ಅದಲ್ಲದೇ ನಿವೃತ್ತಿಯ ನಂತರ ಕ್ರಿಕೆಟ್‌ಗೆ ಸಂಬಂಧಿತ ಹಲವು ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ಹಣ, ಹೆಸರು  ಮತ್ತು ಸಾಧನೆಗಳು ಒಟ್ಟಿಗೆ ಒಂದೇ ಆಟದಲ್ಲಿ ಸಿಗುವುದಾದರೆ, ತಂದೆ–ತಾಯಂದಿರು ತಮ್ಮ ಮಕ್ಕಳ ಭವಿಷ್ಯಕ್ಕೆ ಆ ಕ್ರೀಡೆಯತ್ತಲೇ ಚಿತ್ತ ಹರಿಸುತ್ತಾರೆ’ ಎಂದು ನುಡಿದರು.

‘ಕ್ರಿಕೆಟ್‌ ಪಂದ್ಯಗಳಲ್ಲಿ ಜಾಹೀರಾತುದಾರರಿಗೆ ಹಲವು ಅವಕಾಶಗಳಿವೆ. ಪ್ರತಿ ಓವರ್, ವಿಕೆಟ್, ಇನಿಂಗ್ಸ್‌ ಬ್ರೇಕ್‌, ಪಂದ್ಯದ ಮುನ್ನ ಮತ್ತು ನಂತರದ ಅವಧಿಗಳಲ್ಲಿ ಬ್ರ್ಯಾಂಡ್‌ಗಳ ಜಾಹೀರಾತು ನೀಡಲು ವಿಫುಲ ಅವಕಾಶಗಳಿವೆ. ಆದರೆ, ಬ್ಯಾಡ್ಮಿಂಟನ್, ಟಿಟಿ, ಅಥ್ಲೆಟಿಕ್ಸ್‌ನಲ್ಲಿ ಬ್ರ್ಯಾಂಡ್‌ನವರಿಗೆ ಇಂತಹ ಅನುಕೂಲತೆಗಳು ಕಡಿಮೆ. ಆದ್ದರಿಂದ ಈ ಕ್ರೀಡೆಗಳಿಗೆ ಪ್ರಾಯೋಜಕರು ಸಿಗುವುದು ಕಷ್ಟವಾಗಿರಬಹುದು’ ಎಂದು ಅಭಿಪ್ರಾಯಪಟ್ಟರು.

‘1960ರ ಮುನ್ನ ಭಾರತದಲ್ಲಿ ಹಾಕಿ ಜನಪ್ರಿಯ ಕ್ರೀಡೆಯಾಗಿತ್ತು. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದು ಅದಕ್ಕೆ ಕಾರಣ. 60 ಮತ್ತು 70ರ ದಶಕಗಳಲ್ಲಿ ಭಾರತವು ಕ್ರಿಕೆಟ್‌ನಲ್ಲಿ ಸತತವಾಗಿ ಸೋಲುತ್ತಿತ್ತು. ಆದರೂ ಜನರು ನೋಡಲು ಬರುತ್ತಿದ್ದರು. ಅದಕ್ಕೆ ಕಾರಣ ಎಂದರೆ ತಂಡಗಳನ್ನು ರಾಜಮನೆತನದವರು ಮುನ್ನಡೆಸುತ್ತಿದ್ದರು. ಅವರು ಜನರಿಗೆ ಪ್ರಮುಖ ಆಕರ್ಷಣೆಯಾಗಿದ್ದರು. ಆಮೇಲೆ ಕೆಲವು ಕಾಲ ಸ್ಫೂರದ್ರೂಪಿ ರಾಜಕುಮಾರರು ಆಡಿದರು. 1980ರ ನಂತರ ಈ ಸಮೀಕರಣ ಬದಲಾಯಿತು. ವಿಶ್ವಕಪ್ ಗೆದ್ದ ನಂತರ, ಐಪಿಎಲ್ ಬಂದ ನಂತರ ಕ್ರಿಕೆಟ್ ಜಗತ್ತು ಬದಲಾಗಿ ಹೋಯಿತು’ ಎಂದು ಸನ್ನಿ ಇತಿಹಾಸ ಬಿಚ್ಚಿಟ್ಟರು.

‘ಕ್ರಿಕೆಟ್‌ ಬೆಳವಣಿಗೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ದೊಡ್ಡದು. ಪತ್ರಿಕೆಗಳ ಮುಖಪುಟ ಮತ್ತು ಕೊನೆಯ ಪುಟದಲ್ಲಿ ಸಾಕಷ್ಟು ಚಿತ್ರಗಳು, ಲೇಖನಗಳನ್ನು ಪ್ರಕಟಿಸಲು ಆರಂಭಿಸಿದ್ದವು. ಈಗಲೂ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಕ್ರಿಕೆಟ್‌ ಅನ್ನು ಬೆಳೆಸುತ್ತಿವೆ. ಅವುಗಳ ಪ್ರಚಾರದಿಂದಾಗಿ ದೇಶದ ಸಣ್ಣಪುಟ್ಟ ಹಳ್ಳಿಗಳ ಮಕ್ಕಳಿಗೂ ಕ್ರಿಕೆಟ್ ಆಕರ್ಷಣೀಯವಾಗಿದೆ. ಅಂತಹ ಗ್ರಾಮೀಣ ಪ್ರದೇಶಗಳಿಂದಲೂ ಭಾರತ ತಂಡದಲ್ಲಿ ಸ್ಥಾನ ಪಡೆದವರು ಅನೇಕರಿದ್ದಾರೆ’ ಎಂದು ಶ್ಲಾಘಿಸಿದರು.

ಕ್ರೀಡೆ ದೇಶದ ಅಭಿವೃದ್ಧಿಯ ಭಾಗ: ಸಂವಾದದಲ್ಲಿ ಹಾಜರಿದ್ದ ಒಲಿಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಅಪರ್ಣಾ ಪೋಪಟ್, ‘ಕ್ರೀಡಾ ಆಡಳಿತದಲ್ಲಿ ಕ್ರಿಕೆಟ್ ಮಾದರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಆಡಳಿತ ಮತ್ತು ಧನವಿನಿಯೋಗ ಎರಡೂ ಸಮರ್ಪಕವಾಗಿ ನಡೆದರೆ ಮಾತ್ರ ಸುಧಾರಣೆ ಸಾಧ್ಯ. ಕ್ರೀಡೆಯನ್ನು ಬರೀ  ಒಲಿಂಪಿಕ್ಸ್‌ ಪದಕಗಳ ಗಳಿಕೆಯ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಬಾರದು. ಕ್ರೀಡೆಗಳಲ್ಲಿ ತೊಡಗುವುದರಿಂದ ವೈಯಕ್ತಿಕ ಆರೋಗ್ಯವಂತೂ ಸಿಗುತ್ತದೆ. ಆ ಮೂಲಕ ವ್ಯಕ್ತಿಗಳು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಪಾಲ್ಗೋಳ್ಳುತ್ತಾರೆ. ಕ್ರೀಡೆಯು ದೇಶದ ಹೆಮ್ಮೆಯಷ್ಟೇ ಅಲ್ಲ. ಅಭಿವೃದ್ಧಿಯ ಸಾಧನವೂ ಹೌದು ಎಂಬ ಅರಿವು ಮೂಡಬೇಕಿದೆ’ ಎಂದರು.

*
ಕ್ರೀಡೆಯು ಶಾಲೆಯ ಪಠ್ಯದ ಒಂದು ಭಾಗವಾಗಬೇಕು. ಮಕ್ಕಳಿಗೆ ಆಟದ ಬಗ್ಗೆ ಪ್ರೀತಿಯ ಜೊತೆಗೆ ವೃತ್ತಿಯ ಮಾರ್ಗವೂ ಸಿಗಬೇಕು. ಅಲ್ಲದೇ ತಾನೂ ದೊಡ್ಡ ಕ್ರೀಡಾಪಟುವಾಗುವ ಸೌಲಭ್ಯಗಳು ಇವೆ ಎಂಬ ಅರಿವು ಅವರಿಗೆ ಮೂಡಬೇಕು.
– ಸುರೇಶ್ ಮೆನನ್, ಕ್ರೀಡಾ ಲೇಖಕ 

*
ಬಹಳಷ್ಟು ಕ್ರೀಡಾಕೂಟಗಳಿಗೆ ಪ್ರಾಯೋಜಕತ್ವಕ್ಕಾಗಿ ನಮ್ಮ ಬಳಿ ಬರುತ್ತಾರೆ. ಆದರೆ ನಾವು ಪ್ರಚಾರಕ್ಕೆ ಅಷ್ಟೊಂದು ಆಸಕ್ತಿ ತೋರಿಸುವುದಿಲ್ಲ.
-ಜೀತು ವೀರ್ವಾನಿ, ಎಂಬೆಸಿ ಮುಖ್ಯಸ್ಥ

*
ಕ್ರೀಡೆ ಮತ್ತು ಶಿಕ್ಷಣ ಜೊತೆಜೊತೆಗೆ ಸಾಗಬೇಕು. ಅದಕ್ಕಾಗಿ ಶಿಕ್ಷಣ ಕ್ಷೇತ್ರ  ಒತ್ತು ನೀಡಬೇಕು. ಶಾಲಾ ಕ್ರೀಡಾಕೂಟಗಳು ಶಿಸ್ತಿನಿಂದ ನಡೆಯುವಂತಾಗಬೇಕು. ಆಗ ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರುತ್ತವೆ
–ಅಶ್ವಿನಿ ನಾಚಪ್ಪ, ಹಿರಿಯ ಅಥ್ಲೀಟ್

ಪ್ರತಿಕ್ರಿಯಿಸಿ (+)